ನವದೆಹಲಿ(ಮೇ.14): ದೇಶದ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಈ ಬಾರಿ ಸಾಮಾನ್ಯಕ್ಕಿಂತ ಒಂದು ವಾರ ಮೊದಲೇ ಮಳೆ ಹೊತ್ತು ತರುವ ಸಾಧ್ಯತೆ ಕಂಡುಬರುತ್ತಿದೆ. ಸಾಮಾನ್ಯವಾಗಿ, ಮೇ 20-22ರ ವೇಳೆಗೆ ಅಂಡಮಾನ್‌- ನಿಕೋಬಾರ್‌ ಪ್ರವೇಶಿಸುತ್ತಿದ್ದ ಮುಂಗಾರು ಮಾರುತಗಳು, ಚಂಡಮಾರುತದ ಪ್ರಭಾವದಿಂದಾಗಿ ಈ ವರ್ಷ 6 ದಿನ ಮೊದಲೇ ಅಂದರೆ ಮೇ 16 ರ ವೇಳೆಗೆ ಆ ದ್ವೀಪ ಸಮೂಹಕ್ಕೆ ಆಗಮಿಸುತ್ತಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

ಅಂಡಮಾನ್‌ ಪ್ರವೇಶಿಸಿದ 10-11 ದಿನಗಳಲ್ಲಿ ಮುಂಗಾರು ಕೇರಳ ಪ್ರವೇಶಿಸುವುದು ವಾಡಿಕೆ. ಮೇ 20ರ ವೇಳೆಗೆ ಅಂಡಮಾನ್‌ಗೆ ಬರುವ ಮುಂಗಾರು, ಜೂನ್‌ 1ಕ್ಕೆ ಕೇರಳದಲ್ಲಿ ಮೊದಲ ಮಳೆ ತರುವುದು ಸಾಮಾನ್ಯ. ಆದರೆ ದ್ವೀಪಕ್ಕೆ ವಾರದ ಮೊದಲೇ ಮುಂಗಾರು ಆಗಮಿಸುತ್ತಿರುವ ಕಾರಣ ಕೇರಳಕ್ಕೂ ಅಷ್ಟೇ ಬೇಗ ಮಳೆ ಬರುವ ಸಾಧ್ಯತೆ ಇದೆ. ಆದರೆ ಕೇರಳಕ್ಕೆ ಮುಂಗಾರು ಪ್ರವೇಶದ ದಿನಾಂಕವನ್ನು ಹವಾಮಾನ ಇಲಾಖೆ ಇನ್ನೂ ಪ್ರಕಟಿಸಿಲ್ಲ. ಇದನ್ನು ಮುಂದಿನ ಕೆಲ ದಿನಗಳಲ್ಲೇ ಪ್ರಕಟಿಸುವುದಾಗಿ ಹೇಳಿದೆ.

ಚಂಡಮಾರುತ ಸೃಷ್ಟಿಯ ಮೊದಲ ಹಂತವಾದ ವಾಯುಭಾರ ಕುಸಿತವು, ಬುಧವಾರ ಅಂಡಮಾನ್‌ ನಿಕೋಬಾರ್‌ ದ್ವೀಪ ಸಮೂಹದ ಪ್ರದೇಶದಲ್ಲಿ ಕಂಡುಬಂದಿದೆ. ಇದು ಮುಂಗಾರು ಪ್ರವೇಶದ ಮೊದಲ ಸುಳಿವು ಎಂದು ಹವಾಮಾನ ಇಲಾಖೆ ಹೇಳಿದೆ.