ನವದೆಹಲಿ(ಸೆ.10): ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ.16ರಷ್ಟು ಮೀಸಲಾತಿ ಕಲ್ಪಿಸುವ 2018ರ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗದವರ ಕಾಯ್ದೆ ಜಾರಿಗೆ ಸುಪ್ರೀಂಕೋರ್ಟ್‌ ತಡೆ ನೀಡಿದೆ. ಅಲ್ಲದೆ, ಮೀಸಲಾತಿ ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ವಿಸ್ತೃತ ಪೀಠ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ಶಿಫಾರಸು ಮಾಡಿದೆ.

ಆದರೆ, ಈಗಾಗಲೇ ಈ ಕಾಯ್ದೆಯಡಿ ಮೀಸಲು ಪಡೆದವರಿಗೆ ಏನೂ ತೊಂದರೆ ಮಾಡುವಂತಿಲ್ಲ ಎಂದು ಸೂಚಿಸಿದೆ. ಮರಾಠ ಸಮುದಾಯಕ್ಕೆ ಮಹಾರಾಷ್ಟ್ರದ ಸರ್ಕಾರಿ ಉದ್ಯೋಗಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ.16ರಷ್ಟುಮೀಸಲು ನೀಡಲು ಮಹಾರಾಷ್ಟ್ರ ಸರ್ಕಾರ ಕಾಯ್ದೆ ಜಾರಿಗೊಳಿಸಿತ್ತು. ಅದರಿಂದ ರಾಜ್ಯದಲ್ಲಿ ಒಟ್ಟಾರೆ ಮೀಸಲಾತಿ ಶೇ.50ನ್ನು ದಾಟುತ್ತಿತ್ತು. ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಳೆದ ವರ್ಷ ಮಹಾರಾಷ್ಟ್ರದ ಹೈಕೋರ್ಟ್‌ ಈ ಕುರಿತು ತೀರ್ಪು ನೀಡಿ ಕಾಯ್ದೆಯನ್ನು ಎತ್ತಿಹಿಡಿದಿತ್ತು.

ಆದರೆ, ಶೇ.16 ಮೀಸಲು ನೀಡುವ ಬದಲು ಉದ್ಯೋಗದಲ್ಲಿ ಶೇ.12 ಮತ್ತು ಶಿಕ್ಷಣದಲ್ಲಿ ಶೇ.13 ಮೀಸಲು ನೀಡಬೇಕೆಂದು ಸೂಚಿಸಿತ್ತು. ಕೆಲ ವಿಶೇಷ ಸಂದರ್ಭಗಳಲ್ಲಿ ಶೇ.50ರ ಮೀಸಲು ಮಿತಿಯನ್ನು ಮೀರಬಹುದು ಎಂದೂ ಹೇಳಿತ್ತು. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.