ನಮೋ 70: ಅಲೆಮಾರಿ ಬ್ರಹ್ಮಚಾರಿಯ ಅವಮಾನದ ಬದುಕು!

ಅಲೆಮಾರಿ ಬ್ರಹ್ಮಚಾರಿಯ ಅವಮಾನದ ಬದುಕು| 2 ವರ್ಷಗಳ ಕಾಲ ಉತ್ತರ, ಈಶಾನ್ಯ ಭಾರತದಲ್ಲಿ ಸುತ್ತಾಡಿದ ಯುವಕ ಎಲ್ಲೂ ಪ್ರೋತ್ಸಾಹ ಸಿಗದೆ ನಿರಾಸೆ, ವಿವೇಕಾನಂದರ ಬದುಕೇ ಸ್ಫೂರ್ತಿ

NAMO 70 M Modi Spent two years in wondering Swami Vivekananda was his inspiration

ಅಹಮದಾಬಾದ್(ಸೆ.17): 3 ಕೊಠಡಿಯ ಪುಟ್ಟಮನೆ. ಮನೆ ತುಂಬಾ ಜನ. ತುಂಬಿತುಳುಕುವಷ್ಟುಬಡತನ. ಇಷ್ಟರ ಮೇಲೆ ಬಲವಂತದ ವಿವಾಹ. ಮೋದಿಯ ಮನಸ್ಸಿನಲ್ಲಿ ಇನ್ನಿಲದ ಗೊಂದಲ, ತೊಳಲಾಟ ಹುಟ್ಟುಹಾಕಿತ್ತು. ಪರಿಹಾರ ಕಂಡುಕೊಳ್ಳಲೋ ಎಂಬಂತೆ ಮೋದಿ ಮನೆ ಬಿಟ್ಟು ಹೊರನಡೆದರು. 2 ವರ್ಷ ಉತ್ತರ, ಈಶಾನ್ಯ, ಪೂರ್ವ ಭಾರತದ ವಿವಿಧ ರಾಜ್ಯಗಳಲ್ಲಿ ನಡೆಯಿತು ಈ ಸಂಚಾರ.

ಇಂಥದ್ದೊಂದು ಸಂಚಾರದ ವೇಳೆ ಮೋದಿ ಅವರನ್ನು ಬಹುವಾಗಿ ಸೆಳೆದಿದ್ದು ಮತ್ತು ಅವರ ಮೇಲೆ ಗಂಭೀರ ಪ್ರಭಾವ ಬೀರಿದ್ದು ಕೋಲ್ಕತಾದಲ್ಲಿ ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಬೇಲೂರು ಮಠ ಮತ್ತು ಅಲ್ಲಿನ ಕೆಲ ಕಾಲದ ವಾಸ್ತವ್ಯ. ತದನಂತರದಲ್ಲಿ ಅಲ್ಮೋರಾದಲ್ಲಿನ ರಾಮಕೃಷ್ಣ ಆಶ್ರಮದ ಭೇಟಿ, ರಾಜಕೋಟ್‌ನ ರಾಮಕೃಷ್ಣ ಮಿಷನ್‌ಗಳು ಮೋದಿ ಅವರ ಮೇಲೆ ಅಪಾರ ಪ್ರಭಾವ ಬೀರಿದವು. ಆದರೆ ಯಾವುದೇ ಮಠದಲ್ಲೂ ಹೆಚ್ಚಿನ ಕಾಲ ಉಳಿಯಲು ಅವಕಾಶ ನೀಡದ ಕಾರಣ ಮನನೊಂದ ಮೋದಿ ಮತ್ತೆ ತವರಿಗೆ ಮರಳಿದರು.

