ನವದೆಹಲಿ(ಅ.25): ದೇಶಾದ್ಯಂತ ಇರುವ 4000ಕ್ಕೂ ಹೆಚ್ಚು ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಇನ್ನು ಮುಂದೆ ವಿದೇಶಿ ಸ್ಕಾಚ್‌ ಸೇರಿದಂತೆ ಯಾವುದೇ ವಿದೇಶಿ ವಸ್ತುಗಳು ಮಾರಾಟಕ್ಕೆ ಇರುವುದಿಲ್ಲ. ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯವು ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ವಿದೇಶಿ ವಸ್ತುಗಳ ಮಾರಾಟ ನಿಷೇಧಿಸಿದೆ. ಗಡಿಯಲ್ಲಿ ತಂಟೆ ತೆಗೆದಿರುವ ಚೀನಾ ವಿರುದ್ಧ ನಡೆಸಲಾದ ಮತ್ತೊಂದು ಪರೋಕ್ಷ ಪ್ರಹಾರ ಇದಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಸೇನೆಯ ಹಾಲಿ ಮತ್ತು ನಿವೃತ್ತ ಯೋಧರ ಕುಟುಂಬಗಳಿಗೆ ಅಗತ್ಯವಾದ ವಸ್ತುಗಳನ್ನು ತೆರಿಗೆ ರಹಿತ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ ಸ್ಕಾಚ್‌ ಸೇರಿದಂತೆ ವಿದೇಶಿ ಮದ್ಯ, ಎಲೆಕ್ಟ್ರಾನಿಕ್‌ ಉತ್ಪನ್ನ ಮತ್ತು ಇತರೆ ವಸ್ತುಗಳು ಹೆಚ್ಚು ಮಾರಾಟವಾಗುತ್ತವೆ.

ಆದರೆ ಇದೀಗ ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ವಿದೇಶದಿಂದ ನೇರವಾಗಿ ಆಮದು ಮಾಡಿಕೊಳ್ಳುವ ಯಾವುದೇ ವಸ್ತುಗಳನ್ನು ಮಾರಾಟ ಮಾಡದಂತೆ ರಕ್ಷಣಾ ಇಲಾಖೆ ಎಲ್ಲಾ 4000 ಮಿಲಿಟರಿ ಕ್ಯಾಂಟೀನ್‌ಗಳಿಗೆ ಆಂತರಿಕ ಸುತ್ತೋಲೆ ರವಾನಿಸಿದೆ ಎಂದು ವರದಿಗಳು ತಿಳಿಸಿವೆ.

ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ವಾರ್ಷಿಕ ಅಂದಾಜು 15000 ಕೋಟಿ ರು. ನಷ್ಟುವಹಿವಾಟು ನಡೆಯುತ್ತದೆ. ಈ ಪೈಕಿ ವಿದೇಶದಿಂದ ಆಮದಾದ ವಸ್ತುಗಳ ಪಾಲು ಶೇ.6-7ರಷ್ಟಿದೆ. ಅಂದರೆ ಅಂದಾಜು 1000 ಕೋಟಿ ರು. ಮೌಲ್ಯದ ಉಪಕರಣಗಳ ಆಮದಿಗೆ ನಿಷೇಧ ಬೀಳಲಿದೆ. ಇದರಲ್ಲಿ ವಿದೇಶಿ ಮದ್ಯದ ಪಾಲು ಅಂದಾಜು 125 ಕೋಟಿ ರು. ಇದೆ. ಹೀಗಾಗಿ ಸರ್ಕಾರದ ಈ ನಿರ್ಧಾರದ ಪ್ರಮುಖ ವಿದೇಶಿ ಸ್ಕಾಚ್‌ ಬ್ರ್ಯಾಂಡ್‌ಗಳಾದ ಪೆರ್ನೋಡ್‌ ಮತ್ತು ಡಿಯಾಜಿಯೋ ಮೊದಲಾದ ಕಂಪನಿಗಳಿಗೆ ಸಾಕಷ್ಟುಹೊಡೆತ ನೀಡಲಿದೆ.

ಇನ್ನು ಚೀನಾ ಮೂಲದ ಕಂಪನಿಗಳ ಎಲೆಕ್ಟ್ರಾನಿಕ್‌ ಉಪಕರಣಗಳು, ಡೈಪರ್‌, ಹ್ಯಾಂಡ್‌ಬ್ಯಾಗ್‌, ಲ್ಯಾಪ್‌ಟಾಪ್‌ ಪ್ರಮುಖವಾಗಿ ಮಾರಾಟವಾಗುವ ಸರಕಾಗಿದ್ದು, ಇವುಗಳ ನಿಷೇಧದಿಂದಾಗಿ ಚೀನಾದ ಮೇಲೆ ಭಾರತ ಮತ್ತೊಂದು ಆರ್ಥಿಕ ಸಮರವನ್ನೂ ಸಾರಿದಂತಾಗಿದೆ.