ನವದೆಹಲಿ(ಏ.01): ಪಶ್ಚಿಮ ಬಂಗಾಳದಲ್ಲಿ 2ನೇ ಹಂತದ ಚುನಾವಣೆಗೂ ಮುನ್ನ 15 ವಿಪಕ್ಷಗಳ ಮುಖಂಡರಿಗೆ ಬಹಿರಂಗ ಪತ್ರವೊಂದನ್ನು ಬರೆದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ಮತ್ತು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಪ್ರಜಾಪ್ರಭುತ್ವದ ಮೇಲೆ ದೌರ್ಜನ್ಯ ಎಸಗುತ್ತಿದೆ. ಒಕ್ಕೂಟ ವ್ಯವಸ್ಥೆಗೆ ಹಾನಿ ಮಾಡುತ್ತಿದೆ. ಈ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನಿಡಿದ್ದಾರೆ.

ಇದೇ ವೇಳೆ, ರಾಜ್ಯಪಾಲರೇ ದಿಲ್ಲಿಯಲ್ಲಿ ಸಾರ್ವಭೌಮ ಎಂಬ ನೂತನ ಮಸೂದೆಯ ಮೂಲಕ ದೆಹಲಿಯಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಕೇಜ್ರಿವಾಲ್‌ ಸರ್ಕಾರದ ಅಧಿಕಾರವನ್ನು ಕೇಂದ್ರ ಸರ್ಕಾರ ಕಸಿದುಕೊಂಡಿದೆ. ರಾಜ್ಯ ಹಾಗೂ ಕೇಂದ್ರಗಳ ನಡುವಿನ ಸಂಬಂಧ ದೇಶದ ಇತಿಹಾಸದಲ್ಲಿ ಎಂದೂ ಇಷ್ಟುಹಳಸಿರಲಿಲ್ಲ ಎಂದು ಮಮತಾ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಸಿಪಿಯ ಶರದ್‌ ಪವಾರ್‌, ಡಿಎಂಕೆಯ ಎಂ.ಕೆ. ಸ್ಟಾಲಿನ್‌, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾವದ್‌, ಶಿವಸೇನೆಯ ಉದ್ಧವ್‌ ಠಾಕ್ರೆ ಹಾಗೂ ಇತರ ಮುಖಂಡರನ್ನು ಉದ್ದೇಶಿಸಿ ಮಮತಾ ಬರೆದಿರುವ ಈ ಪತ್ರವನ್ನು ಟಿಎಂಸಿ ಬುಧವಾರ ಪ್ರಕಟಿಸಿದೆ.