ನವದೆಹಲಿ[ಡಿ.08]: ಭಾನುವಾರ ಮುಂಜಾನೆ ರಾಷ್ಟ್ರ ರಾಜಧಾನಿ ದೆಹಲಿಯ ರಾಣಿ ಜಾನ್ಸಿ ರಸ್ತೆಯಲ್ಲಿರುವ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ 43 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಸುಟ್ಟ ಗಾಯಗಳಾಗಿವೆ. 

ದೆಹಲಿಯ ಅನಜ್ ಮಂಡಿ ಪ್ರದೇಶದ ಕಾರ್ಖಾನೆಯಲ್ಲಿ ನಸುಕಿನ ಜಾವ 5.22ಕ್ಕೆ ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ಪಡೆದ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆಯಾದರೂ, ಬೆಂಕಿ ವೇಗವಾಗಿ ವ್ಯಾಪಿಸಲಾರಂಭಿಸಿದೆ. ಹೀಗಾಗಿ ಇನ್ನಷ್ಟು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸುವ ನಿರೀಕ್ಷೆಯಿದೆ.

ಘಟನೆ ಕುರಿತು ಮಾಹಿತಿ ನೀಡಿದ ಅಗ್ನಿಶಾಮಕ ದಳದ ಉಪ ಮುಖ್ಯಾಧಿಕಾರಿ ಸುನಿಲ್ ಚೌಧರಿ '600 ಚದರ ವಿಸ್ತೀರ್ಣದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಕಾರ್ಖಾನೆಯೊಳಗೆ ದಟ್ಟ ಹೊಗೆಯಿಂದಾಗಿ ತೀವ್ರ ಕತ್ತಲು ಕವಿದಿದೆ. ಶಾಲಾ ಬ್ಯಾಗುಗಳು, ಬಾಟಲ್ ಗಳು ಮತ್ತು ಇತರ ಸಾಮಗ್ರಿ ತಯಾರಕ ಕಾರ್ಖಾನೆ ಇದಾಗಿದ್ದು, ಅವಘಡ ನಡೆದ ಸಂದರ್ಭ 50ಕ್ಕೂ ಅಧಿಕ ಕಾರ್ಮಿಕರು ಒಳಗಿದ್ದರು ಎಂದಿದ್ದಾರೆ. 

ಈ ಸಂಬಂಧ ಮಾಹಿತಿ ನೀಡಿರುವ ಕಾರ್ಖಾನೆ ಮಾಲೀಕ ಚೌಧರಿ 'ಈವರೆಗೆ 15 ಮಂದಿಯನ್ನು ಹೊರ ತಂದು ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿದ್ದೇವೆ. ಕೆಲವರು ಗಾಯಗೊಂಡಿದ್ದು ಇನ್ನು ಕೆಲವರು ಹೊಗೆಯಿಂದಾಗಿ ಉಸಿರುಗಟ್ಟಿ ತಲೆಸುತ್ತಿ ಬಿದ್ದಿದ್ದಾರೆ. ಕಾರ್ಖಾನೆಯೊಳಗೆ ಸುಮಾರು 50 ಕಾರ್ಮಿಕರು ನಿದ್ದೆ ಮಾಡುತ್ತಿದ್ದರು' ಎಂದಿದ್ದಾರೆ.

ಘಟನೆ ಕುರಿತಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಇದೊಂದು ಭೀಕರ ಅವಘಡ. ಮೃತರ ಕುಟುಂಬಕ್ಕೆ ನನ್ನ ಸಂತಾಪ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದಿದ್ದಾರೆ.