Asianet Suvarna News Asianet Suvarna News

ಎನ್‌ಪಿಎಸ್‌ ವಿರೋಧಕ್ಕೆ ಮಣಿದ ಮೋದಿ ಸರ್ಕಾರ: ಹೊಸ ಯೋಜನೆಯಲ್ಲಿ 50% ಪಿಂಚಣಿ ಖಚಿತ..!

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಅನುಮೋದನೆ ನೀಡಿದೆ. ಇದರಿಂದ ಕೇಂದ್ರ ಸರ್ಕಾರದ ನೌಕರರಿಗೆ ಮೂಲ ವೇತನದ ಶೇ.50ರಷ್ಟು ಖಚಿತವಾದ ಪಿಂಚಣಿ ಲಭಿಸಲಿದ್ದು, 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ವರದಾನವಾಗಲಿದೆ.
 

narendra modi government approves unified pension scheme grg
Author
First Published Aug 25, 2024, 7:09 AM IST | Last Updated Aug 25, 2024, 7:09 AM IST

ನವದೆಹಲಿ(ಆ.25):  ಹಳೇ ಪಿಂಚಣಿ ಯೋಜನೆ (ಒಪಿಎಸ್) ರದ್ದಾಗಿ ಜಾರಿಗೆ ಬಂದಿದ್ದ ಹೊಸ ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್‌ಪಿಎಸ್‌) ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪಿಂಚಣಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಅನುಮೋದನೆ ನೀಡಿದೆ. ಇದರಿಂದ ಕೇಂದ್ರ ಸರ್ಕಾರದ ನೌಕರರಿಗೆ ಮೂಲ ವೇತನದ ಶೇ.50ರಷ್ಟು ಖಚಿತವಾದ ಪಿಂಚಣಿ ಲಭಿಸಲಿದ್ದು, 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ವರದಾನವಾಗಲಿದೆ.

ಇದೇ ವೇಳೆ, ರಾಜ್ಯ ಸರ್ಕಾರಗಳಿಗೆ ಏಕೀಕೃತ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರಗಳು ಯುಪಿಎಸ್ ಆಯ್ಕೆ ಮಾಡಿಕೊಂಡರೆ, ಫಲಾನುಭವಿಗಳ ಸಂಖ್ಯೆ ಸುಮಾರು 90 ಲಕ್ಷಕ್ಕೆ ಏರಲಿದೆ.

EPFO ತನ್ನ ಸದಸ್ಯರಿಗೆ ನೀಡುವ 7 ಬಗೆಯ ಮಾಸಿಕ ಪಿಂಚಣಿ ಯೋಜನೆಗಳ ಲಿಸ್ಟ್‌, ಇವುಗಳ ಬಗ್ಗೆ ನಿಮಗೆ ಗೊತ್ತಿರಲಿ..

2004ರ ಏ.1ರಿಂದ ನಿವೃತ್ತಿ ಆದ ಹಾಗೂ 2025ರ ಮಾ.31ರವರೆಗೆ ನಿವೃತ್ತಿ ಆಗಲಿರುವ ಎಲ್ಲರಿಗೂ ಇದು ಪೂರ್ವಾನ್ವಯ ಆಗುವಂತೆ 2025ರ ಏ.1ರಿಂದ ಯೋಜನೆ ಜಾರಿಗೆ ಬರಲಿದೆ. ಇದರಿಂದ 800 ಕೋಟಿ ರು. ಹಿಂಬಾಕಿಗಾಗಿ ವೆಚ್ಚ ಆಗಲಿದೆ. ಹೊಸ ಪಿಂಚಣಿ ಯೋಜನೆಯಿಂದ ಸರ್ಕಾರಕ್ಕೆ ಪ್ರತಿ ವರ್ಷ ಸುಮಾರು 6,250 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ.

2 ಆಯ್ಕೆ:

ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಅನ್ವಯ ಆಗುತ್ತಿದೆ. ಈಗ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್‌) ಜಾರಿಗೆ ತಂದಿರುವ ಕಾರಣ ನೌಕರರಿಗೆ ಈ ಎರಡರಲ್ಲಿ ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರಿ ನೌಕರರು ಬೇಕೆಂದರೆ ಎನ್‌ಪಿಎಸ್‌ನಲ್ಲೇ ಉಳಿಯಬಹುದು ಅಥವಾ ಯುಪಿಎಸ್‌ಗೆ ಬದಲಾವಣೆ ಬಯಸಿದರೆ ಬದಲಾಯಿಸಿಕೊಳ್ಳಬಹುದು.

ಯುಪಿಎಸ್‌ ಸೌಲಭ್ಯಗಳೇನು?:

- ಸರ್ಕಾರಿ ನೌಕರರು ಸರಾಸರಿ ಮೂಲ ವೇತನದ ಶೇ.50ರಷ್ಟನ್ನು ಪಿಂಚಣಿಯಾಗಿ ಪಡೆಯಲು ಅರ್ಹರಾಗಿರುತ್ತಾರೆ. ಆದರೆ 25 ವರ್ಷಗಳ ಕನಿಷ್ಠ ಸೇವೆಯನ್ನು ಇವರು ಸಲ್ಲಿಸಿರಬೇಕು ಎಂಬ ಷರತ್ತಿದೆ ಹಾಗೂ ನಿವೃತ್ತಿಗೂ ಮುಂಚಿನ ಕೊನೆಯ 12 ತಿಂಗಳ ವೇತನದ ಸರಾಸರಿಯ ಶೇ.50ರಷ್ಟು ಪಿಂಚಣಿ ಇವರಿಗೆ ಲಭಿಸುತ್ತದೆ.

