ನವದೆಹಲಿ[ಡಿ.09]: ಗಲ್ಲು ಶಿಕ್ಷೆಯಿಂದ ಕ್ಷಮೆ ಕೋರಿ ನಿರ್ಭಯಾ ಪ್ರಕರಣದ ದೋಷಿ ವಿನಯ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದ ಬೆನ್ನಲ್ಲೇ, ದೆಹಲಿಯ ತಿಹಾರ್‌ ಜೈಲಿನ ಅಧಿಕಾರಿಗಳು, ಗಲ್ಲು ಶಿಕ್ಷೆ ಜಾರಿಗೊಳಿಸುವ ವ್ಯಕ್ತಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಸದ್ಯ ತಿಹಾರ್‌ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿಗೊಳಿಸುವ ಯಾವುದೇ ಅರ್ಹ ವ್ಯಕ್ತಿ ಅಥವಾ ಅಧಿಕಾರಿ ಇಲ್ಲದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಜೈಲು ಅಧಿಕಾರಿಗಳ ಜೊತೆ ತಿಹಾರ್‌ ಜೈಲಿನ ಅಧಿಕಾರಿಗಳು ಮಾತುಕತೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ನಿರ್ಭಯಾ ಪ್ರಕರಣದ ನಾಲ್ವರು ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಸಮಯ ಸನ್ನಿಹಿತವಾಗಿದೆ ಎಂಬುದರ ಸುಳಿವಾಗಿದೆ ಎನ್ನಲಾಗಿದೆ.

2001ರಲ್ಲಿ ನಡೆದ ಸಂಸತ ಮೇಲಿನ ದಾಳಿ ಪ್ರಕರಣದ ದೋಷಿ ಅಫ್ಜಲ್‌ ಗುರುಗೆ 2013ರ ಫೆಬ್ರುವರಿ ತಿಂಗಳಲ್ಲಿ ತಿಹಾರ್‌ ಜೈಲಿನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ತಿಹಾರ್‌ ಜೈಲಿನ ಸಿಬ್ಬಂದಿಯೊಬ್ಬರೇ ಈ ಕೆಲಸ ನೆರವೇಸಿದ್ದರು. ಆ ಬಳಿಕ ಯಾರನ್ನೂ ಗಲ್ಲಿಗೆ ಏರಿಸಿಲ್ಲ.