ಮಗುವನ್ನು ಕಳೆದುಕೊಂಡ ದುಃಖ ಮತ್ತು ಆಸ್ಪತ್ರೆ ಸಿಬ್ಬಂದಿಗಳ ಅಮಾನವೀಯ ವರ್ತನೆಯಿಂದ ನೊಂದ ತಂದೆಯೊಬ್ಬ, ಹುಟ್ಟಿದಾಗಲೇ ಸಾವು ಕಂಡ ಮಗುವನ್ನು ಬೈಕ್‌ನ ಸೈಡ್‌ ಬಾಕ್ಸ್‌ನಲ್ಲಿಟ್ಟು ಡಿಸಿ ಕಚೇರಿಗೆ ಸಾಗಿಸಿದ್ದಾರೆ. ಡಿಸಿ ಕಚೇರಿಯ ಟೇಬಲ್‌ ಮೇಲೆ ಮಗುವನ್ನು ಹೊರೆತೆಗೆದ ತಕ್ಷಣ ಸ್ಥಳದಲ್ಲಿ ಆಕ್ರೋಶದ ವಾತಾವರಣ ನಿರ್ಮಾಣವಾಗಿತ್ತು.

ನವದೆಹಲಿ (ಅ.20): ಮಧ್ಯಪ್ರದೇಶದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಅಮಾನವೀಯ ಮುಖ ಬಯಲಾಗಿದೆ. ಹೆರಿಗೆಯ ವೇಳೆ ಮೃತಪಟ್ಟ ಶಿಶುವನ್ನು ಹಾಗೂ ಬಾಣಂತಿ ತಾಯಿಯನ್ನು ಮನೆಗೆ ಸಾಗಿಸಲು ಆಸ್ಪತ್ರೆಯವರು ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದರಿಂದ, ಪೋಷಕರು ಮಗುವನ್ನು ಬೈಕ್‌ನ ಸೈಡ್‌ ಬಾಕ್ಸ್‌ನಲ್ಲಿಟ್ಟು ಜಿಲ್ಲಾಧಿಕಾರಿಯ ಕಚೇರಿಗೆ ಸಾಗಿಸಿದ್ದಾರೆ. ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಶಿಶುವಿನ ದೇಹವನ್ನಿಟ್ಟು ನ್ಯಾಯ ಕೇಳಿದ್ದಾರೆ. ದಂಪತಿಗಳು ಬ್ಯಾಗ್‌ನಲ್ಲಿ ತಂದಿದ್ದ ಮೃತದೇಹವನ್ನು ಕಂಡು ಜಿಲ್ಲಾಧಿಕಾರಿಯ ಸಿಬ್ಬಂದಿಗಳು ಹೌಹಾರಿ ಹೋಗಿದ್ದರು. ಇದಾದ ಬಳಿಕ ಇವರು ಘಟನೆಯ ವಿವರಗಳನ್ನು ಹೇಳುವಾಗ ಜನರ ಕಣ್ಣಲ್ಲಿ ನೀರು ಬಂದಿತ್ತು. ಪ್ರಕರಣದ ಗಂಭೀರತೆಯನ್ನ ಗಮನಿಸಿದ ಜಿಲ್ಲಾಧಿಕಾರಿ ತಕ್ಷಣವೇ ದೊಡ್ಡ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಬಂದ ಬಳಿಕ ದಂಪತಿಗಳಿಗೆ ಮಗು ಈಗ ಎಲ್ಲಿದೆ ಎಂದು ಪ್ರಶ್ನೆ ಮಾಡಲಾಗಿತ್ತು. ಈ ವೇಳೆ ತಂದೆ ದಿನೇಶ್‌ ಭಾರತಿ, ಬೈಕ್‌ನ ಸೈಡ್‌ ಬಾಕ್ಸ್‌ಅನ್ನು ತೆಗೆದಿದ್ದಾರೆ. ಈ ವೇಳೆ ತಾಯಿ ಮೀನಾ ಭಾರ್ತಿ, ಮಗುವನ್ನು ಬ್ಯಾಗ್‌ನಿಂದ ಹೊರತೆಗೆದು ಅವರ ಮುಂದಿಟ್ಟಿದ್ದಾರೆ.

