ಗುಜರಾಥ್(ಸೆ. 17): ಬಹುಶಃ ಸ್ವತಂತ್ರ ಭಾರತದ ಅತಿ ಹೆಚ್ಚು ಚರ್ಚಿತ ಹೆಸರುಗಳಲ್ಲಿ ಮುಂಚೂಣಿಯಾಗಿ ಕೇಳಿಬರುವ ನಾಮಧೇಯವಿದು. 130 ಕೋಟಿ ಭಾರತೀಯರ ಬದುಕು ಕಟ್ಟಿಕೊಡುವ ಹೊಣೆಯನ್ನು 6 ವರ್ಷಗಳಿಂದ ಯಶಸ್ವಿಯಾಗಿ ಹೊತ್ತಿರುವ ಕರ್ಮಯೋಗಿ ಹೆಸರಿದು. ಹಾಗೆಂದು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮುನ್ನಡೆಸುತ್ತಿರುವ ಕಾಯಕಯೋಗಿಯ ಹಿನ್ನೆಲೆ, ನಡೆದುಬಂದ ಹಾದಿ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ. ಇಡುವ ಪ್ರತಿ ಹೆಜ್ಜೆಯೂ ಸವಾಲಿನ ಮುಳ್ಳುಗಳ ಮೇಲೇ ಆಗಿತ್ತು. ಪ್ರತಿ ಕ್ಷಣವೂ ಬಡತನ, ನೋವುಗಳ ತಿರುವಿನಲ್ಲೇ ಸಾಗಿಬರಬೇಕಿತ್ತು. ಆದರೆ ಹಾದಿ ಸಂಕಷ್ಟದ್ದಾಗಿದ್ದರೂ, ಗುರಿ ಬಗ್ಗೆ ದೃಢ ನಿಶ್ಚಯವಿತ್ತು. ಹೀಗಾಗಿಯೇ ಇಂದು ಇಡೀ ದೇಶ ಮೋದಿ ನಾಮ ಜಪಿಸುತ್ತಿದೆ. ಇಡೀ ಜಗತ್ತು ಭಾರತದ ಕಡೆ ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದೆ.

ನರೇಂದ್ರ ಮೋದಿ ಹುಟ್ಟಿದ್ದು ಮಹಾತ್ಮಾ ಗಾಂಧಿ ಜನಿಸಿದ ಗುಜರಾತ್‌ನಲ್ಲಿ. ಮೋದಿ ಪೂರ್ವಜರ ಮೂಲ ಬನಸ್ಕಾಂತ ಜಿಲ್ಲೆ. ಮೋದಿ ಅವರ ಮುತ್ತಜ್ಜ ಮಂಗನ್‌ಲಾಲ್‌ ರಾಂಚೋಡ್‌ ದಾಸ್‌, ಹೊಸ ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಹುಟ್ಟೂರು ತೊರೆದು ಮೆಹ್ಸಾನಾ ಜಿಲ್ಲೆಯ ವಡ್‌ನಗರಕ್ಕೆ ಬಂದು ನೆಲೆಸಿ ದಿನಸಿ ಅಂಗಡಿ ತೆರೆದಿದ್ದರು. ಇವರ ಪುತ್ರ ಮೂಲ್‌ಚಂದ್‌. ಮೂಲ್‌ಚಂದ್‌ರ ಪುತ್ರ ದಾಮೋದರ್‌ ಮೋದಿ. ದಾಮೋದರ್‌ ಮೋದಿ ಮತ್ತು ಹೀರಾಬೆನ್‌ ದಂಪತಿಯ 6 ಮಕ್ಕಳ ಪೈಕಿ ನರೇಂದ್ರ ಮೋದಿ ಮೂರನೇಯವರು. ಮೋದಿ ಹುಟ್ಟಿದ್ದು 1950 ಸೆ.14ರಂದು.

ಗಾಣಿಗ ಸಮುದಾಯಕ್ಕೆ ಸೇರಿದ ಮೋದಿ ಅವರದ್ದು ಅಷ್ಟೇನು ಸ್ಥಿತಿವಂತ ಕುಟುಂಬವಲ್ಲ. ಮೋದಿಯವರ ತಂದೆ ವಡ್‌ನಗರದ ರೈಲ್ವೆ ನಿಲ್ದಾಣದಲ್ಲಿ ಚಿಕ್ಕದೊಂದು ಟೀ ಸ್ಟಾಲ್‌ ಇಟ್ಟುಕೊಂಡಿದ್ದರು. ಅದರ ಆದಾಯ ಅಷ್ಟಕ್ಕಷ್ಟೇ. ಇಂಥ ಸ್ಥಿತಿಯಲ್ಲೇ 3 ಕೊಠಡಿಯ ಪುಟ್ಟಮನೆಯಲ್ಲಿ ಪೋಷಕರು, ಸೋದರರ ಜೊತೆ ಮೋದಿ ವಾಸ್ತವ್ಯ. ಮೈತುಂಬಾ ಬಡತನವಿದ್ದ ಕಾರಣ ಶ್ರಮ ಎಂಬುದು ಮೋದಿಗೆ ಬಾಲ್ಯದಲ್ಲೇ ಮೈಗೂಡಿತ್ತು. ತಾಯಿಗೆ ಮನೆ ಕೆಲಸದಲ್ಲಿ ನೆರವಾಗುತ್ತಿದ್ದರು. ರೈಲ್ವೆ ನಿಲ್ದಾಣಕ್ಕೆ ತೆರಳಿ ತಂದೆಗೆ ಚಹಾ ಅಂಗಡಿ ನಿರ್ವಹಣೆಯಲ್ಲೂ ಕೈಜೋಡಿಸುತ್ತಿದ್ದರು. ಮುಂದೆ ತಂದೆಗೆ ಈ ಕೆಲಸ ನಿರ್ವಹಿಸುವುದು ಸಾಧ್ಯವಾಗದೆ ಹೋದಾಗ ಸೋದರನ ಜೊತೆಗೂಡಿ ತಾವೇ ಟೀ ಸ್ಟಾಲ್‌ ತೆರೆದು, ಕುಟುಂಬಕ್ಕೆ ನೆರವಾಗುವ ಯತ್ನ ಮಾಡಿದರು.

