ಕಾಡಾನೆ ಮತ್ತು ಮರಿ ಹಳಿ ದಾಟಲು ರೈಲು ನಿಲ್ಲಿಸಿದ ಚಾಲಕ : ವಿಡಿಯೋ ವೈರಲ್
ಕಾಡಾನೆ ಮತ್ತು ಅದರ ಮರಿ ಹಳಿ ದಾಟಲು ರೈಲು ನಿಲ್ಲಿಸಿದ ಚಾಲಕ | ನೋಡುತ್ತಿದ್ದಂತಯೆ ಎಮರ್ಜನ್ಸಿ ಬ್ರೇಕ್ ಹಾಕಿದ ರೈಲು ಚಾಲಕರು | ಸಾಮಾಜಿಕ ತಾಣದಲ್ಲಿ ವಿಡಿಯೋ ವೈರಲ್ | ನೆಟ್ಟಿಗರಿಂದ ಪ್ರಶಂಸೆ |
ಕೋಲ್ಕತ್ತಾ(ಏ.10): ಈ ಭೂಮಿಯ ಮೇಲೆ ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಮನುಷ್ಯರಂತೆ ಪ್ರಾಣಿ ಪಕ್ಷಿಗಳಿಗೂ ಕೂಡ ತಮ್ಮದೇ ಜೀವನ ಶೈಲಿ ಇದೆ. ಆದರೆ ಮನುಷ್ಯರಂತೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಾಣಿ ಪಕ್ಷಿಗಳಿಗೆ ಅವಕಾಶವಿಲ್ಲ. ಹಾಗಾಗಿ ಪ್ರಾಣಿ ಪಕ್ಷಿಗಳ ಮೇಲೆ ದಯೆ, ಕರುಣೆ ತೋರಿಸುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ. ಮೂಕ ಪ್ರಾಣಿಯೊಂದಕ್ಕೆ ದಯೆ ತೋರಿಸಿರುವ ಘಟನೆ ಈಗ ನಡೆದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಶ್ಚಿಮ ಬಂಗಾಳದ ಅಲಿಪುರ್ದ್ವಾರ್ ರೆಲ್ವೇ ಟ್ವೀಟರ್ ಖಾತೆಯಿಂದ ವೀಡಿಯೋ ಪೋಸ್ಟ್ ಮಾಡಲಾಗಿದ್ದು ಕಾಡು ಆನೆ ಮತ್ತು ಅದರ ಮರಿ ರೈಲು ಹಳಿ ದಾಟುವ ವೇಳೆಯಲ್ಲಿ ಚಾಲಕ ರೇಲ್ವೆಯನ್ನು ಸ್ವಲ್ಪ ದೂರದಲ್ಲೇ ನಿಲ್ಲಿಸಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಾಡು ಆನೆಯನ್ನು ನೋಡುತ್ತಿದ್ದಂತೆಯೇ ಎಮರ್ಜನ್ಸಿ ಬ್ರೇಕ್ ಹಾಕಿದ ರೈಲು ಚಾಲಕರು ರೈಲನ್ನು ಸ್ವಲ್ಪ ದೂರದಲ್ಲೇ ನಿಲ್ಲಸಿದ್ದಾರೆ. ಕಾಡು ಆನೆ ಮತ್ತು ಮರಿ ರೈಲಿನ ಟ್ರ್ಯಾಕ್ ದಾಟಿದ ನಂತರ ಮತ್ತೆ ರೈಲು ಮುಂದಕ್ಕೆ ಸಾಗಿದೆ.
ʼಯುಪಿ ಕ್ಯಾಪಿಟಲ್ ಎಕ್ಸಪ್ರೇಸ್ ಸ್ಪೇಷಲ್ ರೈಲಿನ ಲೋಕೊ ಪೈಲೆಟ್ ಎಸ್.ಸಿ ಸರಕಾರ್ ಮತ್ತು ಅಸಿಸ್ಟೆಂಟ್ ಲೋಕೊ ಪೈಲೆಟ್ ಶ್ರೀ ಟಿ. ಕುಮಾರ್ 4.45ಕ್ಕೆ ಆನೆ ಮತ್ತು ಅದರ ಮರಿ ರೈಲು ಹಳಿ ದಾಟುವುದನ್ನು ನೋಡಿ ಎಮರ್ಜನ್ಸಿ ಬ್ರೇಕ್ ಹಾಕಿದ್ದಾರೆʼ ಎಂದು ಅಲಿಪುರ್ದ್ವಾರ್ ರೆಲ್ವೇ ಟ್ವೀಟರ್ ಖಾತೆ ಪೊಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಚಾಲಕರ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.ವಿಡಿಯೋಗೆ ಜಾಲತಾಣಗಳಲ್ಲಿ ಹಲವಾರು ಕಮೆಂಟ್ಸ್ಗಳು ಕೂಡ ಬಂದಿದ್ದು ಭಗವಂತ ಆ ಚಾಲಕರಿಗೆ ಒಳ್ಳೆದು ಮಾಡ್ಲಿ ಎಂದು ಕೆಲವರು ಬರೆದಿದ್ದರೆ ಇನ್ನೂ ಹಲವರು ಚಾಲಕರಿಗೆ ಹೃದಯಪೂರ್ವಕ ಧನ್ಯವಾದ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಅಲಿಪುರ್ದ್ವಾರ್ ಜಿಲ್ಲೆಯೂ ಮೂರು ವಿಷಯಗಳಿಗೆ ಪ್ರಸಿದ್ಧಿ ಪಡೆದಿದೆ. ಮೂರು ಟಿ (T) ಗಳು ಇಲ್ಲಿನ ಮುಖ್ಯ ಆಕರ್ಷಣೆಗಳಾಗಿವೆ, ಅವು ಟೀ(Tea), ಟೂರಿಸಮ್ (Tourism), ಟಿಂಬರ್ (Timber- ಮರಮುಟ್ಟು ). ಈ ಪ್ರದೇಶದಲ್ಲಿ ದಟ್ಟ ಕಾಡುಗಳು ಕೂಡ ಇದ್ದು ಅಪಾಯದ ಅಂಚಿನಲ್ಲಿರುವ ಹುಲಿ, ಘೇಂಡಾಮೃಗ, ಕಾಡು ಆನೆಗಳಂತಹ ವಿವಿಧ ರೀತಿಯ ಪ್ರಾಣಿಗಳಿಗೆ ಆಶ್ರಯ ತಾಣವಾಗಿದೆ. ಕಲ್ಜಾನಿ ನದಿಯ ದಡದಲ್ಲಿರುವ ಈ ಪ್ರದೇಶವು ಭೂತಾನ್ ಮತ್ತು ಈಶಾನ್ಯ ರಾಜ್ಯಗಳಿಗೆ ಹೆಬ್ಬಾಗಿಲಿನಂತಿದೆ.