Asianet Suvarna News Asianet Suvarna News

ಗುಣಮುಖರಾದವರಿಗೆ ಲಸಿಕೆ ಬೇಡ, ಎಲ್ಲರಿಗೂ ವ್ಯಾಕ್ಸಿನ್ ಹಾಕೋದು ನಿಲ್ಲಿಸಿ!

* ಗುಣಮುಖರಾದವರಿಗೆ ಲಸಿಕೆ ಬೇಡ ಎಲ್ಲರಿಗೂ ಲಸಿಕೆ ಹಾಕೋದು ನಿಲ್ಲಿಸಿ

* ರಿಸ್ಕ್‌ ಇರುವವರಿಗೆ ಆದ್ಯತೆ ಕೊಡಬೇಕು: ತಜ್ಞರು

* ಮನಬಂದಂತೆ ಲಸಿಕೆ ಹಾಕುವುದರಿಂದ ರೂಪಾಂತರಿ ಕೊರೋನಾ ಅಬ್ಬರಿಸೀತು

* ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞರಿಂದ ಪ್ರಧಾನಿ ನರೇಂದ್ರ ಮೋದಿಗೆ ವರದಿ

No need to vaccinate people once infected by Covid experts suggest pod
Author
Bangalore, First Published Jun 12, 2021, 8:42 AM IST

ನವದೆಹಲಿ(ಜೂ.12): ಕೊರೋನಾ ಲಸಿಕೆ ಪಡೆಯಲು ದೇಶಾದ್ಯಂತ ಪರದಾಡುವ ಸ್ಥಿತಿ ಇರುವಾಗಲೇ ಸಾಮೂಹಿಕವಾಗಿ, ಮನಬಂದಂತೆ ಹಾಗೂ ಅಪೂರ್ಣ ರೀತಿಯಲ್ಲಿ ಲಸಿಕೆ ವಿತರಣೆ ಮಾಡುವುದರಿಂದ ರೂಪಾಂತರಿ ಕೊರೋನಾದ ಅಬ್ಬರ ಆರಂಭವಾದೀತು ಎಂದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಒಂದಷ್ಟುತಜ್ಞರು ಎಚ್ಚರಿಕೆ ಗಂಟೆ ಮೊಳಗಿಸಿದ್ದಾರೆ.

ದುರ್ಬಲರು ಹಾಗೂ ಅಪಾಯದಂಚಿನಲ್ಲಿರುವವರಿಗೆ ಮೊದಲು ಲಸಿಕೆ ನೀಡುವುದು ನಮ್ಮ ಗುರಿಯಾಗಬೇಕೆ ಹೊರತು ಮಕ್ಕಳೂ ಸೇರಿದಂತೆ ದೇಶದ ಎಲ್ಲ ಜನರಿಗೂ ಲಸಿಕೆ ನೀಡುವುದಲ್ಲ. ಈಗಾಗಲೇ ಕೊರೋನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿರುವವರಿಗೆ ಲಸಿಕೆಯ ಅಗತ್ಯವಿಲ್ಲ ಎಂದೂ ಅವರು ಪ್ರತಿಪಾದಿಸಿದ್ದಾರೆ. ರಾಷ್ಟ್ರೀಯ ಕೊರೋನಾ ಕಾರ್ಯಪಡೆಯ ಸದಸ್ಯರು ಹಾಗೂ ದೆಹಲಿಯ ಏಮ್ಸ್‌ ವೈದ್ಯರು ಸೇರಿದಂತೆ ಸಾರ್ವಜನಿಕ ಆರೋಗ್ಯ ಕ್ಷೇತ್ರದ ವಿವಿಧ ಪರಿಣತರು ಈ ಕುರಿತು ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ರವಾನಿಸಿದ್ದಾರೆ.

ವರದಿಯಲ್ಲೇನಿದೆ?

1. ಸಾಗಣೆ ಹಾಗೂ ಸಾಂಕ್ರಾಮಿಕ ರೋಗ ದತ್ತಾಂಶಗಳ ಮಾರ್ಗದರ್ಶನದೊಂದಿಗೆ ಲಸಿಕೆ ಅಭಿಯಾನ ನಡೆಸಬೇಕು. ಅದು ಬಿಟ್ಟು ಈ ಹಂತದಲ್ಲಿ ಎಲ್ಲರಿಗೂ ಲಸಿಕೆ ನೀಡುವುದು ಸಲ್ಲದು. ಎಲ್ಲ ವಯೋಮಾನದವರಿಗೂ ಲಸಿಕೆ ನೀಡಲು ಆರಂಭಿಸಿದರೆ ಮಾನವ ಹಾಗೂ ಇತರೆ ಸಂಪನ್ಮೂಲಗಳು ವ್ಯರ್ಥವಾಗುತ್ತವೆ. ಮಕ್ಕಳು ಹಾಗೂ ವಯಸ್ಕರಿಗೆ ಲಸಿಕೆ ನೀಡಬೇಕು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಯೋಜಿತವಲ್ಲದ ರೀತಿಯಲ್ಲಿ ಲಸಿಕೆ ನೀಡುವುದು ರೂಪಾಂತರಿ ಕೊರೋನಾಕ್ಕೆ ಎಡೆ ಮಾಡಿಕೊಟ್ಟೀತು.