ವಿವೇಕಾನಂದರು, ಭಾರತೀಯ ವೇದಗಳ ಸಾರವನ್ನು ವಿಶ್ವದ ಎದುರು ತೆರೆದಿರುವ ಮೂಲಕ ಭಾರತದ ಕಡೆಗಿನ ಪಾಶ್ಚಾತ್ಯದ ನಿಲುವು ಬದಲಿಸಿದ, ಸರ್ವರನ್ನು ಸಮಾನವಾಗಿ ಕಾಣುವ ಮೂಲಕ ಪೂರ್ವ ಮತ್ತು ಪಶ್ಚಿಮದ ದೇಶಗಳ ನಡುವಿನ ಬಾಂಧವ್ಯದ ಬೆಸುಗೆ ಹಾಕಿದ ರೀತಿ, ಭಾರತೀಯರಿಗೆ ಅವರ ಸಂಪದ್ಭರಿತ ಇತಿಹಾಸ, ಸಾಂಸ್ಕೃತಿಕ ಹಿನ್ನೆಲೆ, ಪರಂಪರೆ, ಧಾರ್ಮಿಕ ಹಿನ್ನೆಲೆಯನ್ನು ನೆನಪಿಸಿದ ರೀತಿ ಮೋದಿ ಅವರನ್ನು ಬಹುವಾಗಿ ಕಾಡಿದ್ದವು. ಜೊತೆಗೆ ದೇಶಕಟ್ಟುವಲ್ಲಿ ಯವಸಮೂಹದ ಪಾತ್ರದ ಕುರಿತ ವಿವೇಕಾನಂದರ ಚಿಂತನೆಗಳು ಕೂಡ ಇನ್ನಿಲ್ಲದಂತೆ ಸೆಳೆದಿತ್ತು. ಇಂಥ ಚಿಂತನೆಗಳು ಮೋದಿ ಅವರಲ್ಲಿ ಅದೆಷ್ಟುಮನೆ ಮಾಡಿದವೆಂದರೆ, ಗುಜರಾತ್‌ ಸಿಎಂ ಆಗಿದ್ದ ವೇಳೆ ಮತ್ತು ನಂತರ ಪ್ರಧಾನಿಯಾದ ಅವಧಿಯಲ್ಲಿನ ಮೋದಿ ಅವರ ಬಹುತೇಕ ಚಿಂತನೆಗಳಲ್ಲಿ ವಿವೇಕಾನಂದರ ನೆರಳನ್ನು ಕಾಣಬಹುದು.

ತುರ್ತು ಪರಿಸ್ಥಿತಿ ವೇಳೆ ಭೂಗತರಾಗಿ ಹೋರಾಟ

ಶಿಸ್ತು, ಸಂಯಮ, ದೇಶಭಕ್ತಿ, ದೇಶಪ್ರೇಮ, ಸೇವೆಯ ಪ್ರತೀಕದಂತಿರುವ ಮೋದಿಯವರನ್ನು ಇಂಥದ್ದೊಂದು ಹಿರಿಮೆಗೆ ಪಾತ್ರ ಮಾಡುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಾತ್ರ ದೊಡ್ಡದು. ಶಿಸ್ತು ಮೋದಿಗೆ ಹೊಸತಲ್ಲವಾದರೂ ಅದು ಪರಿಪಕ್ವಗೊಂಡಿದ್ದು ಆರ್‌ಎಸ್‌ಎಸ್‌ ಗರಡಿಯಲ್ಲಿ.

ಬಾಲ್ಯದಿಂದಲೇ ಆರ್‌ಎಸ್‌ಎಸ್‌ ಕಡೆಗೆ ಆಕರ್ಷಿರಾಗಿದ್ದ ಮೋದಿ, ನಗರದಲ್ಲಿ ಎಲ್ಲೇ ಸಂಘಟನೆಯ ಕಾರ್ಯಕ್ರಮ ನಡೆದರೂ ಅಲ್ಲಿಗೆ ತಪ್ಪದೇ ಹೋಗುತ್ತಿದ್ದರು. ಇಂಥ ಹೊತ್ತಿನಲ್ಲೇ ವಾಡ್‌ ನಗರದಲ್ಲಿ ವಕೀಲ್‌ ಸಾಹೇಬ್‌ ಎಂದೇ ಖ್ಯಾತರಾಗಿದ್ದ ಲಕ್ಷ್ಮಣ್‌ರಾವ್‌ ಇನಾಂದಾರ್‌ ಕಣ್ಣಿಗೆ ಮೋದಿ ಬಿದ್ದರು. ಅವರು ಮೋದಿಯನ್ನು ಬಾಲ ಸ್ವಯಂ ಸೇವಕರಾಗಿ ಸೇರಿಸಿಕೊಂಡರು. ಆಗಿನ್ನೂ ಮೋದಿಗೆ ಕೇವಲ 8 ವರ್ಷ. ಮುಂದೇ ಇದೇ ವಕೀಲ್‌ ಸಾಹೇಬ್‌ ಮೋದಿ ಅವರ ರಾಜಕೀಯ ಗುರುವಾಗಿದ್ದು ಇತಿಹಾಸ.