EPFO Interest: ನಿವೃತ್ತಿ ವೇಳೆ 2.5 ಕೋಟಿ ರೂಪಾಯಿ ಬೇಕಾ? ಹಾಗಿದ್ರೆ ಪ್ರತಿ ತಿಂಗಳು ಸ್ಯಾಲರಿಯಲ್ಲ ಇಷ್ಟು ಮೊತ್ತ ಕಟ್‌ ಆಗ್ಬೇಕು!

- ಇನ್ನು ಪಿಂಚಣಿದಾರ ಮರಣ ಹೊಂದಿದರೆ ಅವರ ಅವಲಂಬಿತರಿಗೆ ಮರಣ ಹೊಂದಿದ ಮುಂಚಿನ ತಿಂಗಳಿನ ಪಿಂಚಣಿಯ ಶೇ.60ಷ್ಟು ಪೆನ್ಷನ್‌ ಲಭಿಸುತ್ತದೆ. ಇದಕ್ಕೆ ‘ಖಚಿತ ಕನಿಷ್ಠ ಪಿಂಚಣಿ ಯೋಜನೆ’ ಎಂದು ಸರ್ಕಾರ ಕರೆದಿದೆ.
- ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದರೆ ನಿವೃತ್ತಿಯ ನಂತರ ಕನಿಷ್ಠ 10 ಸಾವಿರ ರು. ಪಿಂಚಣಿ ಲಭಿಸುತ್ತದೆ. 10ರಿಂದ 25 ವರ್ಷದೊಳಗೆ ಸೇವೆ ಸಲ್ಲಿಸಿದವರಿಗೆ ಪಿಂಚಣಿಯ ಮೊತ್ತ ಶೇ.50 ಲಭಿಸದು. ವ್ಯತ್ಯಾಸ ಇರುತ್ತದೆ.
- ಪ್ರಸ್ತುತ ಪಿಂಚಣಿ ಯೋಜನೆಯ ಪ್ರಕಾರ, ನೌಕರರು ಶೇ.10ರಷ್ಟು ಕೊಡುಗೆ ನೀಡಿದರೆ, ಕೇಂದ್ರ ಸರ್ಕಾರವು ಶೇ.14ರಷ್ಟು ಕೊಡುಗೆ ನೀಡುತ್ತದೆ. ಇದನ್ನು ಯುಪಿಎಸ್‌ನಲ್ಲಿ ಶೇ.18ಕ್ಕೆ ಹೆಚ್ಚಿಸಲಾಗುವುದು.
- ನೌಕರರಿಗೆ ಡಿಎ, ಗ್ರಾಚ್ಯುಟಿ ಸೇರಿ ವಿವಿಧ ಸವಲತ್ತುಗಳು ಅಬಾಧಿತವಾಗಿ ಮುಂದುವರಿಯುತ್ತವೆ. ಡಿಎ, ಗ್ರಾಚ್ಯುಟಿ ಹಣ ಲಭಿಸಿದರೆ ಪಿಂಚಣಿ ಮೊತ್ತವೇನೂ ಕಡಿಮೆ ಆಗದು.

ಎನ್‌ಪಿಎಸ್‌ಗಿತ್ತು ತೀವ್ರ ವಿರೋಧ:

ಹಳೆ ಪಿಂಚಣಿ ಯೋಜನೆ (ಒಪಿಎಸ್) ರದ್ದು ಮಾಡಿ, 2004ರಲ್ಲಿ ಜಾರಿಗೆ ತಂದಿದ್ದ ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್‌ಪಿಎಸ್‌) ನೌಕರ ಸಂಘಟನೆಗಳು, ವಿಪಕ್ಷಗಳ ತೀವ್ರ ವಿರೋಧ ವ್ಯಕ್ತವಾಗಿತ್ತು. ಪಿಂಚಣಿ ಮೊತ್ತ ತುಂಬಾ ವ್ಯತ್ಯಾಸವಾದ ಬಗ್ಗೆ ಆಕ್ಷೇಪ ಕೇಳಿಬಂದಿದ್ದವು ಹಾಗೂ ಹಲವು ಬಿಜೆಪಿಯೇತರ ರಾಜ್ಯಗಳು ಮತ್ತೆ ಒಪಿಎಸ್‌ ಜಾರಿಗೆ ತಂದಿದ್ದವು. ಇದರ ನಡುವೆ ಕೇಂದ್ರ ಸರ್ಕಾರವು ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್‌ ನೇತೃತ್ವದಲ್ಲಿ ಸಮಿತಿ ರಚಿಸಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಮರುಪರಿಶೀಲನೆಗೆ ಒಳಪಡಿಸಿತ್ತು.
 

Latest Videos
Follow Us:
Download App:
  • android
  • ios