'ಬೈಕ್ ಸುಟ್ಬಿಡಿ, ಅಲ್ಲಿ ತನಕ ಆತ ಜೈಲಲ್ಲೇ ಇರ್ಲಿ' ವ್ಹೀಲಿಂಗ್ ಶೋಕಿ ಮಾಡ್ತಿದ್ದ TTF Vasan ಜಾಮೀನು ಅರ್ಜಿ ವಜಾ!
ಅತಿವೇಗದ ಚಾಲನೆ ಮಾಡಿ ಜೈಲುಪಾಲಾಗಿರುವ ಪ್ರಖ್ಯಾತ ಯೂಟ್ಯೂಬರ್ ಟಿಟಿಎಫ್ ವಾಸನ್‌ಗೆ ಮದ್ರಾಸ್ ಹೈಕೋರ್ಟ್ ಖಡಕ್ ಸೂಚನೆ ನೀಡಿದೆ. ಮೊದಲು ಬೈಕ್‌ಅನ್ನು ಸುಟ್ಟುಹಾಕಬೇಕು, ಆ ನಂತರ ವ್ಹೀಲಿಂಗ್, ಬೈಕ್ ಸ್ಟಂಟ್‌ಗಳ ವಿಡಿಯೋ ಪೋಸ್ಟ್ ಮಾಡುತ್ತಿದ್ದ ಯೂಟ್ಯೂಬ್ ಚಾನೆಲ್‌ಅನ್ನು ಬಂದ್ ಮಾಡುವಂತೆ ಸೂಚನೆ ನೀಡಿದೆ.
ಚೆನ್ನೈ (ಅ.6): ಖಾಲಿ ರೋಡ್ ಸಿಕ್ರೆ ಸಾಕು 100-200 ರೂಪಾಯಿ ಪೆಟ್ರೋಲ್ ಬೈಕ್‌ಗೆ ತುಂಬಿಸಿಕೊಂಡು ಖಾಲಿ ರೋಡ್‌ನಲ್ಲಿ ವ್ಹೀಲಿಂಗ್, ಬೈಕ್ ಸ್ಟಂಟ್ ಮಾಡುವ ವ್ಯಕ್ತಿಗಳಿಗೆ ಮದ್ರಾಸ್ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ಅತಿವೇಗದ ಚಾಲನೆ ಮಾಡಿ ಜೈಲುಪಾಲಾಗಿರುವ ಪ್ರಖ್ಯಾತ ಯೂಟ್ಯೂಬರ್ ಹಾಗೂ ಇಂಥ ವಿಡಿಯೋಗಳ ಮೂಲಕವೇ ಯೂಟ್ಯೂಬ್‌ನಲ್ಲಿ ಅಪಾರ ಪ್ರಮಾಣದ ಫಾಲೋವರ್‌ಗಳನ್ನು ಪಡೆದುಕೊಂಡಿರುವ ಟಿಟಿಎಫ್ ವಾಸನ್‌ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ತನ್ನ ವಿಡಿಯೋಗಳ ಮೂಲಕ ಆತ ಇತರ ಯುವಕರ ಮೇಲೆ ಅತಿವೇಗದ ಡ್ರೈವಿಂಗ್ ಮಾಡಲು, ವ್ಹೀಲಿಂಗ್ ಮಾಡಲು ಪ್ರಭಾವ ಬೀರಿದ್ದಾನೆ. ಸ್ವಲ್ಪ ದಿನ ಜೈಲಿನಲ್ಲಿದ್ದು ಅವರ ಪಾಠ ಕಲಿಯಲಿ ಅಲ್ಲಿಯವರೆಗೂ ಅವರ ಜಾಮೀನು ಅರ್ಜಿ ವಜಾ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಸಿವಿ ಕಾರ್ತಿಕೇಯನ್ ತಿಳಿಸಿದ್ದಾರೆ. ಅದಲ್ಲದೆ, ಮುಂದಿನ ಬಾರಿ ಜಾಮೀನು ಅರ್ಜಿ ಹಾಕುವ ಮುನ್ನ, ಟಿಟಿಎಫ್ ವಾಸನ್ ತನ್ನ ಬೈಕ್‌ಅನ್ನು ಸುಟ್ಟುಹಾಕಿರಬೇಕು. ಅದಲ್ಲದೆ, ತನ್ನ ಸ್ಟಂಟ್ ವಿಡಿಯೋಗಳನ್ನು ಪೋಸ್ಟ್ ಮಾಡಿ ಅಪಾರ ಪ್ರಮಾಣದ ಫಾಲೋವರ್‌ಗಳನ್ನು ಪಡೆದಿರುವ ಯೂಟ್ಯೂಬ್ ಚಾನೆಲ್‌ಅನ್ನು ಬಂದ್ ಮಾಡಿರಬೇಕು ಎಂದು ತಿಳಿಸಿದ್ದಾರೆ.
ಟಿಟಿಎಫ್ ವಾಸನ್ ಪರವಾಗಿ ವಾದ ಮಂಡಿಸಿದ ವಕೀಲರು, ವಾಸನ್ ಅವರ ಬಲಗೈ ಮೂಳೆ ಮುರಿತವಾಗಿದೆ. ಖಾಸಗಿ ಆಸ್ಪತ್ರೆಯಿಂದ ವೈದ್ಯಕೀಯ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದರು. ಇದರ ಬೆನ್ನಲ್ಲಿಯೇ , ನ್ಯಾಯಾಧೀಶರು ಜೈಲು ಅಧಿಕಾರಿಗಳಿಗೆ ಅವರ ಗಾಯಗಳನ್ನು ಪರೀಕ್ಷಿಸಲು ವೈದ್ಯಕೀಯ ಚಿಕಿತ್ಸೆ ನೀಡಲು ಸೂಚಿಸಿದರು.
