ನವದೆಹಲಿ(ನ.13): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ದೀಪಾವಳಿಗೂ ಒಂದು ದಿನ ಮೊದಲು ಡಿಜಿಟಲ್ ಪ್ರೆಸ್ ಕಾನ್ಫರೆನ್ಸ್‌ ನಡೆಸಿ ರಾಷ್ಟ್ರೀಯ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳಿಗೆ ವಾಯು ಮಾಲಿನ್ಯ ಪ್ರಮುಖ ಕಾರಣ ಎಂದಿದ್ದಾರೆ. ಅಲ್ಲದೇ ವಾಯು ಮಾಲಿನ್ಯಕ್ಕೆ ನೆರೆಯ ರಾಜ್ಯಗಳೂ ಕಾರಣ ಎಂದು ಕಿಡಿ ಕಾರಿರುವ ಕೇಜ್ರೀವಾಲ್ ಹುಲ್ಲು ಸುಟ್ಟ ಪರಿಣಾಮ ಒಂದು ತಿಂಗಳು ಉತ್ತರ ಭಾರತವಿಡೀ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಹಾಗೂ ದೆಹಲಿಯಾದ್ಯಂತ ಹೊಗೆ ಇರುತ್ತದೆ. ಕಳೆದ 10-12 ವರ್ಷಗಳಿಂದ ಹುಲ್ಲು ಸುಡುತ್ತಿರುವ ಪರಿಣಾಮ ಉತ್ತರ ಭಾರತವಿಡೀ ವಾಯು ಮಾಲಿನ್ಯ ಸಮಸ್ಯೆ ಎದುರಿಸುತ್ತಿದೆ ಎಂದಿದ್ದಾರೆ.

ದೀಪಾವಳಿ ಶುಭಾಶಯ ಕೋರಿದ ಆಪ್ ನಾಯಕ ಇನ್ಮುಂದೆ ಈ ಹುಲ್ಲಿನ ಸಮಸ್ಯೆ ಎದುರಾಗುವುದಿಲ್ಲ, ರೈತರಿಗೂ ಕಷ್ಟವಾಗುವುದಿಲ್ಲ. ಇದನ್ನು ಸುಡುವ ಬದಲು ಡೀ ಕಂಪೋಸ್ ಮಾಡಿ ಅದನ್ನು ಗೊಬ್ಬರವಾಗಿಸುವ ತಂತ್ರಜ್ಞಾನ ಕಂಡು ಹಿಡಿದಿದ್ದೇವೆ ಎಂದಿದ್ದಾರೆ. ಈ ಸಮಸ್ಯೆ ಕೊನೆಯಾಗಿದೆ. ಇನ್ನು ಸರ್ಕಾರ ತನ್ನ ಜವಾಬ್ದಾರಿ ಪೂರೈಸಬೇಕಿದೆ, ನೆರೆ ರಾಜ್ಯಗಳೂ ಈ ಸಮಸ್ಯೆಯನ್ನು ಇದೇ ರೀತಿ ನಿಭಾಯಿಸಬೇಕಿದೆ ಎಂದಿದ್ದಾರೆ.

ಇನ್ನು ಹೆಚ್ಚುತ್ತಿರುವ ಕೊರೋನಾ ಪ್ರಕರಣ ಸಂಬಂಧ ಮಾತನಾಡಿದ ಕೇಜ್ರೀವಾಲ್, ಸರ್ಕಾರಕ್ಕೂ ಈ ಬಗ್ಗೆ ಚಿಂತೆ ಇದೆ. ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ನಾವು ಕೈಗೊಳ್ಳುತ್ತಿದ್ದೇವೆ. ಮುಂದಿನ ವಾರ ಮಹಾಮಾರಿ ನಿಯಂತ್ರಿಸಲು ಅನೇಕ ಕ್ರಮ ಕೈಗೊಳ್ಳುತ್ತೇವೆ. ಮಮುಂದಿನ ಹತ್ತು ದಿನಗಳಲ್ಲಿ ದೆಹಲಿಯಲ್ಲಿ ಕೊರೋನಾ ನಿಯಂತ್ರಿಸುತ್ತೇವೆ ಎಂದಿದ್ದಾರೆ.