ರಿಲಯನ್ಸ್‌ ಇಂಡಸ್ಟ್ರಿಯಲ್ಲಿ ಉಪಾಧ್ಯಕ್ಷರಾಗಿ ವಾರ್ಷಿಕ 75 ಕೋಟಿ ರು. ವೇತನ ಪಡೆಯುತ್ತಿದ್ದ ಮತ್ತೂ ಇತ್ತೀಚೆಗಷ್ಟೇ ಆ ಹುದ್ದೆಯಿಂದ ನಿವೃತ್ತಿಯಾದ ಪ್ರಕಾಶ್‌ ಶಾ ಜೈನ ಸನ್ಯಾಸತ್ವ ಪಡೆದಿದ್ದಾರೆ.

ಮುಂಬೈ (ಏ.30): ದೇಶದ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರಿಯಲ್ಲಿ ಉಪಾಧ್ಯಕ್ಷರಾಗಿ ವಾರ್ಷಿಕ 75 ಕೋಟಿ ರು. ವೇತನ ಪಡೆಯುತ್ತಿದ್ದ ಮತ್ತೂ ಇತ್ತೀಚೆಗಷ್ಟೇ ಆ ಹುದ್ದೆಯಿಂದ ನಿವೃತ್ತಿಯಾದ ಪ್ರಕಾಶ್‌ ಶಾ ಅವರು ಲೌಕಿಕ ಜೀವನಕ್ಕೆ ತಿಲಾಂಜಲಿ ಹೇಳಿದ್ದಾರೆ. ಅವರೀಗ ಜೈನ ಸನ್ಯಾಸತ್ವ ಪಡೆಯುವ ಮೂಲಕ ಆಧ್ಯಾತ್ಮಕ ಜೀವನದತ್ತ ಮುಖ ಮಾಡಿದ್ದಾರೆ.

ಅಂಬಾನಿ ಅವರ ಬಲಗೈನಂತಿದ್ದ ಇವರು ಮಹಾವೀರ ಜಯಂತಿಯಾದ ಭಾನುವಾರವಷ್ಟೇ ಜೈನ ಮುನಿಗಳಿಂದ ಸನ್ಯಾಸತ್ವದ ದೀಕ್ಷೆ ಪಡೆದರು. ಜೊತೆಗೆ ಇದೇ ವೇಳೆ ಅವರ ಪತ್ನಿ ನೈನಾ ಶಾ ಅವರು ಸಹ ದೀಕ್ಷೆ ಸ್ವೀಕರಿಸಿದರು. ಈ ಹಿನ್ನೆಲೆಯಲ್ಲಿ ಕೋಟು, ಸೂಟು ಮತ್ತು ಬೂಟು ಹಾಕಿಕೊಂಡು ಕಂಗೊಳಿಸುತ್ತಿದ್ದ ಶಾ ಅವರು ಶ್ವೇತ ವರ್ಣದ ಧಿರಿಸಿನೊಂದಿಗೆ ಬರಿಗಾಲಿನಲ್ಲಿ ಕೋಲು ಹಿಡಿದು ನಿಂತಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿವೆ. ಇವರ ಇಬ್ಬರ ಮಕ್ಕಳ ಪೈಕಿ ಓರ್ವ 7 ವರ್ಷಗಳ ಹಿಂದೆಯೇ ಸನ್ಯಾಸ ದೀಕ್ಷೆ ಪಡೆದಿದ್ದಾರೆ. ಇನ್ನೊಬ್ಬರಿಗೆ ವಿವಾಹವಾಗಿದೆ.

ಅಂಬಾನಿ ಸಂಸ್ಥೆಯ ಸಿಬ್ಬಂದಿ, ಕುಟುಂಬಕ್ಕೆ ರಿಲಯನ್ಸ್ ಲಸಿಕೆ!

ಬಾಂಬೆ ಐಐಟಿಯಲ್ಲಿ ಇಂಜಿನಿಯರಿಂಗ್‌ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಅವರು, ರಿಲಯನ್ಸ್‌ ಕಂಪನಿಯ ಜಾಮ್‌ನಗರದ ಪೆಟಕೊಕ್‌ ಗ್ಯಾಸ್ಫಿಕೇಷನ್‌ ಯೋಜನೆ ಆರಂಭಿಸುವಲ್ಲಿ ಗಣನೀಯ ಪಾತ್ರ ವಹಿಸಿದ್ದರು.