ಭೋಪಾಲ್(ಅ. 28)  ಭವಿಷ್ಯ ಹೇಳುವುದರಲ್ಲಿ ಹೆಸರು ಮಾಡಿದ್ದ ಈ ವ್ಯಕ್ತಿ ತನ್ನ ಸಾವಿನ ಕತೆಯನ್ನೇ ಹೇಳಿದ್ದರು. ತಮ್ಮ ಸಾವಿನ ಬಗ್ಗೆ ಅವರೇ ಹೇಳಿದ್ದ ಭವಿಷ್ಯ ಮಾತ್ರ ಕೊನೆಗೂ ಸುಳ್ಳಾಗಿದೆ. ಜ್ಯೋತಿಷಿ ಕುಂಜಿಲಾಲ್ ಮಾಳವೀಯ ತಾನು 2005ರಲ್ಲಿ ನಿಧನವಾಗುತ್ತೇನೆ ಎಂದು ಹೇಳಿದ್ದರು. 2010ರಲ್ಲಿ ತೆಗೆ ಬಂದ ಅಮೀರ್ ಖಾನ್ ಅವರ ಪೆಲ್ಲಿ ಲೈವ್ ಚಿತ್ರ ಸಹ ಇವರ ಜೀವನದ ಘಟನಾವಳಿಗಳ ಕೆಲ ಹೋಲಿಕೆ ಹೊಂದಿತ್ತು.

2005ರಲ್ಲಿ ಸಾವನ್ನಪ್ಪುತ್ತೇನೆ ಎಂದು ಹೇಳಿದ್ದವರು ಕಳೆದ ಶನಿವಾರ  ಅಂದರೆ ಬರೋಬ್ಬರಿ 14 ವರ್ಷದ ನಂತರ ಸಾವನ್ನಪ್ಪಿದ್ದಾರೆ.

ಶುಕ್ರವಾರ ಮಧ್ಯರಾತ್ರಿ ಅಥವಾ ಶನಿವಾರ ಮುಂಜಾನೆ ವೇಳೆಗೆ ಮಾಳವೀಯ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಸೆಹ್ರಾದಲ್ಲಿ ಅವರ ಅಂತ್ಯಕ್ರಿಯೆಯನ್ನು ಶನಿವಾರ ಮುಂಜಾನೆ ನೆರವೇರಿಸಲಾಗಿದೆ ಎಂದು ಸಂಬಂಧಿ ಪ್ರೇಮನಾರಾಯಣ ತಿಳಿಸಿದ್ದಾರೆ.

ತಮ್ಮ 88ನೇ ವಯಸ್ಸಿನಲ್ಲಿ ಮಾಳವೀಯ ನಿಧನರಾಗಿದ್ದಾರೆ. ಅಕ್ಟೋಬರ್ 20, 2005ರಂದು ನಾನು ಸಾಯಲಿದ್ದೇನೆ ಎಂದು ಅವರೇ ಹೇಳಿದ್ದರು. 2005ರ ಸಮಯದಲ್ಲಿ ಇದೊಂದು ದೊಡ್ಡ ಸುದ್ದಿಯಾಗಿತ್ತು. ಮಾಧ್ಯಮದವರು ಸಹ ಜ್ಯೋತಿಷಿ ವಾಸವಿದ್ದ ಬೆತೂಲ್ ನಿಂದ 25 ಕಿಮೀ ದೂರವಿರುವ  ಹಳ್ಳಿಗೆ ಎಡತಾಕಿದ್ದರು.

ಅಮೀರ್ ಖಾನ್ ಚಿತ್ರದ ನಂತರ ಪೆಪ್ಲಿ ಲೈವ್ ಚಿತ್ರದ ಲಾಭಾಂಶದಲ್ಲಿ ತಮಗೂ ಪಾಲು ಬೇಕೆಂದು ಮಾಳವೀಯ ಹಠ ಹಿಡಿದಿದ್ದರು. ಡೈಸ್ ಅಥವಾ ದಾಳ ಉರುಳಿಸಿ ಭವಿಷ್ಯ ಹೇಳುತ್ತಿದ್ದ ಮಾಳವೀಯ ಅಪಾರ ಶಿಷ್ಯವೃಂದ ಹೊಂದಿದ್ದರು.