ಇನ್ನು ಸರ್ಕಾರದ ಪರವಾಗಿ ವಾದ ಮಾಡಿದ ವಕೀಲ ಕಿಶೋರ್ ಕುಮಾರ್, ಟಿಟಿಎಫ್ ವಾಸನ್‌ಗೆ ಯೂಟ್ಯೂಬ್‌ನಲ್ಲಿ 45 ಲಕ್ಷಕ್ಕಿಂತಲೂ ಅಧಿಕ ಫಾಲೋವರ್‌ಗಳಿದ್ದಾರೆ. ಇನ್ನು ಟಿಟಿಎಫ್ ವಾಸನ್ 20 ಲಕ್ಷ ರೂಪಾಯಿಯ ದುಬಾರಿ ಬೈಕ್ ಹಾಗೂ 3 ಲಕ್ಷ ರೂಪಾಯಿಯ ಬೈಕ್ ಸೂಟ್ ಹೊಂದಿದ್ದಾರೆ. ಇವುಗಳನ್ನು ಧರಿಸಿಕೊಂಡು ತನ್ನ ಐಷಾರಾಮಿ ಬೈಕ್‌ನಲ್ಲಿ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದಾರೆ. ಇದು ಅವರ ಫಾಲೋವರ್‌ಗಳ ಮೇಲೆ ಪ್ರಭಾವ ಬೀರುತ್ತದೆ. ಅವರು ತಮ್ಮ ಪೋಷಕರಿಗೆ ದುಬಾರಿ ಬೈಕ್‌ಗಳನ್ನು ಖರೀದಿಸಿಕೊಡುವಂತೆ ಪೀಡಿಸಬಹುದು. ಅದಲ್ಲದೆ, ಮಾರಣಾಂತಿಕ ಬೈಕ್ ರೇಸ್‌ಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ಮಾಡಿದಂತಾಗುತ್ತದೆ. ಇದು ಇತರರಿಗೆ ಜೀವ ಬೆದರಿಕೆ ಉಂಟು ಮಾಡುತ್ತದೆ. ಹಾಗಾಗಿ ಅವರಿಗೆ ಜಾಮೀನು ನೀಡಬಾರದು ಎಂದು ವಾದ ಮಾಡಿದರು.
Bengaluru Bike Stunts: ಅಪಾಯಕಾರಿ ಬೈಕ್ ವೀಲಿಂಗ್ ಮಾಡುತ್ತಿದ್ದ ಸವಾರರ ಬಂಧನ!
ಸೆಪ್ಟೆಂಬರ್ 17 ರಂದು ರೋಡ್ ಟ್ರಿಪ್‌ನಲ್ಲಿದ್ದ ಟಿಟಿಎಫ್ ವಾಸನ್, ಕಾಂಚಿಪುರಂನ ದಾಮನ್‌ನಲ್ಲಿನ ಚೆನ್ನೈ-ವೆಲ್ಲೂರ್ ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿ ಅಪಾಯಕಾರಿಯಾದ ಬೈಕ್ ಸ್ಟಂಟ್ ಮಾಡಿದ್ದರು. ಈ ವೇಳೆ ಅವರ ಬೈಕ್ ಅಪಘಾತಕ್ಕೆ ಈಡಾಗಿದ್ದರಿಂದ ಪ್ರಾಣಾಪಾಯದಿಂದ ಅವರು ಪಾರಾಗಿದ್ದರು.ವಿದೇಶದಿಂದ ಆಮದು ಮಾಡಿಕೊಂಡಿದ್ದ ಹೆಲ್ಮೆಟ್ ಹಾಗೂ ರೇಸ್ ಸೂಟ್‌ನ ಕಾರಣದಿಂದಾಗಿ ಅವರು ಬಚಾವ್ ಆಗಿದ್ದರು. ಆದರೆ, ಘಟನೆಯಲ್ಲಿ ಅವರ ಬಲಗೈ ಮೂಳೆ ಮುರಿತವಾಗಿತ್ತು.
ಟ್ರಾಫಿಕ್‌ನಲ್ಲೇ ವೀಲಿಂಗ್ ಪುಂಡರ ಪುಂಡಾಟ; ಖಾಕಿಗೂ ಎಚ್ಚರಿಕೆಗೂ ಬಗ್ಗದ ಭಂಡರು..!
ಕಾಂಚಿಪುರಂ ಜಿಲ್ಲಾ ಪೊಲೀಸರು ವಾಸನ್ ವಿರುದ್ಧ ಐಪಿಸಿ ಸೆಕ್ಷನ್ 279, 308, ಮತ್ತು 336 ಮತ್ತು ಮೋಟಾರು ವಾಹನ ಕಾಯ್ದೆಯ 184,188 ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಸೆಪ್ಟೆಂಬರ್ 26 ರಂದು ಕಾಂಚೀಪುರಂ ಸೆಷನ್ಸ್ ನ್ಯಾಯಾಲಯವು ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ವಾಸನ್ ಜಾಮೀನಿಗಾಗಿ ಮದ್ರಾಸ್ ಹೈಕೋರ್ಟ್ ಅನ್ನು ಸಂಪರ್ಕಿಸಿದರು.