Asianet Suvarna News Asianet Suvarna News

ಹಿಂಡನ್‌ಬರ್ಗ್‌ ವಿರುದ್ಧ ಕಠಿಣ ಕ್ರಮ ಎಂದ ಸಚಿವ : ಕಾಂಗ್ರೆಸ್‌ನಿಂದ ದೇಶವ್ಯಾಪಿ ಹೋರಾಟದ ಎಚ್ಚರಿಕೆ

ಅದಾನಿ ಸಮೂಹದ ಸಾಗರೋತ್ತರ ನಕಲಿ ಕಂಪನಿಗಳ ಜೊತೆಗೆ ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ) ಮುಖ್ಯಸ್ಥರ ನಂಟಿದೆ ಎಂದು ಅಮೆರಿಕದ ಸಂಶೋಧನಾ ಕಂಪನಿ ಹಿಂಡನ್‌ಬರ್ಗ್‌ ಮಾಡಿದ ಆರೋಪದ ಬಗ್ಗೆ ರಾಜಕೀಯ ಕೆಸರೆರಚಾಟ ತೀವ್ರಗೊಂಡಿದೆ.

Minister giriraj singh says strict action against Hindenburg Congress warns of nationwide protest akb
Author
First Published Aug 13, 2024, 10:18 AM IST | Last Updated Aug 13, 2024, 10:18 AM IST

ಪಿಟಿಐ ನವದೆಹಲಿ: ಅದಾನಿ ಸಮೂಹದ ಸಾಗರೋತ್ತರ ನಕಲಿ ಕಂಪನಿಗಳ ಜೊತೆಗೆ ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ) ಮುಖ್ಯಸ್ಥರ ನಂಟಿದೆ ಎಂದು ಅಮೆರಿಕದ ಸಂಶೋಧನಾ ಕಂಪನಿ ಹಿಂಡನ್‌ಬರ್ಗ್‌ ಮಾಡಿದ ಆರೋಪದ ಬಗ್ಗೆ ರಾಜಕೀಯ ಕೆಸರೆರಚಾಟ ತೀವ್ರಗೊಂಡಿದೆ.

ಪ್ರಕರಣವನ್ನು ಜಂಟಿ ಸದನ ಸಮಿತಿ (ಜೆಪಿಸಿ)ಯ ತನಿಖೆಗೆ ಒಪ್ಪಿಸಲೇಬೇಕು, ಇಲ್ಲದಿದ್ದರೆ ದೇಶಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಕಾಂಗ್ರೆಸ್‌ ಹೇಳಿದೆ. ಅದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಹಿಂಡನ್‌ಬರ್ಗ್‌ ವಿಚಾರ ಕಾಂಗ್ರೆಸ್‌ಗೆ ಒಂದು ನೆಪವಷ್ಟೇ ಆಗಿದೆ. ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸುವುದು ಕಾಂಗ್ರೆಸ್‌ನ ಗುರಿ ಎಂದು ಹೇಳಿದೆ. ಅಲ್ಲದೆ, ಕೇಂದ್ರ ಸಚಿವರೊಬ್ಬರು ಹಿಂಡನ್‌ಬರ್ಗ್‌ ವಿರುದ್ಧ ಭಾರತ ಕಠಿಣಾತಿಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಈ ನಡುವೆ, ಹಿಂಡನ್‌ಬರ್ಗ್‌ ಕೂಡ ಪ್ರತಿಕ್ರಿಯಿಸಿದ್ದು, ಸೆಬಿ ಮುಖ್ಯಸ್ಥೆ ಮಾಧವಿ ಬುಚ್‌ ಅವರು ತಮ್ಮ ವಿರುದ್ಧದ ಆರೋಪ ಸುಳ್ಳೆಂದು ಸಾಬೀತುಪಡಿಸಲಿ ಎಂದು ಸವಾಲು ಹಾಕಿದೆ.

