'ಸದನದಲ್ಲಿ ಜಯಲಲಿತಾ ಸೀರೆ ಎಳೆದವರು ಇಂದು ದ್ರೌಪದಿ, ಕೌರವರ ಬಗ್ಗೆ ಮಾತನಾಡ್ತಿದ್ದಾರೆ' ಡಿಎಂಕೆಗೆ ಚಾಟಿ ಬೀಸಿದ ನಿರ್ಮಲಾ
ವಿಪಕ್ಷ ನಾಯಕಿಯಾಗಿದ್ದ ಜಯಲಲಿತಾ ಅವರ ಸೀರೆಯನ್ನು ಸದನದಲ್ಲಿಯೇ ಎಳೆದಾಡಿದ್ದ ಪಕ್ಷದ ನಾಯಕರು ಇಂದು ಲೋಕಸಭೆಯಲ್ಲಿ ನಿಂತು ದ್ರೌಪದಿ, ಕೌರವರು, ಮಹಿಳಾ ಭದ್ರತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಡಿಎಂಕೆ ಪಕ್ಷದ ವಿರುದ್ಧ ಚಾಟಿ ಬೀಸಿದ್ದಾರೆ.
ನವದೆಹಲಿ (ಆ.10): ಲೋಕಸಭೆಯಲ್ಲಿ ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ಬಗ್ಗೆ ಕಳೆದ ಮೂರು ದಿನಗಳಿಂದ ಚರ್ಚೆ ನಡೆಯುತ್ತಿದೆ. ಗುರುವಾರ ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಐಎನ್‌ಡಿಐಎ ಮೈತ್ರಿಯ ವಿರುದ್ಧ ವಾಕ್‌ಪ್ರಹಾರ ನಡೆಸಿದ್ದಾರೆ. ಅದರಲ್ಲೂ ಮಣಿಪುರದ ವಿಚಾರವಾಗಿ ಮಾತನಾಡುತ್ತಾ, ಪಾಂಡವರು, ಕೌರವರು, ದ್ರೌಪದಿಯ ಉದಾಹರಣೆ ನೀಡಿದ್ದ ಸಂಸದೆ ಕನಿಮೋಳಿ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಅವರು, ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸೀರೆ ಎಳೆದ ವಿಚಾರವನ್ನು ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿದರು. ಸಂಸದೆ ಕನಿಮೋಳಿ ಮಾತಿಗೆ ನೇರವಾಗಿ ನಿರ್ಮಲಾ ಸೀತಾರಾಮನ್ ಟಾಂಗ್ ನೀಡಿದ್ದಾರೆ. ಸಂಸದೆ ಕನಿಮೋಳಿ ಅವರು ಮಣಿಪುರದ ಬಗ್ಗೆ ಮಾತನಾಡುತ್ತಾ ಪಾಂಡವ, ಕೌರವ, ದ್ರೌಪದಿ ವಿಚಾರ ಪ್ರಸ್ತಾಪಿಸಿದ್ದಾರೆ. ಇದೇ ಡಿಎಂಕೆ ಅಧಿಕಾರದಲ್ಲಿದ್ದಾಗ ಅಂದಿನ ವಿಪಕ್ಷ ನಾಯಕಿ ಜಯಲಲಿತಾ ಸೀರೆಯನ್ನು ವಿಧಾನಸಭೆಯಲ್ಲೇ ಎಳೆದಿದ್ದರು. ಅಂದು ಇಲ್ಲಿ ಕುಳಿತ ಇದೇ ನಾಯಕರು ಹಾಸ್ಯ ಮಾಡಿ ನಕ್ಕಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.
1989ರಲ್ಲಿ ತಮಿಳುನಾಡಿನಲ್ಲಿ ನಡೆದ ವಿಧಾನಸಭೆ ಅಧಿವೇಶನದ ವೇಳೆ ಜಯಲಲಿತಾ ಅವರ ಮೇಲೆ ಡಿಎಂಕೆ ಶಾಸಕರು ಹಲ್ಲೆ ನಡೆಸಿ ಸೀರೆ ಹರಿದಿದ್ದರು. ಅಂದು ಪ್ರತಿಜ್ಞೆ ಮಾಡಿದ್ದ ಜಯಲಲಿತಾ ಇನ್ನು ಈ ಸದನಕ್ಕೆ ಬರೋದಿದ್ದರೆ, ಅದು ಸಿಎಂ ಆಗಿ ಮಾತ್ರ ಎಂದು ಹೇಳಿದ್ದರು. ಅದರಂತೆ 1991ರಲ್ಲಿ ಅವರು ಸಿಎಂ ಆಗಿ ಮರಳಿದ್ದರು.
