ಹೆಚ್ಚುತ್ತಿರುವ ಜೀವನ ವೆಚ್ಚ ಹಾಗೂ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಆಗ್ರಹಿಸಿ ಫ್ರಾನ್ಸ್ನಲ್ಲಿ ಸತತ 3ನೇ ವಾರವೂ ಬೃಹತ್ ಪ್ರತಿಭಟನೆ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಬಳಸಿದ್ದು, ಸಾವಿರಾರು ಜನರನ್ನು ಬಂಧಿಸಲಾಗಿದೆ.
ಪ್ಯಾರಿಸ್: ಹೆಚ್ಚುತ್ತಿರುವ ಜೀವನ ವೆಚ್ಚ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಗಳನ್ನು ಆಗ್ರಹಿಸಿ ಫ್ರಾನ್ಸ್ ಯುವಜನತೆ ಶನಿವಾರ ಮತ್ತೆ ಬೀದಿಗಿಳಿದಿದೆ. ಈ ಮೂಲಕ, ಸತತ 3ನೇ ವಾರಾಂತ್ಯ ಮ್ಯಾಕ್ರಾನ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದಂತಾಗಿದೆ. ಅತ್ತ ಜರ್ಮನಿ ಮತ್ತು ಇಟಲಿಯಲ್ಲಿಯೂ ಪ್ರತಿಭಟನೆಗಳು ನಡೆದಿವೆ.
70 ಸಾವಿರ ಪೊಲೀಸರ ನಿಯೋಜನೆ
ಸುಮಾರು 3.2 ಲಕ್ಷ ಜನರು ಪ್ರತಿಭಟನೆಯ ಭಾಗವಾಗಿದ್ದರು ಎಂದು ಸರ್ಕಾರ ಅಂದಾಜಿಸಿದೆ. ಕಳೆದ ವಾರ 4 ಲಕ್ಷ ಮಂದಿ ಭಾಗಿಯಾಗಿದ್ದರೆ, ಅದರ ಹಿಂದಿನ ವಾರ 5 ಲಕ್ಷ ಜನರು ಪ್ರತಿಭಟನೆ ನಡೆಸಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲೆಂದು ಫ್ರಾನ್ಸ್ ಸರ್ಕಾರ 70 ಸಾವಿರ ಪೊಲೀಸರನ್ನು ನಿಯೋಜಿಸಿದ್ದು, ಹಿಂಸಾಚಾರ ಹಾಗೂ ಲೂಟಿಯಲ್ಲಿ ತೊಡಗಿದ್ದ ಸಾವಿರಾರು ಜನರನ್ನು ಬಂಧಿಸಲಾಗಿದೆ. ಪ್ಯಾರಿಸ್ನ ಪ್ರಮುಖ ಸರ್ಕಾರಿ ಕಚೇರಿಗಳು ಮತ್ತು ಪ್ರವಾಸಿ ತಾಣಗಳ ಬಳಿ ಅಶಾಂತಿ ಸೃಷ್ಟಿಯಾಗದಂತೆ ತಡೆಯಲು ಪ್ರತಿಭಟನಾ ಮೆರವಣಿಗೆಯ ಮಾರ್ಗವನ್ನು ಬದಲಿಸಲಾಗಿತ್ತು.
ಪ್ಯಾರಿಸ್ನಲ್ಲಿ ಪ್ರತಿಭಟನಾಕಾರರು ತಮ್ಮತ್ತ ಗಾಜಿನ ಬಾಟಲಿಗಳು ಮತ್ತು ಪಟಾಕಿಗಳನ್ನು ಎಸೆದಿದ್ದಕ್ಕೆ ಪ್ರತಿಯಾಗಿ ಪೊಲೀಸರು ಸ್ಫೋಟಕಗಳು ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ.
ಆರಂಭದಲ್ಲಿ ಶಾಲಾ ಕಟ್ಟಡಗಳ ದುಸ್ಥಿತಿ, ಶಿಕ್ಷಕರ ಕೊರತೆ ಹಾಗೂ ವಿಶ್ವವಿದ್ಯಾಲಯ ಪ್ರವೇಶ ಪ್ರಕ್ರಿಯೆಯಲ್ಲಿನ ಅಸಮಾನತೆ ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು. ಬಳಿಕ ಕಾರ್ಮಿಕ ಸಂಘಟನೆಗಳು ಮತ್ತು ಜೀವನ ವೆಚ್ಚ ಏರಿಕೆಯಿಂದ ಆಕ್ರೋಶಗೊಂಡ ನಾಗರಿಕರೂ ಕೈಜೋಡಿಸಿದ್ದಾರೆ. ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿನ ದುಸ್ಥಿತಿ, ಜಿರಳೆ ಮತ್ತು ಇಲಿಗಳ ಕಾಟವನ್ನೂ ಪ್ರತಿಭಟನಾಕಾರರು ಪ್ರಸ್ತಾಪಿಸಿದ್ದಾರೆ.
ಜರ್ಮನಿಯಲ್ಲೂ ಪ್ರತಿಭಟನೆ
ಅತ್ತ ಶಿಕ್ಷಣ, ಆರೋಗ್ಯ, ಹವಾಮಾನ ರಕ್ಷಣೆ, ಅಗತ್ಯ ವಸ್ತುಗಳ ದರ ಇಳಿಕೆ, ಶಿಕ್ಷಣ ಮತ್ತು ವಸತಿ ಗೃಹಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಆಗ್ರಹಿಸಿ ಜರ್ಮನಿಯ 30ಕ್ಕೂ ಹೆಚ್ಚು ನಗರಗಳಲ್ಲಿ ‘ಜೆನ್ ಝೀ ರೆಗೆಲ್ಟ್’ ಎಂಬ ಯುವಕರ ಸಂಘಟನೆ ಪ್ರತಿಭಟನೆ ನಡೆಸಿದೆ. ಜತೆಗೆ, ಎಲ್ಲಾ ನಾಗರಿಕರು ಕಡ್ಡಾಯವಾಗಿ ಸೇನೆಗೆ ಸೇರ್ಪಡೆಗೊಳ್ಳಬೇಕೆಂಬ ನಿಯಮ ಜಾರಿಯ ಪ್ರಸ್ತಾಪಕ್ಕೂ ವಿರೋಧ ವ್ಯಕ್ತಪಡಿಸಿದೆ.






