* ಸಂಭ್ರಮಾಚರಣೆ ವೇಳೆ ಮಲೆಯಾಳಂ ಪದ* ತಾಲಿಬಾನ್‌ಗೂ ಕೇರಳಕ್ಕೂ ನಂಟು * ಸಂಸದ ಶಶಿ ತರೂರ್‌ ಟ್ವೀಟ್‌ ಮಾಹಿತಿ

ತಿರುವನಂತಪುರಂ(ಆ.18): ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್‌ ಉಗ್ರರ ಗುಂಪಿನಲ್ಲಿ ಮಲೆಯಾಳಿಗಳೂ ಸೇರಿರುವ ಬಗ್ಗೆ ಕಾಂಗ್ರೆಸ್‌ ಸಂಸದ, ಕೇರಳ ಮೂಲದ ಶಶಿ ತರೂರ್‌ ಟ್ವೀಟರ್‌ನಲ್ಲಿ ಸುಳಿವು ನೀಡಿದ್ದಾರೆ.

ರಮೀಜ್‌ ಎಂಬ ಮಧ್ಯಪ್ರಾಚ್ಯ ದೇಶದ ಪತ್ರಕರ್ತರೊಬ್ಬರು, ತಾಲಿಬಾನ್‌ ಉಗ್ರರು ತಾವು ಕಾಬೂಲ್‌ ಪ್ರವೇಶ ಮಾಡಿದ ಖುಷಿಯಲ್ಲಿ ನೆಲವನ್ನು ಮುಟ್ಟಿಸಂತೋಷದಿಂದ ಕಣ್ಣೀರಿಡುತ್ತಿರುವ ವಿಡಿಯೋವೊಂದನ್ನು ಆ.15ರಂದು ಟ್ವೀಟ್‌ ಮಾಡಿದ್ದರು. ಈ ವಿಡಿಯೋದಲ್ಲಿ ಧ್ವನಿಯನ್ನು ಆಲಿಸಿದ ಬಳಿಕ ಅದನ್ನು ರೀ ಟ್ವೀಟ್‌ ಮಾಡಿರುವ ತರೂರ್‌, ‘ಈ ವಿಡಿಯೋದಲ್ಲಿರುವ ತಾಲಿಬಾನಿಗಳಲ್ಲಿ ಕನಿಷ್ಠ ಇಬ್ಬರು ಮಲೆಯಾಳಿಗಳು ಇರಬಹುದು. ಒಬ್ಬ ಸಂಸಾರಿಕ್ಕಟ್ಟೆ(ಮಾತನಾಡಲಿ) ಎಂದು ಹೇಳಿದರೆ, ಇನ್ನೋರ್ವ ಅವನ ಮಾತನ್ನು ಅರ್ಥ ಮಾಡಿಕೊಂಡಿದ್ದಾನೆ’ ಎಂದು ಬರೆದಿದ್ದಾರೆ.

ತರೂರ್‌ ರೀಟ್ವೀಟ್‌ ಬಳಿಕ ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದೆ. ಇದು ಕೇರಳ ಮಾಡೆಲ್‌ ಎಂದು ಕೆಲವರು ಮೂದಲಿಸಿದ್ದರೆ, ಇನ್ನು ಕೆಲವರು ಇದು ಮಲೆಯಾಳಂ ಭಾಷೆ ಅಲ್ಲ ಎಂದು ವಾದಿಸಿದ್ದಾರೆ.

Scroll to load tweet…

ಇಷ್ಟೆಲ್ಲಾ ಆದ ಬಳಿಕ ಮೂಲ ಟ್ವೀಟ್‌ ಮಾಡಿದ್ದ ರಮೀಜ್‌ ಪ್ರತಿಕ್ರಿಯೆ ನೀಡಿ, ತಾಲಿಬಾನ್‌ನಲ್ಲಿ ಯಾರೂ ಕೇರಳದ ಮುಸ್ಲಿಮರು ಇಲ್ಲ. ವಿಡಿಯೋದಲ್ಲಿ ಇರುವವರು ಝಬೂಲ್‌ ಪ್ರಾಂತ್ಯದ ಬಲೂಚಿಗಳು. ಅವರು ಮಾತನಾಡುವುದು ಬ್ರಾಹ್ವಿ ಭಾಷೆ. ಅದು ಕೂಡಾ ತಮಿಳು, ತೆಲುಗು, ಮಲೆಯಾಳಂನಂತೆ ಒಂದು ದ್ರಾವಿಡ ಭಾಷೆ ಎಂದು ಸ್ಪಷ್ಟನೆ ನೀಡಿದ್ದಾರೆ.

Scroll to load tweet…

ಭಾರತೀಯರು ಐಸಿಸ್‌ ಸಂಘಟನೆ ಸೇರುವ ಸಲುವಾಗಿ ಪಾಕಿಸ್ತಾನ, ಅಷ್ಘಾನಿಸ್ತಾನ, ಸಿರಿಯಾಕ್ಕೆ ಹೋದ ಹಲವು ಉದಾಹರಣೆಗಳು ಇವೆಯಾದರೂ, ನೇರವಾಗಿ ತಾಲಿಬಾನ್‌ ಸೇರಿದ್ದ ಉದಾಹರಣೆಗಳು ತೀರಾ ಕಡಿಮೆ. ಹೀಗಾಗಿ ತರೂರ್‌ ಮಾಡಿರುವ ಟ್ವೀಟ್‌ನಲ್ಲಿರುವ ಅಂಶಗಳು ಸಾಕಷ್ಟುಕುತೂಹಲ ಕೆರಳಿಸಿವೆ.