ಮಹಿಳೆಗೆ ಕಿರುಕುಳ, ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ಗಂಭೀರ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕನನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಇಷ್ಟೇ ಅಲ್ಲ ವಿಧಾನಸಭಾ ಅಧಿವೇಶನದಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ.
ತಿರುವಂತನಪುರಂ (ಆ.25) ದೇಶಾದ್ಯಂತ ವೋಟ್ ಚೋರಿ ಅಭಿಯಾನದ ಮೂಲಕ ಮುನ್ನಡೆಯುತ್ತಿರುವ ಕಾಂಗ್ರೆಸ್‌ಗೆ ಇದೀಗ ಕೇರಳ ಕಾಂಗ್ರೆಸ್ ತಲೆನೋವಾಗಿ ಪರಿಣಮಿಸಿದೆ. ಕೇರಳ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟಥಿಲ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದ ಬೆನ್ನಲ್ಲೇ ಕೋಲಾಹಲ ಸೃಷ್ಟಿಯಾಗಿದೆ. ಮಹಿಳಾ ದೌರ್ಜನ್ಯ ಆರೋಪ ಕೇರಳ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆ ತಂದಿದೆ.ಹೀಗಾಗಿ ಶಾಸಕ ರಾಹುಲ್ ಮಾಂಕೂಟಥಿಲ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಇಷ್ಟೇ ಅಲ್ಲ ವಿಧಾನಸಭೆ ಅಧಿವೇಶದಿಂದ ಹೊರಗುಳಿಯುವಂತೆ ಸೂಚಿಸಲಾಗಿದೆ.
ಆರೋಪ ಕೇಳಿಬಂದ ಬಳಿಕ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಹುಲ್ ಮೇಲೆ ಆರೋಪಗಳು, ಪ್ರಕರಣಗಳು ಹೆಚ್ಚಾಗಿತ್ತು. ಇಷ್ಟೇ ಅಲ್ಲ ಆರಂಭದಲ್ಲಿ ಓರ್ವ ನಟಿ ಕಿರುಕುಳ ಆರೋಪ ಮಾಡಿದ್ದರೆ, ಬಳಿಕ ಕೆಲ ನಟಿಯರು ಗಂಭೀರ ಆರೋಪ ಮಾಡಿದ್ದರು. ಹೀಗಾಗಿ ಪ್ರಕರಣದ ಸ್ವರೂಪ ಬದಲಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ರಾಹುಲ್ ಮಾಂಕೂಟಥಿಲ್ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ಪಟ್ಟು ಹಿಡಿದ ಬಿಜೆಪಿ
ರಾಹುಲ್ ಮಾಂಕೂಟಥಿಲ್ ವಿರುದ್ದ ಕೇಳಿಬಂದ ಆರೋಪಗಳು ಗಂಭೀರವಾಗಿದೆ. ಈ ನಾಯಕ ಶಾಸಕ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯನಲ್ಲ ಎಂದು ಬಿಜಪಿ ಹೇಳಿದೆ. ಹೀಗಾಗಿ ತಕ್ಷಣವೇ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. ಆದರೆ ಕಾಂಗ್ರೆಸ್ ಜಾಣ್ಮೆಯ ನಡೆ ಇಟ್ಟಿದೆ. ಆರೋಪಗಳು, ಆಕ್ರೋಶಗಳು ಹೆಚ್ಚಾಗುತ್ತಿದ್ದಂತೆ ರಾಹುಲ್ ಮಾಂಕೂಟಥಿಲ್ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ, ಆದರೆ ಶಾಸಕನ ಸ್ಥಾನದಿಂದ ರಾಜೀನಾಮೆಗೆ ಸೂಚಿಸಿಲ್ಲ. ಇದಕ್ಕೆ ಮುಖ್ಯ ಕಾರಣಿದೆ. ಪಾಲಕ್ಕಾಡ್ ಶಾಸಕನಾಗಿರುವ ರಾಹುಲ್ ಎಂ ಶಾಸಕ ಸ್ಥಾನ ತೊರೆದರು ಉಪ ಚುನಾವಣೆ ನಡೆಯಲಿದೆ. ಮಹಿಳಾ ದೌರ್ಜನ್ಯ ಪ್ರಕರಣದ ಕಾರಣದಿಂದ ಉಪ ಚುನಾವಣೆ ಎದುರಿಸಿದರೆ ಕಾಂಗ್ರೆಸ್ ಸ್ಥಾನ ಕಳೆದುಕೊಳ್ಳಲಿದೆ ಅನ್ನೋದು ಬಹುತೇಕ ಖಚಿತ. ಹೀಗಾಗಿ ಶಾಸಕ ಸ್ಥಾನ ಉಳಿಸಿಕೊಂಡು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ.
ಕೇರಳ ರಾಜ್ಯ ವಿಧಾನಸಭಾ ಚುನಾವಣೆ 2026ರ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿದೆ. ಇದರ ನಡುವೆ ಉಪ ಚುನಾವಣೆ ಎದುರಿಸಿ ಸೋಲು ಕಂಡರೆ, ವಿಧಾನಸಭೆ ಚುನಾವಣೆಗೂ ಹೊಡೆತ ಬೀಳಲಿದೆ. ಇಷ್ಟೇ ಅಲ್ಲ ಕೇರಳದಲ್ಲಿ ಅಧಿಕಾರ ಮರಳಿ ಹಿಡಿಯಲು ತೀವ್ರ ಗುದ್ದಾಟ ನಡೆಸುತ್ತಿರುವ ಕಾಂಗ್ರೆಸ್‌ಗೆ ಇದು ಮುಳ್ಳಾಗುವ ಸಾಧ್ಯತೆ ಇದೆ. ಕೇರಳದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುತ್ತದೆ. ಆದರೆ ಕಳೆದ ಬಾರಿ ಈ ಸಂಪ್ರದಾಯ ಮುರಿದ ಸಿಪಿಎಂ ಮತ್ತೆ ಅಧಿಕಾರಕ್ಕೆ ಬಂದಿತ್ತು. ಇದು ಸಹಜವಾಗಿ ಕೇರಳ ಕಾಂಗ್ರೆಸ್ ಕಂಗಾಲು ಮಾಡಿತ್ತು. 2026ರಲ್ಲೂ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರದಿದ್ದರೆ ಮುಂದೆ ಕೇರಳದಲ್ಲೂ ಕಾಂಗ್ರೆಸ್ ನಶಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
