Asianet Suvarna News Asianet Suvarna News

ಗಲ್ಲು ತಡೆಗೆ ನಿರ್ಭಯಾ ರೇಪಿಸ್ಟ್‌ಗಳ ಶತ ಪ್ರಯತ್ನ!

ಗಲ್ಲು ತಡೆಗೆ ನಿರ್ಭಯಾ ರೇಪಿಸ್ಟ್‌ಗಳ ಶತಪ್ರಯತ್ನ| ಡೆತ್‌ ವಾರಂಟ್‌ ತಡೆಗೆ ದಿಲ್ಲಿ ಹೈಕೋರ್ಟ್‌ ನಕಾರ| ಹೀಗಾಗಿ, ಸೆಷನ್ಸ್‌ ಕೋರ್ಟ್‌ಗೆ ರೇಪಿಸ್ಟ್‌ ಮೊರೆ

Nirbhaya case Delhi High Court dismisses convict plea challenging death warrant
Author
Bangalore, First Published Jan 16, 2020, 7:44 AM IST

ನವದೆಹಲಿ[ಜ.16]:  ನೇಣುಗಂಬಕ್ಕೇರಲು ದಿನಗಳನ್ನು ಎಣಿಸುತ್ತಿರುವ ದೆಹಲಿ ‘ನಿರ್ಭಯಾ’ ಸಾಮೂಹಿಕ ಅತ್ಯಾಚಾರ ಹಾಗೂ ಅಮಾನುಷ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳು ಗಲ್ಲು ಶಿಕ್ಷೆಯನ್ನು ಮುಂದೂಡಲು ಇಲ್ಲವೇ ತಪ್ಪಿಸಿಕೊಳ್ಳಲು ತಮ್ಮ ಶತಪ್ರಯತ್ನ ಮುಂದುವರೆಸಿದ್ದಾರೆ. ಡೆತ್‌ ವಾರಂಟ್‌ ರದ್ದುಪಡಿಸಬೇಕು ಎಂದು ಕೋರಿ ಮುಕೇಶ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ದೆಹಲಿ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ. ಅದರ ಬೆನ್ನಲ್ಲೇ, ಮುಕೇಶ್‌ ದೆಹಲಿ ಸೆಷನ್ಸ್‌ ಕೋರ್ಟ್‌ನಲ್ಲಿ ವಾರಂಟ್‌ ರದ್ದು ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾನೆ.

ಮುಕೇಶ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ಗುರುವಾರವೇ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಗುರುವಾರ ಸೆಷನ್ಸ್‌ ಕೋರ್ಟ್‌ನ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ನಡುವೆ, ವಿನಯ್‌ ಶರ್ಮಾನ ಕ್ಯುರೇಟಿವ್‌ ಅರ್ಜಿಯೂ ಮಂಗಳವಾರವೇ ತಿರಸ್ಕಾರಗೊಂಡಿದೆ. ಆತ ಕೂಡ ಡೆತ್‌ ವಾರಂಟ್‌ ಪ್ರಶ್ನಿಸಿ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಮತ್ತಿಬ್ಬರು ಆರೋಪಿಗಳಾದ ಪವನ್‌ ಗುಪ್ತಾ, ಅಕ್ಷಯಕುಮಾರ್‌ ಸಿಂಗ್‌ ಕ್ಯುರೇಟಿವ್‌ ಅರ್ಜಿ ಅಸ್ತ್ರ ಪ್ರಯೋಗಿಸುವ ಸಾಧ್ಯತೆ ಕಂಡುಬರುತ್ತಿದೆ. ಇದು ಶಿಕ್ಷೆ ಜಾರಿಯನ್ನು ಮುಂದೂಡಲು ದೋಷಿಗಳು ನಡೆಸಿರುವ ಶತಪ್ರಯತ್ನವೆಂದೇ ವಿಶ್ಲೇಷಿಸಲಾಗಿದೆ.

ನಿರ್ಭಯಾ ದೋಷಿಗಳಿಗೆ ತಾತ್ಕಾಲಿಕ ಜೀವದಾನ: ಜ.22ರಂದು ಗಲ್ಲು ಜಾರಿ ಇಲ್ಲ!

