ಸೂರತ್(ಸೆ.24): ದೇಶದ ಪ್ರಮುಖ ಬಂದರುಗಳಲ್ಲಿ ಗುರುತಿಕೊಂಡಿರುವ ಸೂರತ್‍ನ ಹಜೀರಾದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‍ಜಿಸಿ) ಘಟಕದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಇಂದು ಗುರುವಾರ ಮುಂಜಾನೆ ಸುಮಾರು 3 ಗಂಟೆಗೆ ಸ್ಫೋಟ ಸಂಭವಿಸಿದ್ದು, ಸ್ಥಳೀಯನ್ನು ಬೆಚ್ಚಿ ಬೀಳಿಸಿತ್ತು, ಘಟನೆಯಿಂದ ಸಂಭವಿಸಿದ  ಬೆಂಕಿಯ ತೀವ್ರತೆ ಎಲ್ಲರನ್ನೂ ಆಥಂಕಕ್ಕೀಡು ಮಾಡಿತ್ತು.

ಒಎನ್‌ಜಿಸಿ ನೀಡಿರುವ ಮಾಹಿತಿ ಅನ್ವಯ ಒಂದು ಟರ್ಮಿನಲ್‌ನಲ್ಲಿ ಸ್ಪೋಟ ಸಂಭವಿಸಿದ್ದು ಅಲ್ಲಿ ಕಾಣಿಸಿಕೊಂಡ ಬೆಂಕಿ ಮತ್ತೊಂದು ಟರ್ಮಿನಲ್‌ಗೆ ಹಬ್ಬಿಕೊಂಡಿರುವುದೆ ಎಂದು ತಿಳಿದು ಬಂದಿದೆ. ಸ್ಥಳೀಯಯರು ಬಂದರಿನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವ ದೃಶ್ಯದ ವಿಡಿಯೋ ಹಾಗೂ ಫೋಟೋಗಳನ್ನು ಸೆರೆ ಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇನ್ನು ಬೆಂಕಿ ಕಾಣಿಸಿಕೊಂಡ ಪರಿಣಾಮ ಘಟನೆ ಸಂಭವಿಸಿದ ಸ್ಥಳದಿಂದ ಸುಮಾರು 10 ಕಿಮೀ ದೂರದವರೆಗೂ ಗ್ಯಾಸ್ ವಾಸನೆ ಆವರಿಸಿದೆ ಎಂದು ನಿವಾಸಿಗಳು ಹೇಳಿದ್ದಾರೆ. ಸ್ಫೋಟದ ತೀವ್ರತೆಗೆ ಅನೇಕ ಮಂದಿ ಭೂಕಂಪ ಸಂಭವಿಸಿದೆ ಎಂದೇ ಭಾವಿಸಿದ್ದರು.

 ಇತ್ತ ಸ್ಫೋಟದ ಕುರಿತು ಸ್ಪಷ್ಟನೆ ನೀಡಿರುವ ಒಎನ್‍ಜಿಸಿ, ಹಜೀರಾ ಅನಿಲ ಸಂಸ್ಕರಣಾ ಘಟಕದಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಘಟನೆಯಲ್ಲಿ ಯಾವುದೇ ವ್ಯಕ್ತಿಗೆ ಹಾಣಿಯಾಗಿಲ್ಲ ಎಂದಿದೆ

ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದ ಕೂಡಲೇ ಘಟನಾ ಸ್ಥಳಕ್ಕೆ ಹತ್ತಿರವಾಗಿದ್ದ ರಿಲಯನ್ಸ್, ಕ್ರಿಬ್ಕೊ, ಎನ್‍ಟಿಪಿಸಿ, ಅದಾನಿ, ಶೆಲ್, ಗೇಲ್, ಜಿಎಸ್‍ಇಜಿ ಮತ್ತು ಇತರ ಹಲವು ಸ್ಥಾವರಗಳನ್ನು ಮುನ್ನೆಚ್ಚರಿಕ ಕ್ರಮವಾಗಿ ಮುಚ್ಚಲಾಗಿದೆ. 

ಹಜೀರಾ ಬಂದರು ಅರಬ್ಬೀ ಸಮುದ್ರದಿಂದ 8 ಕಿಮೀ ದೂರಲ್ಲಿರುವ ತಪತಿ ನದಿಯ ದಡದಲ್ಲಿದೆ. ಇಲ್ಲಿ ತೈಲ ಹಾಗೂ ಗ್ಯಾಸ್‌ಗೆ ಸಂಬಂಧಪಟ್ಟಂತೆ ಒಟ್ಟು 24 ಟರ್ಮಿನಲ್‌ಗಳಿದ್ದು ಈ ಘಟನೆಯಿಂದ ಎಚ್ಚೆತ್ತುಕೊಂಡು ಎಲ್ಲವನ್ನು ಬಂದ್‌ ಮಾಡಲಾಗಿದೆ.  ಸದ್ಯ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ.ಆಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ.