* ಸ್ಪೀಕರ್‌ ಸ್ಥಾನಕ್ಕೆ ಬಿಜೆಪಿಯ ರಾಹುಲ್‌ ನಾಮಪತ್ರ* ಶಿಂಧೆಗೆ 155 ಶಾಸಕರ ಬೆಂಬಲ, ಗೆಲುವು ಸಲೀಸು* ಮಹಾರಾಷ್ಟ್ರಕ್ಕೆ ಫಡ್ನವೀಸ್‌* ಮಹಾ’ ನೂತನ ಸಿಎಂ ಶಿಂಧೆಗೆ ನಾಡಿದ್ದು ವಿಶ್ವಾಸಮತ ಪರೀಕ್ಷೆ

ಮುಂಬೈ(ಜು.2): ಬಹುನಿರೀಕ್ಷಿತ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ಭಾನುವಾರ ಹಾಗೂ ಸೋಮವಾರ ನಡೆಯಲಿದ್ದು, ಭಾನುವಾರ ಸ್ಪೀಕರ್‌ ಚುನಾವಣೆ ಹಾಗೂ ಸೋಮವಾರ ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆ ನೇತೃತ್ವದ ನೂತನ ಸರ್ಕಾರದ ವಿಶ್ವಾಸಮತ ಯಾಚನೆ ನೆರವೇರಲಿದೆ. ತಮ್ಮ ಬಣ ಹಾಗೂ ಬಿಜೆಪಿ ಸೇರಿದಂತೆ 155 ಶಾಸಕರ ಬೆಂಬಲ ಶಿಂಧೆಗೆ ಇದ್ದು ವಿಶ್ವಾಸಮತ ಅಗ್ನಿಪರೀಕ್ಷೆಯನ್ನು ಸುಲಭವಾಗಿ ಜಯಿಸುವ ಸಾಧ್ಯತೆ ಇದೆ.

ಈ ಮೊದಲಿನ ಘೋಷಣೆ ಅನ್ವಯ ಶನಿವಾರದಿಂದಲೇ ಅಧಿವೇಶನ ನಡೆಯಬೇಕಿತ್ತು. ಆದರೆ 1 ದಿನದ ಮಟ್ಟಿಗೆ ಮುಂದೂಡಲಾಗಿದೆ.

ಭಾನುವಾರ ಸ್ಪೀಕರ್‌ ಚುನಾವಣೆ ನಡೆಯಲಿದ್ದು, ಬಿಜೆಪಿ ಶಾಸಕ ರಾಹುಲ್‌ ನಾರ್ವೇಕರ್‌ ನಾಮಪತ್ರ ಸಲ್ಲಿಸಿದ್ದಾರೆ. ಅಗತ್ಯ ಬಿದ್ದರೆ ಅಂದು ಚುನಾವಣೆ ನಡೆಯಲಿದೆ. ಇಲ್ಲದಿದ್ದರೆ ಅವರು ಅವಿರೋಧ ಆಯ್ಕೆಯಾಗಲಿದ್ದಾರೆ. ಕಾಂಗ್ರೆಸ್‌ನ ನಾನಾ ಪಟೋಲೆ ರಾಜೀನಾಮೆಯಿಂದ ಸ್ಪೀಕರ್‌ ಹುದ್ದೆ ಬಹಳ ತಿಂಗಳುಗಳಿಂದ ಖಾಲಿ ಇದೆ.

ಶಿಂಧೆಗೆ 155 ಶಾಸಕರ ಬಲ:

ಇನ್ನು ಏಕನಾಥ ಶಿಂಧೆ ನೇತೃತ್ವದ ನೂತನ ಸರ್ಕಾರಕ್ಕೆ ನಿಜವಾದ ಅಗ್ನಿಪರೀಕ್ಷೆ ಸೋಮವಾರ ಎದುರಾಗಲಿದ್ದು, ಅಂದು ವಿಶ್ವಾಸಮತ ಯಾಚನೆ ನಡೆಯಲಿದೆ. 288 ಶಾಸಕ ಬಲ ಹೊಂದಿರುವ ವಿಧಾನಸಭೆಯಲ್ಲಿ 1 ಸ್ಥಾನ ಖಾಲಿ ಇದೆ. ಹೀಗಾಗಿ ಬಹುಮತಕ್ಕೆ 145ರ ಬದಲು 144 ಶಾಸಕರ ಬೆಂಬಲ ಸಾಕು. 39 ಶಿವಸೇನೆ ಶಾಸಕರು ಹಾಗೂ 10 ಸಣ್ಣಪುಟ್ಟಪಕ್ಷ ಅಥವಾ ಪಕ್ಷೇತರರ ಬೆಂಬಲ ಶಿಂಧೆಗೆ ಇದೆ. ಈ ನಡುವೆ, ಬಿಜೆಪಿ 106 ಬಲ ಹೊಂದಿದೆ. ಹೀಗಾಗಿ ಬಹುಮತಕ್ಕೆ ಬೇಕಾದ 144 ಸ್ಥಾನಗಳ ಬದಲು 155 ಸ್ಥಾನಗಳನ್ನು ಈಗಾಗಲೇ ಶಿಂಧೆ-ಬಿಜೆಪಿ ಮೈತ್ರಿ ಸರ್ಕಾರ ಹೊಂದಿದ್ದು, ಬಹುಮತದ ಗೆರೆಯನ್ನು ಸುಲಭವಾಗಿ ದಾಟಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ವಿಪಕ್ಷಗಳಾದ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ 16, ಎನ್‌ಸಿಪಿ 53 ಹಾಗೂ ಕಾಂಗ್ರೆಸ್‌ 43 ಶಾಸಕರನ್ನು ಹೊಂದಿವೆ. ಸಣ್ಣ ಪುಟ್ಟಪಕ್ಷಗಳು ಹಾಗೂ ಪಕ್ಷೇತರರು ಸೇರಿ ಇನ್ನಿತರ ಶಾಸಕರ ಸಂಖ್ಯಾ ಬಲ 20 ಆಗಿದೆ.

ಮಹಾರಾಷ್ಟ್ರ ವಿಧಾನಸಭೆ

ಒಟ್ಟು ಸ್ಥಾನ 288

ಖಾಲಿ ಸ್ಥಾನ 1

ಬಹುಮತಕ್ಕೆ 144

ಶಿಂಧೆ ಬಣ+ಬಿಜೆಪಿ 155

ಮಹಾ ವಿಕಾಸ ಅಘಾಡಿ ಕೂಟ 112

ಇತರರು 20

ಮಹಾರಾಷ್ಟ್ರ ವಿಧಾನಸಭೆ

ಒಟ್ಟು ಸ್ಥಾನ 288

ಖಾಲಿ ಸ್ಥಾನ 1

ಬಹುಮತಕ್ಕೆ 144

ಏಕನಾಥ ಶಿಂಧೆ ಬಣ 49

ಬಿಜೆಪಿ 106

ಎನ್‌ಸಿಪಿ 53

ಕಾಂಗ್ರೆಸ್‌ 43

ಶಿವಸೇನೆ 16

ಇತರರು 20