ಭೋಪಾಲ್‌[ಫೆ.22]: ಸಂತಾನಹರಣ ಗುರಿಯನ್ನು ತಲುಪಲು ವಿಫಲವಾದ ಆರೋಗ್ಯ ಕಾರ್ಯಕರ್ತರ ವೇತನ ಕಡಿತ ಮತ್ತು ಕಡ್ಡಾಯ ನಿವೃತ್ತಿಗೊಳಿಸಲಾಗುವುದು ಎಂದು ಮಧ್ಯಪ್ರದೇಶ ಸರ್ಕಾರ ಹೊರಡಿಸಿರುವ ಸುತ್ತೋಲೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ವಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, 1975ರ ತುರ್ತು ಪರಿಸ್ಥಿತಿ ಮರುಕಳಿಸಿದೆ ಎಂದು ಆರೋಪಿಸಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಕಮಲ್‌ನಾಥ್‌ ವಿವಾದಿತ ಆದೇಶ ಹಿಂಪಡೆದುಕೊಂಡಿದ್ದಾರೆ.

ಫೆ.11ರಂದು ಸರ್ಕಾರದ ರಾಷ್ಟ್ರೀಯ ಆರೋಗ್ಯ ಆಯೋಗದ ನಿರ್ದೇಶಕರು ಹೊರಡಿಸಿದ್ದ ಸುತ್ತೋಲೆಯಲ್ಲಿ, ಆರೋಗ್ಯ ಕಾರ್ಯಕರ್ತರು ಪ್ರತಿ ವರ್ಷ 5ರಿಂದ 10 ಜನರನ್ನು ಸಂತಾನಹರಣ ಚಿಕಿತ್ಸೆಗೆ ಕರೆತರುವುದು ಕಡ್ಡಾಯವಾಗಿದೆ. ಒಂದು ವೇಳೆ ಸಂತಾನಹರಣ ಚಿಕಿತ್ಸೆಗೆ ಒಬ್ಬ ವ್ಯಕ್ತಿಯನ್ನೂ ಮನವೊಲಿಸಲು ಸಾಧ್ಯವಾಗದೇ ಇದ್ದರೆ ಅಂಥವರಿಗೆ ಕೆಲಸ ಮಾಡದೇ ಇದ್ದದ್ದಕ್ಕೆ ವೇತನ ಸಿಗುವುದಿಲ್ಲ ಅಥವಾ ಅವರು ಬಲವಂತವಾಗಿ ನಿವೃತ್ತಿಗೊಳಿಸಬೇಕಾಗಿ ಬರಬಹುದು ಎಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ಈ ಸುತ್ತೋಲೆಯನ್ನು ಹಿಂಪಡೆದಿರುವ ಸರ್ಕಾರ ಯಾರನ್ನೂ ಬಲವಂತವಾಗಿ ಸಂತಾನಹರಣಕ್ಕೆ ಒಳಪಡಿಸುವುದಿಲ್ಲ. ಯಾರು ಕೂಡ ಕೆಲಸವನ್ನು ಕಳೆದುಕೊಳ್ಳುವುದಿಲ್ಲ ಎಂದು ಎಂದು ತಿಳಿಸಿದೆ.