ನವದೆಹಲಿ[ಮಾ.04]: ‘ಇಂದು ಭಾರತ್‌ ಮಾತಾ ಕೀ ಜೈ ಎನ್ನುವುದೂ ಒಂದು ಅಪರಾಧವಾಗಿಬಿಟ್ಟಿದೆ. ಈ ರೀತಿ ಉದ್ಘೋಷ ಹಾಕಿದರೆ ಸಂದೇಹದ ದೃಷ್ಟಿಯಿಂದ ನೋಡಲಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರಿಗೆ ಟಾಂಗ್‌ ನೀಡಿದ್ದಾರೆ.

ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿದ್ದ ಸಿಂಗ್‌, ‘ಜನರನ್ನು ಪ್ರಚೋದಿಸಲು ಇಂದು ಭಾರತ್‌ ಮಾತಾ ಕೀ ಜೈ ಉದ್ಘೋಷವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಪರೋಕ್ಷವಾಗಿ ಬಿಜೆಪಿಗೆ ತಿವಿದಿದ್ದರು. ಇದಕ್ಕೆ ಮಂಗಳವಾರ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ತಿರುಗೇಟು ನೀಡಿದ ಮೋದಿ, ‘ಈ ಉದ್ಘೋಷದಲ್ಲಿಯೂ ಇಂದು ಮಾಜಿ ಪ್ರಧಾನಿಯೊಬ್ಬರು ಕೆಟ್ಟವಾಸನೆಯನ್ನು ಗ್ರಹಿಸುತ್ತಿದ್ದಾರೆ. ಅದನ್ನು ಸಂದೇಹದಿಂದ ನೋಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಸ್ವಾತಂತ್ರ್ಯ ಸಂಗ್ರಾಮದ ವೇಳೆ ವಂದೇಮಾತರಂ ಗೀತೆ ಹಾಡಿದರೆ ಅಪರಾಧ ಎಂದು ಪರಿಗಣಿಸಲಾಗುತ್ತಿತ್ತು. ಈಗ ಸ್ವಾತಂತ್ರ್ಯ ಸಿಕ್ಕು 70 ವರ್ಷ ಆಗಿದೆ. ಈಗ ‘ಭಾರತ್‌ ಮಾತಾ ಕೀ ಜೈ’ ಅನ್ನು ಅಪರಾಧವೆಂಬಂತೆ ನೋಡಲಾಗುತ್ತಿದೆ. ಪ್ರಧಾನಿ ಆದಂಥವರು ಇಂಥ ಮಾತು ಹೇಳುತ್ತಿರುವುದು ದುರದೃಷ್ಟಕರ’ ಎಂದರು.

‘ಇಂದು ಶಕ್ತಿಗಳು ದೇಶ ಅಸ್ಥಿರಗೊಳಿಸಲು ಸಂಚು ಹೂಡಿವೆ. ಇಂಥದ್ದನ್ನು ನಿಷ್ಫಲಗೊಳಿಸಲು ಬಿಜೆಪಿಗರು ಯತ್ನಿಸಬೇಕು. ಕೆಲವು ಪಕ್ಷಗಳಿಗೆ ರಾಜಕೀಯ ಹಿತವು ದೇಶದ ಹಿತಕ್ಕಿಂತ ಮುಖ್ಯವಾಗಿಬಿಟ್ಟಿದೆ’ ಎಂದು ಕಿಡಿಕಾರಿದರು.