ಲಕ್ನೋ(ನ.05)  ಎರಡು ಸಾವಿರ ರೂ. ಆಸೆಗೆ ಬಟ್ಟಿಂಗ್ ಕಟ್ಟಿ ಮೊಟ್ಟೆ ತಿನ್ನಲು ಮುಂದಾದವ ಪ್ರಾಣ ಕಳೆದುಕೊಂಡಿದ್ದಾನೆ. 50 ಕೋಳಿ ಮೊಟ್ಟೆಗಳನ್ನು ತಿನ್ನುವುದಾಗಿ ಬೆಟ್ಟಿಂಗ್ ಕಟ್ಟಿದವ ಉತ್ತರಪ್ರದೇಶದ ಜೌನ್​ಪುರ್ ಜಿಲ್ಲೆಯಲ್ಲಿ ಜೀವ ಕಳೆದುಕೊಂಡಿದ್ದಾನೆ.

ಸುಭಾಷ್ ಯಾದವ್ (42) ಬೆಟ್ಟಿಂಗ್ ಕಟ್ಟಿದ ಭೂಪ. ಬಿಬಿಗಂಜ್ ಮಾರುಕಟ್ಟೆ ನಗರದಲ್ಲಿ ಯಾದವ್ ಅವರು ತಮ್ಮ ಸ್ನೇಹಿತನೊಂದಿಗೆ ಮೊಟ್ಟೆ ತಿನ್ನುವಾಗ ಇಬ್ಬರ ನಡುವೆ ಸವಾಲಿನ ಮಾತುಕತೆ ನಡೆದಿದೆ. ಅದು ಏನೆಂದರೆ 50 ಮೊಟ್ಟೆಗಳನ್ನು ತಿಂದರೆ 2 ಸಾವಿರ ಪಡೆದುಕೊಳ್ಳುವ ಚಾಲೆಂಜ್! ನಂತರ ಮೊಟ್ಟೆ ಚಾಲೆಂಜ್ ಶುರುವಾಗಿದೆ.

ಸವಾಲು ಸ್ವೀಕರಿಸಿದ ಯಾದವ್ ಮೊಟ್ಟೆಗಳನ್ನು ತಿನ್ನಲು ಆರಂಭಿಸಿದ್ದಾರೆ. 41 ಮೊಟ್ಟೆಗಳನ್ನು ತಿಂದಾಗ ಯಾದವ್ ಸ್ಥಳದಲ್ಲೇ ಕುಸಿದುಬಿದ್ದು, ಪ್ರಜ್ಞೆ ತಪ್ಪಿದ್ದಾರೆ. ಸ್ಥಳದಲ್ಲಿ ಇದ್ದವರು ಸುಭಾಷ್ ಯಾದವ್ ಅವರನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದಾದ ಕೆಲವು ಗಂಟೆಗಳ ಬಳಿಕ ಚಿಕಿತ್ಸೆ ಫಲಿಸದೆ ಸುಭಾಷ್ ಯಾದವ್ ಸಾವನ್ನಪ್ಪಿದ್ದಾರೆ.

ಸ್ಥಳೀಯರು ಮೊದಲು ಸುಭಾಷ್‌ನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಆದರೆ ಅಲ್ಲಿನ ವೈದ್ಯರು ಆತನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದಾಗ ಆಸ್ಪತ್ರೆಗೆ ದಾಖಲಾದ ಒಂದು ಗಂಟೆಯಲ್ಲಿ ಸುಭಾಷ್ ಮೃತಪಟ್ಟಿದ್ದಾನೆ. ಅತಿ ಹೆಚ್ಚಿನ ತಿನ್ನುವಿಕೆಯೇ ಆತನ ಪ್ರಾಣ ಕಸಿದುಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇಬ್ಬರು ಸ್ನೇಹಿತರು ಇಂಥ ಸವಾಲು ಹಾಕಿಕೊಳ್ಳುವ ಮುನ್ನ ಕೊಂಚ ಯೋಚಿಸಿದ್ದರೆ ಸಾವು ಸಂಭವಿಸುತ್ತಿರಲಿಲ್ಲ. ತಮಾಷೆಯಲ್ಲಿ ಶುರುವಾದ ಚಾಲೆಂಜ್ ಹಾಕಿಕೊಳ್ಳುವ ಹುಚ್ಚಾಟ ಸಾವಿನಲ್ಲಿ ಕೊನೆಯಾಗಿದೆ.