ತನಿಖೆ ಆಗ್ರಹಕ್ಕೆ ಬಿಜೆಪಿ ಕಿಡಿ:

ಹಿಂಡನ್‌ಬರ್ಗ್‌ ಆರೋಪದ ಬಗ್ಗೆ ಜೆಪಿಸಿ ತನಿಖೆ ನಡೆಸಬೇಕೆಂಬ ಕಾಂಗ್ರೆಸ್‌ನ ಆಗ್ರಹವನ್ನು ತಳ್ಳಿಹಾಕಿರುವ ಬಿಜೆಪಿ, ಜೆಪಿಸಿ ತನಿಖೆಗೆ ಕೋರುವುದು ಒಂದು ಕಣ್ಣೊರೆಸುವ ತಂತ್ರವಷ್ಟೆ. ಕಾಂಗ್ರೆಸ್‌ನ ಉದ್ದೇಶ ಭಾರತದ ಆರ್ಥಿಕತೆಗೆ ಮಸಿ ಬಳಿದು, ಆರ್ಥಿಕತೆಯನ್ನು ದುರ್ಬಲಗೊಳಿಸುವುದು ಎಂದು ಹೇಳಿದೆ. ಈ ಕುರಿತು ಬಿಜೆಪಿ ನಾಯಕ ರವಿಶಂಕರ ಪ್ರಸಾದ್‌ ಹೇಳಿಕೆ ನೀಡಿದ್ದಾರೆ.

ಅದಾನಿ ವಿರುದ್ಧ ಅಕ್ರಮದ ಆರೋಪ ಮಾಡಿದ್ದ ಹಿಂಡನ್‌ಬರ್ಗ್‌ಗೆ ಸೆಬಿ ನೋಟಿಸ್‌

ಹಿಂಡನ್‌ಬರ್ಗ್‌ ವಿರುದ್ಧ ಕ್ರಮ:

ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಮಾತನಾಡಿ, 'ಹಿಂಡನ್‌ಬರ್ಗ್‌ ಕಂಪನಿ ಕಾಂಗ್ರೆಸ್‌ ಜೊತೆ ಸೇರಿ ಭಾರತಕ್ಕೆ ಕಳಂಕ ತರಲು ಯತ್ನಿಸುತ್ತಿದೆ. ಆ ಕಂಪನಿಯ ವಿರುದ್ಧ ಕಠಿಣಾತಿಕಠಿಣ ಕ್ರಮ ಕೈಗೊಳ್ಳಲಾಗುವುದು. 'ದೊಡ್ಡಪ್ಪನ ಮಗ' ರಾಹುಲ್‌ ಗಾಂಧಿ, ಜೈರಾಂ ರಮೇಶ್‌ ಮತ್ತು ಹಿಂಡನ್‌ಬರ್ಗ್‌ ಗ್ಯಾಂಗ್‌ ಒಟ್ಟಾಗಿ ದೇಶಕ್ಕೆ ಅವಮಾನ ಮಾಡುತ್ತಿದೆ' ಎಂದೂ ಕಿಡಿಕಾರಿದರು.

ದೇಶಾದ್ಯಂತ ಹೋರಾಟ:

ಪ್ರಕರಣವನ್ನು ಜೆಪಿಸಿ ತನಿಖೆಗೆ ಒಪ್ಪಿಸಬೇಕು ಎಂಬ ತನ್ನ ಆಗ್ರಹವನ್ನು ಪುನರುಚ್ಚರಿಸಿದ ಕಾಂಗ್ರೆಸ್‌, ಜೆಪಿಸಿ ತನಿಖೆ ನಡೆಸದಿದ್ದರೆ ದೇಶಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದೆ. ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಮಾತನಾಡಿ, 'ಇದು ತುಂಬಾ ಗಂಭೀರವಾದ ಆರೋಪ. ಪ್ರಧಾನಿಯ ಮೌನ ದೇಶದ ವಿಶ್ವಾಸಾರ್ಹತೆಯನ್ನೇ ಹಾಳುಮಾಡುತ್ತಿದೆ. ಪ್ರಕರಣದ ಬಗ್ಗೆ ಜೆಪಿಸಿ ತನಿಖೆ ನಡೆಸಲೇಬೇಕು' ಎಂದು ಆಗ್ರಹಿಸಿದರು.