ಮಣಿಪುರ, ದೆಹಲಿ, ರಾಜಸ್ಥಾನ ಯಾವುದೇ ರಾಜ್ಯದಲ್ಲಿ ಮಹಿಳೆಯರ ಮೇಲೆ ಹಿಂಸೆ ಆದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎನ್ನುವುದನ್ನು ನಾನು ಖಂಡಿತವಾಗಿ ಒಪ್ಪುತ್ತೇನೆ. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು. ಆದರೆ, 1989ರ ಮಾರ್ಚ್ 25 ರಂದು ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಒಂದು ಘಟನೆಯನ್ನು ನಾನು ಈ ಸದನಕ್ಕೆ ನೆನಪಿಸಲು ಪ್ರಯತ್ನ ಮಾಡುತ್ತೇನೆ. ಅಂದು ವಿಪಕ್ಷ ನಾಯಕಿಯಾಗಿದ್ದ ಎಐಡಿಎಂಕೆಯ ಜಯಲಲತಾ ಅವರ ಸೀರೆಯನ್ನು ಡಿಎಂಕೆ ಶಾಸಕರು ಎಳೆದಿದ್ದರು. ಆಕೆಯ ರಕ್ಷಣೆಗೆ ಯಾರೂ ಬಂದಿರಲಿಲ್ಲ. ಡಿಎಂಕೆ ಸದಸ್ಯರು ಆಕೆಯನ್ನು ನೋಡಿ ಹಾಸ್ಯ ಮಾಡುತ್ತಾ ನಕ್ಕಿದ್ದರು. ಈಗ ಅದೇ ಜಯಲಲಿತಾ ಅವರನ್ನು ಡಿಎಂಕೆ ಮರೆತುಹೋಗಿದೆಯೇ? ನೀವು ಆಕೆಯ ಸೀರೆಯನ್ನು ಎಳೆದಿದ್ದೀರಿ. ಆಕೆಯನ್ನು ಕೀಳಾಗಿ ಕಂಡಿದ್ದೀರಿ. ಅಂದು ಜಯಲಲಿತಾ ಸಿಎಂ ಆಗದ ಹೊರತು ಮತ್ತೆ ಈ ಸದನಕ್ಕೆ ಬರೋದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಎರಡು ವರ್ಷದ ಬಳಿಕ ಆಕೆ ತಮಿಳುನಾಡು ಸಿಎಂ ಆಗಿ ಮರಳಿದರು. ಹರಿದ ಸೀರೆಯಲ್ಲಿ ದಿಗ್ಭ್ರಮೆಗೊಂಡ ಜಯಲಲಿತಾ ಅವರ ಐತಿಹಾಸಿಕ ಛಾಯಾಚಿತ್ರವು ಭಾರಿ ಸಾರ್ವಜನಿಕ ಸಹಾನುಭೂತಿಯನ್ನು ಗಳಿಸಿತು ಮತ್ತು 1991 ರಲ್ಲಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದರು.
Watch: ಲೋಕಸಭೆಯಲ್ಲೇ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಿದ ರಾಹುಲ್ ಗಾಂಧಿ!
1989 ರ ತಮಿಳುನಾಡು ಅಸೆಂಬ್ಲಿ ಘಟನೆ: 1989 ಮಾರ್ಚ್ 25 ರಂದು ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಜಯಲಲಿತಾ ಅವರು ಆಡಳಿತ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಂದಿನ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ಜಯಲಲಿತಾ ಅವರ ಸೀರೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಕರುಣಾನಿಧಿ ಮಾಡಿರುವ ಆ ಕಾಮೆಂಟ್ ಜಯಲಿಲಿತಾ ಮೇಲಿನ ವೈಯಕ್ತಿಕ ದಾಳಿ ಎಂದು ಈಗಲೂ ಗ್ರಹಿಸಲ್ಪಟ್ಟಿದೆ. ಈ ಕಾಮೆಂಟ್ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು ಮತ್ತು ಜಯಲಲಿತಾ ಮಹಡಿಯಿಂದ ನಿರ್ಗಮಿಸಲು ಹೊರನಡೆಯುತ್ತಿದ್ದಂತೆ, ಕೆಲವು ಡಿಎಂಕೆ ಶಾಸಕರು ಅವರ ಕಡೆಗೆ ಧಾವಿಸಿ ಸೀರೆಯನ್ನು ಎಳೆದಿದ್ದರು.
ಮಲ್ಲಿಕಾರ್ಜುನ್ ಖರ್ಗೆ ಬಳಿಕ ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಿದ ರಾಹುಲ್ ಗಾಂಧಿ!
ಲೋಕಸಭೆ ವಿಪಕ್ಷ ನಾಯಕನಿಗೆ ಮೋದಿ ಗೌರವ: ಸಂಸತ್ ಕಲಾಪದಲ್ಲಿ ಇಲ್ಲಿಯವರೆಗೂ ಹಾಜರಾಗದೇ ಇದ್ದ ಪ್ರಧಾನಿ ನರೇಂದ್ರ ಮೋದಿ, ಗುರುವಾರ ಲೋಕಸಭೆಗೆ ಹಾಜರಾದರು. ಅದಕ್ಕೆ ಕಾರಣ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಮಾತು. ವಿರೋಧ ಪಕ್ಷದ ನಾಯಕರು ಲೋಕಸಭೆಯಲ್ಲಿ ಮಾತನಾಡುವುದು ಗೊತ್ತಾದ ಬಳಿಕ ಪ್ರಧಾನಿ ಮೋದಿ, ಸಂಸತ್‌ಗೆ ಆಗಮಿಸಿದರು. ಆ ಮೂಲಕ ಸಾಂವಿಧಾನಿಕ ಹುದ್ದೆಗೆ ಮೋದಿ ತೋರುವ ಗೌರವ ಎದ್ದು ಕಂಡಿದೆ.