ಆರ್ಥಿಕ ಪ್ರಗತಿಗೆ ಶಾಸಕಾಂಗದ ನಾಯಕತ್ವ ಅಗತ್ಯ,ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯ, ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಕ್ರೀಯ ಪಾಲ್ಗೊಳ್ಳುವಿಕೆ ಕುರಿತು ಆರ್ಥಿಕ ಸಲಹೆಗಾರ ಕಿವಿಮಾತು ಹೇಳಿದ್ದಾರೆ. 

ನವದೆಹಲಿ (ಜ.25): ಭಾರತವು ಆರ್ಥಿಕವಾಗಿ ವೇಗವಾಗಿ ಮುನ್ನಡೆಯಲು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯ ಹಾಗೂ ಸಾಂಸ್ಥಿಕ ಸನ್ನದ್ಧತೆ ಅತ್ಯಗತ್ಯ ಎಂದು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಡಾ. ವಿ. ಅನಂತ ನಾಗೇಶ್ವರನ್ ಹೇಳಿದ್ದಾರೆ. ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ 'ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಸೆಂಟರ್' (NFPRC) ಆಯೋಜಿಸಿದ್ದ ಭಾರತದ ಬೆಳವಣಿಗೆಯ ವೇಗವರ್ಧನೆ, ವಿಕ್ಷಿತ್ ಭಾರತ್ @2047 ಕಾರ್ಯಕ್ರಮದಲ್ಲಿ ಸಂಸದರು ಹಾಗೂ ಶಾಸಕರ ಪಾತ್ರ ಕಾರ್ಯಗಾರದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಾರ್ಯಾಗಾರದ ಪ್ರಮುಖ ಅಂಶಗಳು:

ಶಾಸಕರ ಪಾತ್ರ: ದೇಶದ ಆರ್ಥಿಕತೆಯನ್ನು ಉನ್ನತ ಮಟ್ಟಕ್ಕೇರಿಸಲು ಮತ್ತು ಸರ್ಕಾರದ ವಿವಿಧ ಹಂತಗಳಲ್ಲಿ ಸಾಂಸ್ಥಿಕ ಏಕರೂಪತೆಯನ್ನು ತರಲು ಶಾಸಕಾಂಗ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಡಾ. ನಾಗೇಶ್ವರನ್ ಒತ್ತಿಹೇಳಿದರು.

ಅನುಷ್ಠಾನದ ಪರಿಣಾಮ: ಸರ್ಕಾರದ ಪ್ರಮುಖ ಯೋಜನೆಗಳಾದ 'ಪಿಎಂ ಸ್ವನಿಧಿ' (PM SVANidhi) ಮತ್ತು 'ಜಲಜೀವನ್ ಮಿಷನ್'ಗಳ ಯಶಸ್ವಿ ಅನುಷ್ಠಾನದ ಬಗ್ಗೆ ತಾಂತ್ರಿಕ ಗೋಷ್ಠಿಗಳು ನಡೆದವು. ಶಾಸಕರ ಸಕ್ರಿಯ ಪಾಲ್ಗೊಳ್ಳುವಿಕೆಯು ಹೇಗೆ ನೀತಿಗಳನ್ನು ತಳಮಟ್ಟದ ಜನರಿಗೆ ತಲುಪಿಸಬಹುದು ಎಂಬುದನ್ನು ಇಲ್ಲಿ ವಿವರಿಸಲಾಯಿತು.

ಆರ್ಥಿಕ ನೋಟ: ಭಾರತದ ಆರ್ಥಿಕ ಸಾಮರ್ಥ್ಯಗಳು, ಸವಾಲುಗಳು ಮತ್ತು ಅವಕಾಶಗಳ ಕುರಿತು ಮ್ಯಾಕ್ರೋ-ಎಕನಾಮಿಕ್ ದೃಷ್ಟಿಕೋನದಿಂದ ಚರ್ಚೆಗಳು ನಡೆದವು. "ಶಾಸಕಾಂಗದ ಬೆಂಬಲ ಮತ್ತು ಸಂಶೋಧನಾ ಆಧಾರಿತ ಸಂವಾದಗಳು ಆಡಳಿತದ ದಕ್ಷತೆಯನ್ನು ಹೆಚ್ಚಿಸುವುದಲ್ಲದೆ, ಭಾರತದ ಬೆಳವಣಿಗೆಯ ಪಥವನ್ನು ಬಲಪಡಿಸುತ್ತವೆ ಎಂದು NFPRC ಅಭಿಮತ ವ್ಯಕ್ತಪಡಿಸಿದೆ.

ಗಣ್ಯರ ಉಪಸ್ಥಿತಿ:

NFPRC ಫೌಂಡೇಶನ್ ಅಧ್ಯಕ್ಷರಾದ ತರುಣ್ ಚುಗ್ ಮತ್ತು ಮಂಡಳಿ ಸದಸ್ಯರಾದ ಅಭಿನವ್ ಪ್ರಕಾಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಐಎಸ್‌ಬಿಯ ರಾಜ ಬುಜ್ನೂರಿ, ಮಣಿ ಭೂಷಣ್ ಝಾ ಮತ್ತು ಎಫ್‌ಇಡಿ ನಿರ್ದೇಶಕ ರಾಹುಲ್ ಅಹ್ಲುವಾಲಿಯಾ ಅವರು ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.

NFPRC ಬಗ್ಗೆ:

ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಸೆಂಟರ್ (NFPRC) ದೆಹಲಿ ಮೂಲದ ಸಾರ್ವಜನಿಕ ನೀತಿ ಸಂಶೋಧನಾ ಸಂಸ್ಥೆಯಾಗಿದ್ದು, ಸಾಕ್ಷ್ಯಾಧಾರಿತ ಸಂಶೋಧನೆ ಮತ್ತು ಶಾಸಕಾಂಗದ ಶಕ್ತಿಯನ್ನು ಹೆಚ್ಚಿಸುವ ಮೂಲಕ ಭಾರತದ ಆಡಳಿತವನ್ನು ಬಲಪಡಿಸುವ ಕೆಲಸ ಮಾಡುತ್ತಿದೆ.