ಸುಬ್ರಹ್ಮಣ್ಯ :  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಸಂಪುಟ ನರಸಿಂಹ ಸ್ವಾಮಿ ಮಠದ ತೆಕ್ಕೆಗೆ ತೆಗೆದುಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳ ವಿರುದ್ಧ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಉಳಿಸುವಂತೆ ಆಗ್ರಹಿಸಿ ಮಾ.7ರಂದು ಸುಬ್ರಹ್ಮಣ್ಯ ಬಂದ್‌ಗೆ ಕರೆನೀಡಲಾಗಿದೆ. 

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭಕ್ತರ ಹಿತರಕ್ಷಣಾ ವೇದಿಕೆಯಿಂದ ಕರೆನೀಡಲಾಗಿರುವ ಈ ಬಂದ್‌ ಹಿನ್ನೆಲೆಯಲ್ಲಿ ಅಂದು ಶಾಂತಿಯುತ ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ನಡೆಯಲಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್‌ ಕುಮಾರ್‌ ಕೆ.ಎಸ್‌.ತಿಳಿಸಿದರು.

ಬಂದ್‌ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಬುಧವಾರ ಮಾತನಾಡಿ, ಕುಕ್ಕೆ ದೇವಸ್ಥಾನವನ್ನು ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಹಸ್ತಾಂತರಿಸಬೇಕೆಂದು ಕೋರಿ ಮುಜರಾಯಿ ಇಲಾಖೆಗೆ ಮಠದಿಂದ ನೋಟಿಸ್‌ ನೀಡಲಾಗಿದೆ. ಇದು ಸರಿಯಲ್ಲ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಾರ್ವಜನಿಕ ಸಂಸ್ಥೆ. ಇದನ್ನು ಖಾಸಗಿ ಮಠಕ್ಕೆ ನೀಡಬೇಕೆನ್ನುವ ವಿಚಾರ ಒಪ್ಪುವಂಥದ್ದಲ್ಲ. ಸರ್ವ ಭಕ್ತರೂ ಜಾಗೃತರಾಗಿ ದೇವಾಲಯವನ್ನು ರಕ್ಷಿಸುವ ಕೆಲಸದಲ್ಲಿ ಕೈಜೋಡಿಸಬೇಕು ಎಂದರು.