Asianet Suvarna News Asianet Suvarna News

ಹರ್ಯಾಣ, ಮಹಾರಾಷ್ಟ್ರದಲ್ಲಿ ಬಿಜೆಪಿ ಜಯದ ಸಮೀಕ್ಷೆಗಳು ನಿಜವಾಗುತ್ತಾ?

ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಇದೇ ವೇಳೆ 18 ರಾಜ್ಯಗಳ 51 ವಿಧಾನಸಭಾ ಮತ್ತು 2 ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಕೂಡಾ ಇಂದೇ ಪ್ರಕಟವಾಗಲಿದೆ.

Maharashtra Haryana Assembly Election Result 2019
Author
Bengaluru, First Published Oct 24, 2019, 7:26 AM IST

 ಹರಾರ‍ಯಣ, ಮಹಾರಾಷ್ಟ್ರದಲ್ಲಿ ಬಿಜೆಪಿ ಜಯದ ಸಮೀಕ್ಷೆಗಳು ನಿಜವಾಗುತ್ತಾ?

ನವದೆಹಲಿ: ಲೋಕಸಭಾ ಚುನಾವಣೆಯ ಬಳಿಕ ಕೇಂದ್ರದಲ್ಲಿನ ಅಧಿಕಾರಾರೂಢ ಎನ್‌ಡಿಎ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳಿಗೆ ಮೊದಲ ಅಗ್ನಿಪರೀಕ್ಷೆ ಎಂದೇ ಬಿಂಬಿತವಾಗಿದ್ದ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಇದೇ ವೇಳೆ 18 ರಾಜ್ಯಗಳ 51 ವಿಧಾನಸಭಾ ಮತ್ತು 2 ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಕೂಡಾ ಇಂದೇ ಪ್ರಕಟವಾಗಲಿದೆ.

ಮಧ್ಯಾಹ್ನದ ವೇಳೆ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆ ಇದೆ. ಸಂಜೆ 5 ಗಂಟೆಯ ಬಳಿಕ ಚುನಾವಣಾ ಆಯೋಗ ಅಧಿಕೃತವಾಗಿ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ. ಈ ಎಲ್ಲಾ ಕ್ಷೇತ್ರಗಳಿಗೆ ಅ.21ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು.

288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ ಹಾಲಿ ಬಿಜೆಪಿ- ಶಿವಸೇನೆ ಮೈತ್ರಿಕೂಟ ಅಧಿಕಾರದಲ್ಲಿದ್ದು, ಮತ್ತೆ ಇದೇ ಮೈತ್ರಿಕೂಟ ಅಧಿಕಾರಕ್ಕೆ ಬರುವ ಲಕ್ಷಣಗಳಿವೆ. ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲೇ ಚುನಾವಣೆ ಎದುರಿಸಿದ್ದ ಬಿಜೆಪಿ- ಶಿವಸೇನೆ ಭರ್ಜರಿ ಜಯದ ವಿಶ್ವಾಸದಲ್ಲಿದೆ. ಇನ್ನು ಸೋನಿಯಾ, ಪ್ರಿಯಾಂಕಾ ಪ್ರಚಾರದ ಕೊರತೆ ಎದುರಿಸಿದ್ದ ಕಾಂಗ್ರೆಸ್‌, ಸ್ಥಳೀಯ ನಾಯಕರ ನೇತೃತ್ವದಲ್ಲೇ ಚುನಾವಣೆ ಎದುರಿಸಿತ್ತು. ಹೀಗಾಗಿ ಈ ಬಾರಿ ಪಕ್ಷ ಹಿಂದಿಗಿಂತ ತನ್ನ ಬಲವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಶಿವಸೇನೆ ಮುಖ್ಯಸ್ಥ ಉದ್ದವ್‌ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ, ಕಾಂಗ್ರೆಸ್‌ ಮುಖಂಡ ಅಶೋಕ್‌ ಚೌಹಾಣ್‌ ಸೇರಿದಂತೆ 3,239 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಇನ್ನು ಹರ್ಯಾಣದಲ್ಲಿ ಮನೋಹರ್‌ಲಾಲ್‌ ಖಟ್ಟರ್‌ ನೇತೃತ್ವದ ಬಿಜೆಪಿ ಹಾಲಿ ಅಧಿಕಾರದಲ್ಲಿದ್ದು, ಅದೇ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಒಂದು ಸಮೀಕ್ಷೆ ಮಾತ್ರ ಅತಂತ್ರ ವಿಧಾನಸಭೆ ರಚನೆ ಸಾಧ್ಯತೆಯ ಭವಿಷ್ಯ ನುಡಿದಿದೆ. ಹೀಗಾಗಿ ಇಲ್ಲಿನ ಫಲಿತಾಂಶ ಕುತೂಹಲ ಮೂಡಿಸಿದೆ. ಹರ್ಯಾಣದಲ್ಲಿ 1,169 ಅಭ್ಯರ್ಥಿಗಳು ಕಣದಲ್ಲಿ ಇದ್ದು, ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಸೇರಿದಂತೆ ಹಲವು ನಾಯಕರ ಭವಿಷ್ಯ ನಿರ್ಧಾರವಾಗಲಿದೆ.

