ತಿರುವನಂತಪುರಂ(ಮಾ.25): ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಪ್ರಸಿದ್ಧ ಶಬರಿಮಲೆ ದೇಗುಲದ ಪಾವಿತ್ರ್ಯ ರಕ್ಷಿಸಲು ಕಾಯ್ದೆ ರೂಪಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಜೊತೆಗೆ, ಪ್ರತಿ ಕುಟುಂಬದ ಒಬ್ಬರಿಗೆ ಉದ್ಯೋಗ, ಲವ್‌ ಜಿಹಾದ್‌ ವಿರುದ್ಧ ಕಾಯ್ದೆ, ಸಾಮಾಜಿಕ ಪಿಂಚಣಿ ತಿಂಗಳಿಗೆ 3500 ರು.ಗೆ ಏರಿಕೆ ಮುಂತಾದ ಭರವಸೆಗಳನ್ನೂ ನೀಡಿದೆ.

ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಸ್ತ್ರೀಯರ ಪ್ರವೇಶಕ್ಕೆ ಅನುಮತಿ ನೀಡಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ ನಂತರ ನಡೆದ ಬೆಳವಣಿಗೆಗಳಿಂದಾಗಿ ಕೇರಳದಲ್ಲಿ ನೆಲೆ ಭದ್ರಪಡಿಸಿಕೊಳ್ಳುತ್ತಿರುವ ಬಿಜೆಪಿ ಈಗ ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ಆ ಅಂಶವನ್ನು ಸೇರಿಸಿದೆ. ಶಬರಿಮಲೆಗೆ ಸಂಬಂಧಿಸಿದಂತೆ ಅಲ್ಲಿನ ನಂಬಿಕೆ ಹಾಗೂ ಸಂಪ್ರದಾಯಗಳಿಗೇ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ದೇವಾಲಯದ ಆಡಳಿತವನ್ನು ರಾಜಕೀಯ ಹಿಡಿತದಿಂದ ಮುಕ್ತಗೊಳಿಸಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಬುಧವಾರ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಬಿಜೆಪಿಯ ಕೇರಳ ಚುನಾವಣಾ ಪ್ರಣಾಳಿಕೆಯಲ್ಲಿರುವ ಇತರ ಪ್ರಮುಖ ಅಂಶಗಳು:

- ಎಲ್ಲರಿಗೂ ಮನೆ, ನೀರು ಮತ್ತು ವಿದ್ಯುತ್‌

- ಮನೆಯ ಯಜಮಾನ ರೋಗಪೀಡಿತನಾಗಿದ್ದರೆ ಮಾಸಿಕ 5000 ರು. ಪಿಂಚಣಿ

- ಎಲ್ಲಾ ಬಿಪಿಎಲ್‌ ಕುಟುಂಬಕ್ಕೆ 6 ಉಚಿತ ಎಲ್‌ಪಿಜಿ ಸಿಲಿಂಡರ್‌

- ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌

- ಭೂರಹಿತ ಎಸ್‌ಸಿ/ಎಸ್‌ಟಿ ಕುಟುಂಬಗಳಿಗೆ ತಲಾ 5 ಎಕರೆ ಕೃಷಿ ಭೂಮಿ

- ಎಲ್ಲಾ ಉದ್ಯೋಗಗಳಿಗೆ ಕನಿಷ್ಠ ವೇತನ ನಿಗದಿ

- ಹಸಿವುಮುಕ್ತ, ಭಯೋತ್ಪಾದನೆಮುಕ್ತ, ರಾಜಕೀಯ ಹತ್ಯೆಮುಕ್ತ ಕೇರಳ ನಿರ್ಮಾಣ