ಆನ್‌ಲೈನ್ ತರಗತಿಗೆ ಹಾಜರಾಗಲು ಸೌಲಭ್ಯ ಇಲ್ಲದ್ದಕ್ಕೆ ಬಾಲಕಿ ಆತ್ಮಹತ್ಯೆ!
ಆನ್‌ಲೈನ್ ತರಗತಿಗೆ ಹಾಜರಾಗಲು ಸ್ಮಾರ್ಟ್ ಫೋನ್ ಇಲ್ಲ| ಮನೆಯಲ್ಲಿರುವ ಟಿವಿ ಕೂಡ ಕೆಟ್ಟು ಹೋಗಿದೆ| ದಲಿತ ಕುಟುಂಬದ 9ನೇ ತರಗತಿ ವಿದ್ಯಾರ್ಥಿನಿ ಬೆಂಕಿ ಹಚ್ಚಿ ಆತ್ಮಹತ್ಯೆ
ಮಲಪ್ಪುರಂ(ಜೂ.03): ಆನ್‌ಲೈನ್ ತರಗತಿಗೆ ಹಾಜರಾಗಲು ಸ್ಮಾರ್ಟ್ ಫೋನ್ ಇಲ್ಲ, ಮನೆಯಲ್ಲಿರುವ ಟಿವಿ ಕೂಡ ಕೆಟ್ಟು ಹೋಗಿದೆ ಎಂದು ನೊಂದು ದಲಿತ ಕುಟುಂಬದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಸೋಮವಾರ ಕೇರಳದ ಮಲಪ್ಪುರಂ ಜಿಲ್ಲೆಯ ವಲಾಂಚೆರಿಯಲ್ಲಿ ನಡೆದಿದೆ.
14 ವರ್ಷದ ದೇವಿಕಾ ಮೃತ ದುರ್ದೈವಿ. ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಶಾಲಾ-ಕಾಲೇಜುಗಳು ಸ್ಥಗಿತಗೊಂಡಿವೆ. ಆದರೆ ಕೇರಳದಲ್ಲಿ ಸೋಮವಾರದಿಂದ ತರಗತಿಗಳನ್ನು ಆನ್‌ಲೈನ್ ಮುಖಾಂತರ ಆರಂಭಿಸಲಾಗಿದೆ. ಆದರೆ ಈ ಡಿಜಿಟಲ್ ತರಗತಿಗೆ ಹಾಜರಾಗಲು ಕುಟುಂಬದಲ್ಲಿ ಯಾರಲ್ಲೂ ಸ್ಮಾರ್ಟ್ ಫೋನ್ ಇಲ್ಲದ ಕಾರಣ ನೊಂದಿದ್ದ ದೇವಿಕಾ ಸೋಮವಾರ ಮಧ್ಯಾಹ್ನದ ಬಳಿಕ ಕಾಣೆಯಾಗಿದ್ದಳು.
ಬಳಿಕ ಅದೇ ದಿನ ಸಂಜೆ ಮನೆಯಿಂದ ಸ್ವಲ್ಪ ದೂರದಲ್ಲಿ ಸುಟ್ಟುಹೋದ ರೀತಿಯಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿದೆ.ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಮಲಪ್ಪುರಂ ಪೊಲೀಸ್ ವರಿಷ್ಠಾಧಿಕಾರ ಅಬ್ದುಲ್ ಕರೀಮ್ ತಿಳಿಸಿದ್ದಾರೆ. ಈ ನಡುವೆ ಪ್ರಕರಣದ ಬಗ್ಗೆ ವರದಿ ನೀಡುವಂತೆ ರಾಜ್ಯ ಶಿಕ್ಷಣ ಸಚಿವ ಪ್ರೊ. ಸಿ. ರವೀಂದ್ರನ್ ಸೂಚಿಸಿದ್ದಾರೆ.