ಮುಂಬೈ(ಡಿ.21): ಕೊರೋನಾ ವೈರಸ್‌ ಹರಡದಂತೆ ತಡೆಯಲು ಮಹಾರಾಷ್ಟ್ರ ಸರ್ಕಾರ ರಾಜ್ಯಾದ್ಯಂತ ಜನರು ಇನ್ನೂ ಆರು ತಿಂಗಳು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಸಂವಾದದಲ್ಲಿ ಇದನ್ನು ಪ್ರಕಟಿಸಿದ್ದಾರೆ.

‘ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಆದರೂ ತಜ್ಞರು ರಾತ್ರಿ ಕಫä್ರ್ಯ ಅಥವಾ ಇನ್ನೊಂದು ಲಾಕ್‌ಡೌನ್‌ ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಾನು ಅದರ ಪರವಾಗಿಲ್ಲ. ಹೊಸ ವರ್ಷಾಚರಣೆ ವೇಳೆ ಎಲ್ಲರೂ ಎಚ್ಚರದಿಂದಿರಿ. ಮಾಸ್ಕ್‌ ಧರಿಸುವುದನ್ನು ರಾಜ್ಯದಲ್ಲಿ ಇನ್ನೂ ಆರು ತಿಂಗಳು ಕಡ್ಡಾಯಗೊಳಿಸಲಾಗಿದೆ’ ಎಂದು ಠಾಕ್ರೆ ಹೇಳಿದ್ದಾರೆ.

ಸುರಕ್ಷತಾ ಕ್ರಮಗಳನ್ನು ಪಾಲಿಸದವರು ತಮ್ಮ ಜೊತೆ ಬೇರೆಯವರನ್ನೂ ಅಪಾಯಕ್ಕೆ ತಳ್ಳುತ್ತಾರೆ. ಯುರೋಪ್‌ನ ಹಲವಾರು ದೇಶಗಳಲ್ಲಿ ಮತ್ತೆ ಕೊರೋನಾ ಹೆಚ್ಚುತ್ತಿದ್ದು, ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಅದನ್ನು ನೋಡಿಯಾದರೂ ನಾವು ಎಚ್ಚೆತ್ತುಕೊಳ್ಳಬೇಕು. ರಾಜ್ಯದಲ್ಲಿ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆಯಾದರೂ ಶಾಲೆಗಳನ್ನು ಪುನಾರಂಭಿಸುವುದೇ ಸಮಸ್ಯೆಯಾಗಿದೆ ಎಂದೂ ಅವರು ತಿಳಿಸಿದ್ದಾರೆ.