ಓದು ಅಷ್ಟಕ್ಕಷ್ಟೇ, ಚರ್ಚೆಯಲ್ಲಿ ಮುಂಚೂಣಿ:

ಬಾಲ ಮೋದಿಯ ಪ್ರಾಥಮಿಕ, ಪ್ರೌಢಶಿಕ್ಷಣ ವಡ್‌ನಗರದಲ್ಲೇ ಆಯಿತು. ಅಚ್ಚರಿ ಎಂದರೆ ಓದಿನಲ್ಲಿ ಮೋದಿಯದ್ದು ಹೇಳಿಕೊಳ್ಳುವ ಸಾಧನೆ ಇಲ್ಲದಿದ್ದರೂ, ಚರ್ಚೆ, ನಾಯಕತ್ವ ಸಾಮಾಜಿಕ ಕಳಕಳಿಯ ವಿಷಯದಲ್ಲಿ ಸದಾ ಮುಂಚೂಣಿ. ಶಾಲೆಯಲ್ಲಿ ನಾಟಕಗಳಲ್ಲಿ ಎಲ್ಲರಿಗಿಂತ ವಿಭಿನ್ನ ಪಾತ್ರದಲ್ಲಿ ನಟಿಸಿ ಎಲ್ಲರಿಂದಲೂ ಸೈ ಅನ್ನಿಸಿಕೊಳ್ಳುವ ಹುಮ್ಮಸ್ಸು ಸದಾ ತುಡಿಯುತ್ತಿರುತ್ತಿತ್ತು. ಮುಂದೆ ದೆಹಲಿ ವಿಶ್ವವಿದ್ಯಾಲಯದಿಂದ ದೂರಶಿಕ್ಷಣದ ಮೂಲಕ ಬಿಎ ಪದವಿ ಮತ್ತು ಅಹಮದಾಬಾದ್‌ನಲ್ಲಿರುವ ಗುಜರಾತ್‌ ವಿವಿಯ ಮೂಲಕ ಸ್ನಾತಕೋತರ ಪದವಿ ಪಡೆದುಕೊಂಡರು.

13 ವರ್ಷಕ್ಕೇ ಮದುವೆ, ಕೆಲ ದಿನಗಳ ದಾಂಪತ್ಯ:

ಗುಜರಾತ್‌ನಲ್ಲಿ ಜಾರಿಯಲ್ಲಿರುವ ಬಾಲ್ಯ ವಿವಾಹ ಪದ್ಧತಿ ಮೋದಿ ಅವರನ್ನೂ ಬಿಡಲಿಲ್ಲ. ಮೋದಿ ಅವರಿಗೆ 13 ವರ್ಷವಾಗಿದ್ದ ವೇಳೆ ಪೋಷಕರು ಬಲವಂತವಾಗಿ ಜಶೋದಾಬೆನ್‌ ಎಂಬ ಅಪ್ರಾಪ್ತೆ ಜೊತೆ ವಿವಾಹ ಮಾಡಿಸಿದರು. ಮುಂದೆ 5 ವರ್ಷ ಕಳೆದ ಮೇಲೆ ಅಂದರೆ 1968ರಲ್ಲಿ, ಸಂಪ್ರದಾಯದಂತೆ ಬಾಲಕಿಯನ್ನು ಮೋದಿ ಮನೆಗೆ ಪತಿಯ ಜೊತೆ ಇರಲು ಕಳುಹಿಸಿಕೊಡಲಾಯಿತು. ಆದರೆ ವಿವಾಹಕ್ಕೆ ಮನಸ್ಸು ಹೊಂದಿರದ ಮೋದಿ, ಕೆಲ ದಿನಗಳಷ್ಟೆಪತ್ನಿಯ ಜೊತೆ ಕಳೆದು ಬಳಿಕ ಅಹಮದಾಬಾದ್‌ನಲ್ಲಿರುವ ಮಾವನ ಕ್ಯಾಂಟೀನ್‌ ಸೇರಿಕೊಳ್ಳಲು ತೆರಳಿದರು. ಮುಂದೆ ಜಶೋದಾಬೆನ್‌ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದರು.