ಅಲಹಾಬಾದ್(ಏ.27)‌: ಲಾಕ್‌ಡೌನ್‌ ವೇಳೆ ಜನರಿಗೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳಲು ಅನುಮತಿ ನೀಡದ ಸರ್ಕಾರದ ನಿಯಮದಿಂದ ಪಾರಾಗಲು ವ್ಯಕ್ತಿಯೊಬ್ಬ ಭರ್ಜರಿ 25 ಟನ್‌ ಈರುಳ್ಳಿ ಖರೀದಿಸಿ ಮುಂಬೈನಿಂದ ಉತ್ತರಪ್ರದೇಶಕ್ಕೆ ತೆರಳಿದ ಅಚ್ಚರಿಯ ಘಟನೆ ನಡೆದಿದೆ.

ಕೊರೋನಾ ಕಾಟ: ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತ..!

ಉತ್ತರಪ್ರದೇಶದ ಅಲಹಾಬಾದ್‌ ಸಮೀಪದ ಪ್ರೇಮ್‌ಮೂರ್ತಿ ಪಾಂಡೆ, ಮುಂಬೈ ಏರ್‌ಪೋರ್ಟ್‌ನಲ್ಲಿ ಕೆಲಸಕ್ಕಿದ್ದ. ಲಾಕ್‌ಡೌನ್‌ನ ಮೊದಲ ಭಾಗವನ್ನು ಮುಂಬೈನ ಅಂಧೇರಿಯಲ್ಲಿರುವ ಸಣ್ಣ ಪ್ರದೇಶದಲ್ಲಿ ಕಳೆದ ಪಾಂಡೆಗೆ, ಲಾಕ್‌ಡೌನ್‌ ವಿಸ್ತರಣೆ ಆದಾಗ ಕೊರೋನಾ ಹರಡುವ ಆತಂಕ ಕಾಡಿತ್ತು. ಹೀಗಾಗಿ ಏನಾದರೂ ಮಾಡಿ ತವರಿಗೆ ತೆರಳಲೇ ಬೇಕು ಎಂದು ಯೋಚಿಸಿದ ಪಾಂಡೆಗೆ ಸರ್ಕಾರ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಸಾಗಣೆಗೆ ಅವಕಾಶ ನೀಡಿರುವ ವಿಷಯ ನೆನಪಿಗೆ ಬಂತು.

ಹೀಗಾಗಿ ಮೊದಲು ನಾಸಿಕ್‌ನಿಂದ 1.30 ಟನ್‌ ಕಲ್ಲಂಗಡಿ ಹಣ್ಣು ಖರೀದಿಸಿ, ಮುಂಬೈನಲ್ಲಿ ಮಾರಿದ. ಅದರಿಂದ ಬಂದ ಹಣ ಹಾಗೂ ತನ್ನಲ್ಲಿದ್ದ ದುಡ್ಡು ಸೇರಿಸಿ 9 ರು.ನಂತೆ 2.30 ಲಕ್ಷ ರು. ಕೊಟ್ಟು 25 ಟನ್‌ ಈರುಳ್ಳಿ ಖರೀದಿಸಿದ. 77 ಸಾವಿರ ರು. ಬಾಡಿಗೆ ನೀಡಿ ಟ್ರಕ್‌ಗೆ ಈರುಳ್ಳಿ ತುಂಬಿಕೊಂಡು 1200 ಕಿ.ಮೀ. ದೂರದ ಏ.20ರಂದು ಅಲಹಾಬಾದ್‌ಗೆ ಪ್ರಯಾಣಿಸಿದ.

ಸೈಕಲ್ ರಿಪೇರಿ ಮಾಡಿ ಕುಟುಂಬ ನಿರ್ವಹಿಸುತ್ತಿರುವ ಛಲಗಾತಿ

ಈರುಳ್ಳಿ ಇದ್ದ ಕಾರಣ ಪೊಲೀಸರು ತಡೆಯೊಡ್ಡಲಿಲ್ಲ. ಏ.23ರಂದು ಟ್ರಕ್‌ ಅಲಹಾಬಾದ್‌ ತಲುಪಿತು. ಆದರೆ ಅಲ್ಲಿ ಯಾರೂ ಈರುಳ್ಳಿ ಖರೀದಿಸಲಿಲ್ಲ. ತನ್ನ ಊರಿಗೆ ತೆರಳಿ ಸಂಗ್ರಹಿಸಿಟ್ಟ. ಅಷ್ಟರಲ್ಲಿ ಪೊಲೀಸರಿಗೆ ವಿಷಯ ಗೊತ್ತಾಗಿ ಆತನನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ.