ನಾಸಿಕ್‌ನಲ್ಲಿ ಮಾರುಕಟ್ಟೆಗೆ ತೆರಳಲು ಗಂಟೆಗೆ 5 ರು. ಶುಲ್ಕ| 1 ಗಂಟೆಯ ಗಡುವು ಮೀರಿದರೆ 500 ರು. ದಂಡ
ನಾಸಿಕ್(ಮಾ.31): ಕೊರೋನಾ ವೈರಸ್ ಪ್ರಕರಣಗಳು ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಗೆ ಓಡಾಡುವುದನ್ನು ತಪ್ಪಿಸಲು ಮಹಾರಾಷ್ಟ್ರದ ನಾಸಿಕ್ ಜಿಲ್ಲಾಡಳಿತವು ಹೊಸದಾದ ‘5 ರು. ಶುಲ್ಕ ಹಾಗೂ 500 ರು. ದಂಡ’ದ ವಿಶಿಷ್ಟನಿಯಮಾವಳಿಯನ್ನು ರೂಪಿಸಿದೆ.
ನೂತನ ನಿಯಮದ ಪ್ರಕಾರ ಮಾರುಕಟ್ಟೆಗೆ ಪ್ರವೇಶಿಸುವ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಲಾಗಿದ್ದು, ಬ್ಯಾರಿಕೇಡ್ ಅಳವಡಿಸಲಾಗಿದೆ. ಪ್ರತಿ ಬಾರಿ ಜನರು ಮಾರುಕಟ್ಟೆಯನ್ನು ಪ್ರವೇಶಿಸುವಾಗಲೂ ತಲಾ 5 ರು. ಶುಲ್ಕವನ್ನು ಪಾವತಿಸಿ ರಸೀದಿ ಪಡೆಯಬೇಕು. ಬಳಿಕ 1 ಗಂಟೆಯ ಅವಧಿಗೆ ಮಾರುಕಟ್ಟೆಗೆ ತೆರಳಲು ಅನುಮತಿಯನ್ನು ನೀಡಲಾಗುತ್ತದೆ.
ಒಂದು ವೇಳೆ 1 ಗಂಟೆಯ ಗಡುವು ಮೀರಿದರೆ 500 ರು. ದಂಡ ವಿಧಿಸಲಾಗುತ್ತದೆ. ಜನರಿಂದ ಸಂಗ್ರಹಿಸಲಾದ ಶುಲ್ಕವನ್ನ ನಾಸಿಕ್ ಮಹಾನಗರ ಪಾಲಿಕೆಯು ಕೊರೋನಾ ನಿಯಂತ್ರಣ ಕ್ರಮಗಳಿಗಾಗಿ ಬಳಕೆ ಮಾಡಲಿದೆ.