ಈ ನಡುವೆ ಮುಕೇಶ್‌ ಅರ್ಜಿ ವಿಚಾರಣೆ ವೇಳೆ ಬುಧವಾರ ದೆಹಲಿ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ದೆಹಲಿ ಸರ್ಕಾರದ ಪರ ವಕೀಲರು, ‘ಕ್ಷಮಾದಾನ ಅರ್ಜಿ ಇತ್ಯರ್ಥವಾಗುವವರೆಗೂ ಡೆತ್‌ ವಾರಂಟ್‌ ಜಾರಿಗೊಳಿಸಲಾಗುವುದಿಲ್ಲ. ಕ್ಷಮಾದಾನ ಅರ್ಜಿ ಇತ್ಯರ್ಥವಾಗದ ಹೊರತು ನಾಲ್ವರ ಪೈಕಿ ಒಬ್ಬರನ್ನೂ ಗಲ್ಲಿಗೇರಿಸಲು ಬರುವುದಿಲ್ಲ. ಮುಕೇಶ್‌ ಈಗಾಗಲೇ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಇತರೆ ಅಪರಾಧಿಗಳೂ ಆ ಅವಕಾಶ ಬಳಸಿಕೊಳ್ಳುವವರೆಗೂ ಕಾಯಲಾಗುತ್ತದೆ ಎಂದು ಹೇಳಿದರು. ಹೀಗಾಗಿ ಜ.22ರಂದು ನಡೆಯಬೇಕಿರುವ ಗಲ್ಲು ಶಿಕ್ಷೆ ಜಾರಿಯ ಬಗ್ಗೆ ಸಾಕಷ್ಟುಅನುಮಾನಗಳು ಹುಟ್ಟಿಕೊಂಡಿವೆ.

ವಿಚಾರಣೆ ಇಲ್ಲ:

ತಾನು ಈಗಾಗಲೇ ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇನೆ. ಹೀಗಾಗಿ ಅರ್ಜಿ ಇತ್ಯರ್ಥವಾಗುವವರೆಗೂ ಡೆತ್‌ ವಾರಂಟ್‌ಗೆ ತಡೆ ನೀಡಬೇಕು ಎಂದು ಮುಕೇಶ್‌ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಆದರೆ ಬುಧವಾರ ಈ ಅರ್ಜಿ ವಿಚಾರಣೆಗೆ ನಿರಾಕರಿಸಿದ ಹೈಕೋರ್ಟ್‌, ನೀವು ಸೆಷನ್ಸ್‌ ಇಲ್ಲವೇ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿ ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿತು.

ಇದಾದ ಬೆನ್ನಲ್ಲೇ ಮುಕೇಶ್‌ ಪರ ವಕೀಲರು ದೆಹಲಿ ಸೆಷನ್ಸ್‌ ಕೋರ್ಟ್‌ಗೆ ಡೆತ್‌ ವಾರಂಟ್‌ ರದ್ದು ಕೋರಿ ಬುಧವಾರವೇ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ದೆಹಲಿ ಕೋರ್ಟ್‌, ದೆಹಲಿ ಸರ್ಕಾರ ಮತ್ತು ನಿರ್ಭಯಾ ಪೋಷಕರಿಗೆ ನೋಟಿಸ್‌ ಜಾರಿ ಮಾಡಿ ಗುರುವಾರ ವಿಚಾರಣೆಗೆ ನಿರ್ಧರಿಸಿದೆ.

ನಿರ್ಭಯಾ ರೇಪಿಸ್ಟ್‌ ನೇಣಿಗೇರಿಸುವ ಮೇರಠ್‌ನ ಪವನ್‌ ಸಂಭಾವನೆ?

22ಕ್ಕೆ ಗಲ್ಲು ಆಗಲ್ಲ: ದೆಹಲಿ ಸರ್ಕಾರ

ನವದೆಹಲಿ: ನಿರ್ಭಯಾ ಅತ್ಯಾಚಾರಿಗಳ ಕ್ಷಮಾದಾನ ಅರ್ಜಿ ಇತ್ಯರ್ಥ ಬಾಕಿ ಇದ್ದು, ಒಂದು ವೇಳೆ ತಿರಸ್ಕೃತಗೊಂಡರೂ 14 ದಿನಗಳ ಕಾಲಾವಕಾಶ ನೀಡಬೇಕಿರುವುದರಿಂದ ಜ.22ಕ್ಕೆ ಅವರಿಗೆ ಗಲ್ಲು ಶಿಕ್ಷೆ ಜಾರಿ ಆಗದು ಎಂದು ದಿಲ್ಲಿ ಹೈಕೋರ್ಟ್‌ಗೆ ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.

Follow Us:
Download App:
  • android
  • ios