ಉಪಚುನಾವಣೆ: ಇದೇ ವೇಳೆ 18 ರಾಜ್ಯಗಳ 51 ವಿಧಾನಸಭೆ ಮತ್ತು 2 ಲೋಕಸಭಾ ಉಪ ಚುನಾವಣೆಯ ಫಲಿತಾಂಶವು ಗುರುವಾರವೇ ಹೊರಬೀಳಲಿದೆ. ಈ ಪೈಕಿ 30 ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಮತ್ತು ಅದರ ಅಂಗಪಕ್ಷಗಳ ಕೈಯಲ್ಲಿದ್ದವು. ಇನ್ನು 12 ಕ್ಷೇತ್ರಗಳು ಕಾಂಗ್ರೆಸ್‌ ಮತ್ತು ಉಳಿದ ಕ್ಷೇತ್ರಗಳಲ್ಲಿ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿ ಗೆಲವು ಸಾಧಿಸಿದ್ದರು.

ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ 11 ಕ್ಷೇತ್ರಗಳು, ಗುಜರಾತ್‌ನ 6, ಬಿಹಾರದಲ್ಲಿ 5, ಅಸ್ಸಾಂನಲ್ಲಿ 4, ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನ ತಲಾ 2 ಕ್ಷೇತ್ರಗಳಲ್ಲಿ ಸೋಮವಾರ ಉಪ ಚುನಾವಣೆ ನಡೆದಿತ್ತು. ಇದಲ್ಲದೆ, ಪಂಜಾಬ್‌ನ 4, ಕೇರಳದ 5, ಸಿಕ್ಕಿಂನ 3, ರಾಜಸ್ಥಾನದ 2, ಅರುಣಾಚಲ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಛತ್ತೀಸ್‌ಗಢ, ಪುದುಚೇರಿ, ಮೇಘಾಲಯ ಮತ್ತು ತೆಲಂಗಾಣದ ತಲಾ ಒಂದು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಲಾಗಿತ್ತು. ಜೊತೆಗೆ, 2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಸಿಪಿ ತೆಕ್ಕೆಯಲ್ಲಿದ್ದ ಮಹಾರಾಷ್ಟ್ರದ ಸತಾರಾ ಮತ್ತು ಎಲ್‌ಜೆಪಿ ಪಕ್ಷದ ಪಾಲಾಗಿದ್ದ ಬಿಹಾರದ ಸಮಷ್ಠಿಪುರ ಕ್ಷೇತ್ರದ ಉಪಚುನಾವಣೆ ಫಲಿತಾಂಶವೂ ಗುರುವಾರವೇ ಹೊರಬೀಳಲಿದೆ.

ಮಹಾರಾಷ್ಟ್ರ: ಒಟ್ಟು ಸ್ಥಾನ 288, ಬಹುಮತಕ್ಕೆ 145 ಸ್ಥಾನ

ಕಣದಲ್ಲಿರುವ ಅಭ್ಯರ್ಥಿಗಳು- 3,239

ಮತದಾನ ಪ್ರಮಾಣ; ಶೇ.60.45

ಅಧಿಕಾರದಲ್ಲಿ ಇರುವ ಪಕ್ಷ- ಬಿಜೆಪಿ, ಶಿವಸೇನೆ ಮೈತ್ರಿಕೂಟ


ಹರ್ಯಾಣ: ಒಟ್ಟು ಸ್ಥಾನ 90, ಬಹುಮತಕ್ಕೆ 46 ಸ್ಥಾನ

ಕಣದಲ್ಲಿರುವ ಅಭ್ಯರ್ಥಿಗಳು- 1,169

ಮತದಾನ ಪ್ರಮಾಣ; ಶೇ.65

ಅಧಿಕಾರದಲ್ಲಿರುವ ಪಕ್ಷ- ಬಿಜೆಪಿ

Follow Us:
Download App:
  • android
  • ios