ಮುಂಬೈ(ಮಾ.18): ಉದ್ಯಮಿ ಮುಕೇಶ್‌ ಅಂಬಾನಿ ಮನೆಯ ಹೊರಗೆ ಜಿಲೆಟಿನ್‌ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ತಿರುವು ಸಿಕ್ಕಿದೆ. ಸ್ಫೋಟಕ ಇಟ್ಟದಿನವಾದ ಫೆ.25ರಂದು ಅಂಬಾನಿ ಮನೆಯ ಹೊರಗೆ ಬಂಧಿತ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಚಿನ್‌ ವಾಝೆ ‘ವೇಷ ಮರೆಸಿಕೊಂಡು’ ಓಡಾಡುತ್ತಿರುವುದು ಸಿಸಿಟೀವಿ ದೃಶ್ಯದಲ್ಲಿ ಕಂಡುಬಂದಿದೆ.

ತಮ್ಮ ಗುರುತು ಮುಚ್ಚಿಕೊಳ್ಳಲು ವಾಝೆ, ತಲೆಗೆ ದೊಡ್ಡ ಕರವಸ್ತ್ರ ಕಟ್ಟಿಕೊಂಡಿದ್ದರು. ತಮ್ಮ ದೇಹಗಾತ್ರಕ್ಕಿಂತ ತೀರಾ ದೊಡ್ಡದಾಗುವ ಕುರ್ತಾ ಪೈಜಾಮ ಧರಿಸಿದ್ದರು ಹಾಗೂ ಗುರುತು ಸಿಗಬಾರದೆಂದು ಆಂಗಿಕ ಭಾಷೆ ಕೂಡ ಬದಕಿಸಿಕೊಂಡಿದ್ದರು ಎಂದು ಎನ್‌ಐಎ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಫೆ.25ರಂದು ಸ್ಫೋಟಕ ಇದ್ದ ಕಾರನ್ನು ಪಿಪಿಇ ಕಿಟ್‌ ರೀತಿಯ ಉಡುಪು ಧರಿಸಿದ್ದ ವ್ಯಕ್ತಿಯೊಬ್ಬ ಅಂಬಾನಿ ಮನೆ ಹೊರಗೆ ನಿಲ್ಲಿಸಿ ಪರಾರಿಯಾಗುವ ದೃಶ್ಯ ಬೇರೊಂದು ಸಿಸಿಟೀವಿಯಲ್ಲಿ ಇತ್ತೀಚೆಗೆ ಕಂಡುಬಂದಿತ್ತು. ಆದರೆ ಅದು ಪಿಪಿಇ ಕಿಟ್‌ ಅಲ್ಲ. ದೊಡ್ಡ ಗಾತ್ರದ ಕುರ್ತಾ-ಪೈಜಾಮ ಎಂದು ಎನ್‌ಐಎ ಮೂಲಗಳು ಹೇಳಿವೆ. ಹೀಗಾಗಿ ಬಾಂಬ್‌ ಇರಿಸಿದ್ದು ವಾಝೆ ಅವರೇ ಹೌದಾ ಎಂಬ ಸಂದೇಹಕ್ಕೆ ಪುಷ್ಟಿಸಿಕ್ಕಿದೆ.

ಇದೇ ವೇಳೆ, ಮಂಗಳವಾರ ಎನ್‌ಐಎ ಅಧಿಕಾರಿಗಳು ಕಪ್ಪು ಮರ್ಸಿಡಿಸ್‌ ಕಾರಿನಲ್ಲಿ 5 ಲಕ್ಷ ರು. ನಗದು, ಕೆಲವು ಬಟ್ಟೆ, ಹಣ ಎಣಿಸುವ ಯಂತ್ರ ವಶಪಡಿಸಿಕೊಂಡಿದ್ದಾರೆ. ಸ್ಫೋಟಕ ಇಟ್ಟಿದ್ದ ಕಾರಿಗೆ ಬಳಸಲಾದ ಮಾದರಿಯ ನಂಬರ್‌ ಪ್ಲೇಟ್‌ , ಈ ಕಾರಿನಲ್ಲೂ ಸಿಕ್ಕಿದೆ.

ಇತರರು ಭಾಗಿ ಶಂಕೆ:

ಈ ನಡುವೆ, ವಾಝೆಗೆ ಬೇರೆ ಯಾರೋ ಇಂಥ ಕೃತ್ಯ ಎಸಗಲು ಸೂಚನೆ ನೀಡುತ್ತಿರಬಹುದು. ಹೀಗಾಗಿ ಇನ್ನಷ್ಟುಜನರು ಈ ಕೃತ್ಯದಲ್ಲಿ ಭಾಗಿಯಾದ ಶಂಕೆ ಇದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿ ಇವರ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಎನ್‌ಐಎ ಮೂಲಗಳು ಹೇಳಿವೆ.