ಯಾರಿಗೂ ನಾವು ತಲೆಬಾಗಲ್ಲ: ಚೀನಾಕ್ಕೆ ಭಾರತ ಖಡಕ್ ಎಚ್ಚರಿಕೆ
ಗಡಿಯಲ್ಲಿ ತಂಟೆ ಮಾಡುತ್ತಿರುವ ಕುತಂತ್ರಿ ಚೀನಾಗೆ ಭಾರತ ಮತ್ತೊಮ್ಮೆ ಖಡಕ್ ಎಚ್ಚರಿಕೆ ರವಾನಿಸದೆ. ಭಾರತವು ಗಡಿಯಲ್ಲಿ ಕಾವಲು ಕಾಯುವುದನ್ನು ಜಗತ್ತಿನ ಯಾವ ಶಕ್ತಿಯಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಸೆ.18): ಗಡಿಯಲ್ಲಿ ಭಾರತವು ಪಹರೆ ನಡೆಸುವುದನ್ನು ನಿಲ್ಲಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ . ಜತೆಗೆ ನಾವು ಯಾರಿಗೂ ತಲೆಬಾಗಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಗುಡುಗಿದ್ದಾರೆ. ಈ ಮೂಲಕ ಗಡಿಭಾಗದಲ್ಲಿ ಕಿರಿಕಿರಿ ಮಾಡುತ್ತಿರುವ ಚೀನಾಗೆ ಮತ್ತೊಮ್ಮೆ ಎದಿರೇಟು ನೀಡಿದ್ದಾರೆ.
ಗುರುವಾರ ರಾಜ್ಯಸಭೆಯಲ್ಲಿ ಚೀನಾ ಗಡಿಯಲ್ಲಿನ ಪರಿಸ್ಥಿತಿ ಬಗ್ಗೆ ವಿವರ ನೀಡಿದ ಅವರು, ‘ಗಡಿಯಲ್ಲಿ ಭಾರತದ ಸೇನೆ ಅಚಲವಾಗಿ ನಿಂತಿದೆ. ಇದು ಚೀನಾ ಸೇನೆಗೆ ಸಂಕಟ ಉಂಟು ಮಾಡಿದೆ. ಅದಕ್ಕೆಂದೇ ಗಡಿಯಲ್ಲಿ ಅದು ಕಿರಿಕಿರಿ ಆರಂಭಿಸಿದೆ’ ಎಂದು ಹೇಳಿದರು.
ಕಾಂಗ್ರೆಸ್ನ ಎ.ಕೆ. ಆ್ಯಂಟನಿ, ಗುಲಾಂ ನಬಿ ಆಜಾದ್ ಹಾಗೂ ಇತರ ಕೆಲವರು ಚರ್ಚೆ ವೇಳೆ ಮಧ್ಯಪ್ರವೇಶಿಸಿ, ‘ಸಾಂಪ್ರದಾಯಿಕವಾಗಿ ಭಾರತ ಕಾವಲು ಕಾಯುತ್ತಿರುವ ಗಡಿ ಕೇಂದ್ರಗಳಲ್ಲಿ ಚೀನಾ, ನಮ್ಮ ಸೇನೆಗೆ ಗಸ್ತು ತಿರುಗಲು ಬಿಡದೇ ಹಿಂದೆ ಸರಿಸುತ್ತಿದೆ. ಏಪ್ರಿಲ್ನಲ್ಲಿ ಯಾವ ಸ್ಥಿತಿ ಗಡಿಯಲ್ಲಿತ್ತೋ ಅದೇ ಸ್ಥಿತಿ ಈಗಲೂ ಮರುಕಳಿಸಬೇಕು ಎಂಬ ಗೊತ್ತುವಳಿಯನ್ನು ಸದನ ಅಂಗೀಕರಿಸಬೇಕು’ ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ರಾಜನಾಥ್, ‘ಪೂರ್ವ ಲಡಾಖ್ ಗಡಿಯಲ್ಲಿನ ಪಹರೆ ಕೇಂದ್ರಗಳಿಂದ ಭಾರತ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇದರಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ನಮ್ಮದು ಸಾಂಪ್ರದಾಯಿಕ ಹಾಗೂ ವ್ಯವಸ್ಥಿತವಾದ ಗಸ್ತು ಪದ್ಧತಿ ಇದೆ. ಭಾರತವು ಗಡಿಯಲ್ಲಿ ಕಾವಲು ಕಾಯುವುದನ್ನು ಜಗತ್ತಿನ ಯಾವ ಶಕ್ತಿಯಿಂದಲೂ ನಿಲ್ಲಿಸಲು ಸಾಧ್ಯವಿಲ್ಲ’ ಎಂದು ಖಡಕ್ಕಾಗಿ ಹೇಳಿದರು.