ಉತ್ತರ ಪ್ರದೇಶದ (Uttar Pradeh) ಸೋನಭದ್ರ (SonaBhadra) ಜಿಲ್ಲೆಯ ನಿವಾಸಿ ಆಗಿರುವ ದಿನೇಶ್‌ ಭಾರತಿ (Dinesh Bharti), ತಮ್ಮ ಪತ್ನಿ ಗರ್ಭಿಣಿಯಾಗಿದ್ದು ಇನ್ನೇನು ಹೆರಿಗೆ ಆಗುವುದರಲ್ಲಿದೆ ಎನ್ನುವುದನ್ನು ಅರಿತುಕೊಂಡು ಆಕೆಯನ್ನು ಸಿಂಗ್ರೌಲಿ ಜಿಲ್ಲಾ ಆಸ್ಪತ್ರೆಗೆ (Singrauli District hospital) ಕರೆ ತಂದಿದ್ದರು. ಈ ವೇಳೆ ಆಸ್ಪತ್ರೆಯ ವೈದ್ಯರು ಆಕೆಯನ್ನು ಹೆರಿಗೆಗೂ ಮುನ್ನ ಕೆಲವು ಟೆಸ್ಟ್‌ಗಳಿಗಾಗಿ ಕ್ಲಿನಿಕ್‌ಗೆ ಕಳಿಸಿದ್ದರು. ದಿನೇಶ್‌ ಪತ್ನಿಯನ್ನು ಕ್ಲಿನಿಕ್‌ಗೆ ಕರೆದುಕೊಂಡು ಹೋಗು ತಪಾಸಣೆಯನ್ನೂ ಮಾಡಿಸಿದ್ದಾರೆ. ಇದಕ್ಕೆ 5 ಸಾವಿರ ರೂಪಾಯಿ ಖರ್ಚು ಕೂಡ ಮಾಡಿದ್ದಾರೆ.

ಶಿಶು ಸತ್ತು ಹೋಗಿತ್ತು: ಕ್ಲಿನಿಕ್‌ನಲ್ಲಿ ಎಲ್ಲಾ ರೀತಿಯ ಟೆಸ್ಟ್‌ ಮಾಡಿಸಿದ ಬಳಿಕ ಆಕೆಯನ್ನು ಮತ್ತೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸೋಮವಾರ ಮೀನಾ ಭಾರತಿ (Meena Bharati) ಮಗುವಿನ ಜನ್ಮ ನೀಡಿದ್ದರಾದರೂ, ಮಗು ಹುಟ್ಟುವಾಗಲೇ ಸತ್ತು ಹೋಗಿತ್ತು. ಈ ವೇಳೆ ಮಗುವನ್ನು ಹಾಗೂ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಅನ್ನು ಕೇಳಿದ್ದಾರೆ. ಆದರೆ, ಆಸ್ಪತ್ರೆಯ (Madhya Pradesh) ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಾಯ ಮಾಡಲು ನಿರಾಕರಿಸಿದ್ದಾರೆ. ಯಾರೊಬ್ಬರೂ ಕೂಡ ಕನಿಷ್ಠ ಪಕ್ಷ ಏನಾಗಿದೆ ಎನ್ನುವ ಸೌಜನ್ಯವನ್ನೂ ತೋರಿಸಲಿಲ್ಲ.

ಕಳ್ಳತನ ಮಾಡಿ ದಾನ, ಧರ್ಮ ಮಾಡುತ್ತಿದ್ದ ವಿಚಿತ್ರ ಕಳ್ಳ ಅರೆಸ್ಟ್!