2. ಕೊರೋನಾದಿಂದ ಗುಣಮುಖರಾದವರಿಗೆ ಲಸಿಕೆಯ ಅಗತ್ಯವಿಲ್ಲ. ಸ್ವಾಭಾವಿಕವಾಗಿ ಸೋಂಕಿತರಾದವರಿಗೆ ಲಸಿಕೆ ಪರಿಣಾಮಕಾರಿ ಎಂಬ ಸಾಕ್ಷ್ಯವನ್ನು ಸಂಗ್ರಹಿಸಿದ ಬಳಿಕವಷ್ಟೇ ಲಸಿಕೆ ನೀಡಬೇಕು. ಡೆಲ್ಟಾದಂತಹ ರೂಪಾಂತರಿ ಕೊರೋನಾ ಸೋಂಕು ಪತ್ತೆಯಾಗಿ ಹೆಚ್ಚು ಹೆಚ್ಚು ಸೋಂಕಿತರು ಕಂಡುಬರುತ್ತಿದ್ದರೆ ಅಂತಹ ಪ್ರದೇಶಗಳಲ್ಲಿ ಕೋವಿಶೀಲ್ಡ್‌ ಎರಡನೇ ಡೋಸ್‌ ಲಸಿಕೆ ಪಡೆಯುವ ಅಂತರವನ್ನು ತಗ್ಗಿಸಬೇಕು.

3. ಕೊರೋನಾ ವೈರಸ್‌ ವಿರುದ್ಧ ಲಸಿಕೆ ಎಂಬುದು ಬಲಿಷ್ಠ ಹಾಗೂ ಶಕ್ತಿಶಾಲಿ ಅಸ್ತ್ರ. ಎಲ್ಲ ಬಲಿಷ್ಠ ಅಸ್ತ್ರಗಳಂತೆಯೇ ಇದನ್ನು ತಡೆಹಿಡಿಯಬಾರದು ಅಥವಾ ಮನಬಂದಂತೆ ಬಳಸಲೂ ಬಾರದು. ಅಗ್ಗದ ದರದಲ್ಲಿ ಗರಿಷ್ಠ ಅನುಕೂಲ ಪಡೆಯಲು ಅತ್ಯಂತ ಯೋಜಿತ ರೀತಿಯಲ್ಲಿ ಈ ಶಸ್ತ್ರ ಉಪಯೋಗಿಸಬೇಕು.

4. ಎಲ್ಲ ವಯಸ್ಕರಿಗೂ ಲಸಿಕೆ ನೀಡಬೇಕು ಎಂಬುದು ಸರಿ. ಆದರೆ ದೇಶದಲ್ಲಿ ಕೊರೋನಾ ಅಬ್ಬರದ ನಡುವೆ ಲಸಿಕೆಯ ಲಭ್ಯತೆ ಕಡಿಮೆ ಇದೆ ಎಂಬುದು ವಾಸ್ತವ. ಇಂತಹ ಸಂದರ್ಭದಲ್ಲಿ ಸಾವು ಕಡಿಮೆ ಮಾಡುವುದು ನಮ್ಮ ಆದ್ಯತೆಯಾಗಬೇಕು. ಸಾವು ಹೆಚ್ಚಾಗಿ ಕಂಡುಬರುತ್ತಿರುವುದು ವಯೋವೃದ್ಧರು ಹಾಗೂ ಪೂರ್ವ ರೋಗ ಹೊಂದಿರುವವರು ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ. ಈಗಿನ ಪರಿಸ್ಥಿತಿಯಲ್ಲಿ ಯುವಕರಿಗೆ ಲಸಿಕೆ ನೀಡುವುದು ಆರ್ಥಿಕ ದೃಷ್ಟಿಯಿಂದಲೂ ಒಳ್ಳೆಯ ನಡೆಯಲ್ಲ.

Follow Us:
Download App:
  • android
  • ios