‘ಚೀನಾ ಮಾತಾಡೋದೇ ಬೇರೆ, ಮಾಡಿದ್ದೇ ಬೇರೆ. ಒಂದು ಕಡೆ ಸೇನಾ ಮಟ್ಟದಲ್ಲಿ ಚೀನಾ ಜತೆ ಶಾಂತಿ ಸಭೆ ನಡೆದಿತ್ತು. ಅದೇ ವೇಳೆ ಚೀನಾ ಆ.29 ಹಾಗೂ 30ರಂದು ಗಡಿಯಲ್ಲಿ ಸಂಘರ್ಷಕ್ಕೆ ಯತ್ನಿಸಿತು. ಯಥಾಸ್ಥಿತಿ ಬದಲಿಸಲು ಯತ್ನಿಸಿತು. ಆದರೆ ಸಂಯಮ ಹಾಗೂ ಶೌರ್ಯ ತೋರಿದ ಭಾರತದ ಸೇನೆ ಇದಕ್ಕೆ ಅವಕಾಶ ನೀಡದೇ ನಮ್ಮ ಗಡಿ ರಕ್ಷಿಸಿತು’ ಎಂದೂ ರಕ್ಷಣಾ ಸಚಿವರು ವಿವರಿಸಿದರು.
ಗಡಿಯಲ್ಲಿ ಕಿರಿಕ್ ಮಾಡುತ್ತಿರುವ ಚೀನಾದಿಂದ ಮತ್ತೊಂದು 'ದುಷ್ಟ' ಕೃತ್ಯ!
‘ಆದರೆ, ಪರಿಸ್ಥಿತಿ ಬೇರೆಯಾಗಿದ್ದರೂ ಭಾರತ ಶಾಂತಿ ಸಂಧಾನಕ್ಕೆ ಬದ್ಧವಾಗಿದೆ. ಯುದ್ಧ ಆರಂಭಿಸುವುದು ನಮ್ಮ ಕೈಯಲ್ಲಿದೆ. ಆದರೆ ಮುಗಿಸುವುದು ನಮ್ಮ ಕೈಲಿಲ್ಲ. ಶಾಂತಿಯನ್ನು ಕದಡುವ ಯತ್ನ ನಡೆದಿದೆ ಎಂಬುದು ನನಗೆ ಅಚ್ಚರಿ ಮೂಡಿಸಿದೆ. ನಾನು ನಮ್ಮ ದೇಶದ 130 ಕೋಟಿ ಜನರಿಗೆ ಆಶ್ವಾಸನೆ ನೀಡಬಯಸುತ್ತೇನೆ. ನಾವು ಯಾರಿಗೂ ತಲೆಬಾಗಲ್ಲ. ಅಲ್ಲದೆ, ಯಾರೂ ನಮ್ಮ ಮುಂದೆ ತಲೆ ಬಾಗುವಂತೆ ಆಗಬಾರದು ಎಂಬುದೂ ನಮ್ಮ ಉದ್ದೇಶ’ ಎಂದು ಖಡಕ್ ಸ್ವರದಲ್ಲಿ ಹೇಳಿದರು.
ಆದರೆ ‘ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಾಗದು. ಏಕೆಂದರೆ ಇದು ಸೇನೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರ. ಸದನಕ್ಕೆ ಇದು ಅರ್ಥವಾಗುತ್ತದೆ ಎಂದುಕೊಂಡಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.
ಆಗ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರು, ‘ನೀವು ಸದನದಲ್ಲಿನ ನಾಯಕರ ಜತೆ ಪ್ರತ್ಯೇಕ ಸಭೆ ನಡೆಸಿ ಅವರ ಅನುಮಾನ ಪರಿಹರಿಸಬಹುದು’ ಎಂಬ ಸಲಹೆ ನೀಡಿದರು.