ಅಸ್ಪತ್ರೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಅಮಾನವೀಯ ವರ್ತನೆಯಿಂದ ಹಾಗೂ ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದ ದಿನೇಶ್‌ ಭಾರತಿ, ಮಂಗಳವಾರದ ವೇಳೆಗೆ ಮಗುವನ್ನು ಬೈಕ್‌ನ ಸೈಡ್‌ ಬಾಕ್ಸ್‌ನಲ್ಲಿಟ್ಟು ಬಾಣಂತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಜಿಲ್ಲಾಧಿಕಾರಿಯ ಕಚೇರಿ ತಲುಪಿದ್ದಾರೆ. ಬೈಕ್‌ನ ಸೈಡ್‌ಬಾಕ್ಸ್‌ನಲ್ಲಿದ್ದ ಮಗುವಿನ ಶವವನ್ನು ತೆಗೆಯುತ್ತಿದ್ದಂತೆ ಜಿಲ್ಲಾಧಿಕಾರಿ ಕಚೇರಿಯವರು ದಂಗಾಗಿದ್ದಾರೆ. ಈ ಘಟನೆಯ ಕುರಿತಾಗಿ ಮಾತನಾಡಿರುವ ಸಿಂಗ್ರೌಲಿ ಜಿಲ್ಲಾಧಿಕಾರಿ ರಾಜೀವ್ ರಂಜನ್ ಮೀನಾ (Singrauli Collector Rajiv Ranjan Meena), "ಆರೋಪಗಳ ತನಿಖೆಗಾಗಿ ಎಸ್‌ಡಿಎಂ ನೇತೃತ್ವದಲ್ಲಿ ತಂಡವನ್ನು ರಚಿಸಲಾಗುವುದು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.

ಬಂಗಾಳದಿಂದ ಟಾಟಾ ಓಡಿಸಿದ್ದು ಸಿಪಿಎಂ, ನಾನಲ್ಲ : ಮಮತಾ ಬ್ಯಾನರ್ಜಿ

"ಆಸ್ಪತ್ರೆಯಲ್ಲಿದ್ದ ವೈದ್ಯ ಹೆರಿಗೆ ಮಾಡಿಸಬೇಕಿತ್ತು. ಆದರೆ, ಆತ ಕ್ಲಿನಿಕ್‌ಗೆ ಹೋಗಿ ಟೆಸ್ಟ್‌ ಮಾಡಿಸುವತೆ ಹೇಳಿದ್ದರು. ಅಲ್ಲಿ 5 ಸಾವಿರ ತೆಗೆದುಕೊಂಡಿದ್ದಾರೆ. ನನ್ನ ಬಳಿ ಕೇವಲ 3 ಸಾವಿರ ಇದೆ ಎಂದು ಅವರಿಗೆ ಹೇಳಿದ್ದೆ. ಆದರೆ, 5 ಸಾವಿರ ತೆಗೆದುಕೊಂಡು ಬರುವಂತೆ ಕ್ಲಿನಿಕ್‌ನವರು ಹೇಳಿದ್ದರು' ಎಂದು ದಿನೇಶ್‌ ಭಾರತಿ ಹೇಳಿದ್ದಾರೆ. ಮರು ದಿನ ನಾನು ಕ್ಲಿನಿಕ್‌ಗೆ ಬಂದಾಗ, ಮತ್ತೊಮ್ಮೆ ಎಲ್ಲಾ ದಾಖಲಾತಿಗಳನ್ನು ಹೊಸದಾಗಿ ಮಾಡಿದ್ದರು. ಈ ಹಿಂದೆ ಮಾಡಿದ್ದ ದಾಖಲಾತಿಗಳನ್ನೆಲ್ಲಾ ಬದಲಿಗೆ ಸರಿಸಿದ್ದರು ಎಂದು ಆರೋಪಿಸಿದ್ದಾರೆ.