ಮುಂದೆ ಹಲವು ವರ್ಷಗಳ ಕಾಲ ಹೀಗೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಮೋದಿ 1970ರಲ್ಲಿ ಅಂದರೆ ತಮ್ಮ 20ನೇ ವಯಸ್ಸಿನಲ್ಲಿ ಪೂರ್ಣ ಪ್ರಮಾಣದ ಪ್ರಚಾರಕರಾಗಿ ಸೇವೆ ಸಲ್ಲಿಸಲು ಆರಂಭಿಸಿದರು. ಹೀಗೆ ಸೇರಿದ ಕೆಲವೇ ದಿನಗಳಲ್ಲಿ ವಾಡ್‌ ನಗರದಲ್ಲಿ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಅನ್ನು ಮೋದಿ ಆರಂಭಿಸಿದರು. ಹೀಗೆ ಎಬಿವಿಪಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಹೊತ್ತಿನಲ್ಲೇ 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು.

ಭೂಗತರಾಗಿ ಹೋರಾಟ:

ಎಬಿವಿಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೋದಿ ಅವರ ಮೇಲೂ ಎಮರ್ಜೆನ್ಸಿ ಸರ್ಕಾರದ ಕಣ್ಣು ಬಿದ್ದಿತ್ತು. ಹೀಗಾಗಿ ಅವರ ಬಂಧನಕ್ಕೂಬಲೆ ಬೀಸಲಾಗಿತ್ತು. ಇದರ ಸುಳಿವು ಸಿಗುತ್ತಲೇ ಮೋದಿ ಭೂಗತರಾದರು. ಈ ವೇಳೆ ಮೋದಿ ಅವರನ್ನು ರಾಜ್ಯದಲ್ಲಿ ತುರ್ತುಪರಿಸ್ಥಿತಿ ವಿರೋಧಿಸುವ ಹೋರಾಟ ಕುರಿತ ‘ಗುಜರಾತ್‌ ಲೋಕ ಸಂಘರ್ಷ ಸಮಿತಿ’ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಕೆಲ ದಿನಗಳಲ್ಲೇ ಆರ್‌ಎಸ್‌ಎಸ್‌ ಸಂಘಟನೆ ಮೇಲೆ ನಿಷೇಧ ಹೇರಲಾಯಿತು. ಪರಿಣಾಮ ಮೋದಿ, ಅಧಿಕಾರಿಗಳು ಮತ್ತು ಪೊಲೀಸರ ಕಣ್ಣುತಪ್ಪಿಸಲು ವೇಷ ಮರೆಸಿಕೊಂಡು ತಿರುಗಾಡತೊಡಗಿದರು. ಜೊತೆಗೆ ತುರ್ತುಪರಿಸ್ಥಿತಿ ವಿರೋಧಿ ಕರಪತ್ರ ಮುದ್ರಿಸಿ ವಿತರಿಸುವುದು, ಅವುಗಳನ್ನು ದೆಹಲಿಗೆ ತಲುಪಿಸಿ, ಅಲ್ಲಿ ಪ್ರತಿಭಟನೆ ಮತ್ತು ಹೋರಾಟ ಸಂಘಟಿಸುವ ಕೆಲಸಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ, ಸಂಘದ ಹಿರಿಯ ನಾಯಕರ ಪ್ರಶಂಸೆಗೆ ಪಾತ್ರರಾದರು. ತುರ್ತು ಪರಿಸ್ಥಿತಿ ಹೋರಾಟ ಕುರಿತ ತಮ್ಮ ಅನುಭವಗಳ ಬಗ್ಗೆ ಮೋದಿ ‘ಸಂಘರ್ಷ ಮಾ ಗುಜರಾತ್‌’ ಎಂಬ ಪುಸ್ತಕವನ್ನೂ ಬರೆದಿದ್ದಾರೆ.

Latest Videos
Follow Us:
Download App:
  • android
  • ios