ಹಿಂಡೆನ್‌ಬರ್ಗ್‌ ರಿಪೋರ್ಟ್‌ ಬೆನ್ನಲ್ಲಿಯೇ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರುಗಳಲ್ಲಿ ಭಾರೀ ಕುಸಿತ!

ಇನ್ನೊಂದೆಡೆ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, 'ಸೆಬಿ ಮುಖ್ಯಸ್ಥೆ ಮಾಧವಿ ಬುಚ್‌ ವಿರುದ್ಧ ಹಿಂಡನ್‌ಬರ್ಗ್‌ ಮಾಡಿರುವ ಆರೋಪವನ್ನು ಸುಪ್ರೀಂಕೋರ್ಟ್‌ ಸಿಬಿಐ ಅಥವಾ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ತನಿಖೆಗೆ ನೀಡಬೇಕು. ಮಾಧವಿ ಬುಚ್‌ ಕೂಡಲೇ ರಾಜೀನಾಮೆ ನೀಡಬೇಕು' ಎಂದು ಮನವಿ ಮಾಡಿದರು.

ಆರೋಪ ಸುಳ್ಳೆಂದು ಸಾಬೀತುಪಡಿಸಿ-ಹಿಂಡನ್‌ಬರ್ಗ್‌:

ಈ ನಡುವೆ, ಮಾಧವಿ ಬುಚ್‌ ಅವರಿಗೆ 'ಎಕ್ಸ್‌' ಮೂಲಕ ಸವಾಲು ಹಾಕಿರುವ ಹಿಂಡನ್‌ಬರ್ಗ್‌ ಕಂಪನಿ, 'ಬರ್ಮುಡಾ, ಮಾರಿಷಸ್‌ನಲ್ಲಿರುವ ರಹಸ್ಯ ಕಂಪನಿಗಳಲ್ಲಿ ನೀವು ಹೂಡಿಕೆ ಮಾಡಿದ್ದನ್ನು ಒಪ್ಪಿಕೊಂಡಿದ್ದೀರಿ. ಹೀಗಾಗಿ ನಮ್ಮ ಆರೋಪ ಸುಳ್ಳೆಂದು ಸಾಬೀತುಪಡಿಸುವ ಹೊಣೆ ನಿಮ್ಮ ಮೇಲಿದೆ. ಅದಾನಿ ಜೊತೆ ನಂಟಿರುವ ವಿದೇಶಿ ಮತ್ತು ಸ್ವದೇಶಿ ಕಂಪನಿಗಳ ಮೂಲಕ ನೀವು ಯಾವ್ಯಾವ ಗ್ರಾಹಕರ ಜೊತೆಗೆ ವ್ಯವಹರಿಸಿದ್ದೀರೋ ಆ ಪಟ್ಟಿ ಬಿಡುಗಡೆ ಮಾಡಿ. ಅವರೆಲ್ಲರ ಜೊತೆಗಿನ ವ್ಯವಹಾರ ಸ್ವಚ್ಛವಾಗಿದೆ ಎಂಬುದನ್ನೂ ಸಾಬೀತುಪಡಿಸಿ' ಎಂದು ಹೇಳಿದೆ.

ಮತ್ತೆ ಕೋಲಾಹಲ ಸೃಷ್ಟಿಸಿದ ಹಿಂಡನ್‌ಬರ್ಗ್ ವರದಿ, ಸ್ಪಷ್ಟನೆ ನೀಡಿದ ಸೆಬಿ ಅಧ್ಯಕ್ಷೆ!

Latest Videos
Follow Us:
Download App:
  • android
  • ios