ನವದೆಹಲಿ(ಅ.21): ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಕೃಷಿ ಕಾಯ್ದೆಗಳು ವಿವಾದಕ್ಕೀಡಾಗಿರುವಾಗಲೇ ಕುತೂಹಲಕಾರಿ ಮಾಹಿತಿಯೊಂದು ಲಭಿಸಿದೆ. ಕಾಯ್ದೆಯನ್ನು ಶೇ.52ರಷ್ಟುರೈತರು ವಿರೋಧಿಸುತ್ತಿದ್ದು, ಆ ಪೈಕಿ ಶೇ.36ರಷ್ಟುಮಂದಿಗೆ ಕಾಯ್ದೆಯಲ್ಲಿನ ವಿವರಗಳೇ ತಿಳಿದಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಇದೇ ವೇಳೆ, ಸಮೀಕ್ಷೆಯಲ್ಲಿ ಶೇ.35 ಮಂದಿ ಕಾಯ್ದೆಯನ್ನು ಬೆಂಬಲಿಸಿದ್ದು, ಆ ಪೈಕಿ ಶೇ.18ರಷ್ಟುಮಂದಿಗೆ ಕಾಯ್ದೆ ವಿವರಗಳು ಗೊತ್ತಿಲ್ಲ ಎಂದು ಗಾಂವ್‌ ಕನೆಕ್ಷನ್‌ ಎಂಬ ಸಂಸ್ಥೆಯ ಸಮೀಕ್ಷೆ ತಿಳಿಸಿದೆ.

ಅ.3ರಿಂದ ಅ.9ರವರೆಗೆ ದೇಶದ 16 ರಾಜ್ಯಗಳ 53 ಜಿಲ್ಲೆಗಳಲ್ಲಿ ಮುಖಾಮುಖಿ ಮಾತನಾಡಿಸಿ ಈ ಸಮೀಕ್ಷೆ ನಡೆಸಲಾಗಿದೆ. 5022 ರೈತರನ್ನು ಸಂದರ್ಶಿಸಲಾಗಿದೆ ಎಂದು ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.

‘ಹೊಸ ಕೃಷಿ ಕಾನೂನುಗಳ ಕುರಿತು ಭಾರತೀಯ ರೈತರ ಪರಿಕಲ್ಪನೆ’ ಎಂಬ ಹೆಸರಿನ ಸಮೀಕ್ಷೆ ಇದಾಗಿದೆ. ಸಮೀಕ್ಷೆಯಲ್ಲಿ ಭಾಗಿಯಾದ ಶೇ.57 ಮಂದಿ ತಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ ಎಂಬ ಆತಂಕ ಹೊಂದಿದ್ದಾರೆ. ಶೇ.33ರಷ್ಟುಮಂದಿ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಸರ್ಕಾರ ಅಂತ್ಯಗೊಳಿಸಲಿದೆ ಎಂದು ಭೀತಿ ಹೊಂದಿದ್ದಾರೆ ಎಂದು ತಿಳಿಸಿದೆ.