ಬೆಂಗಳೂರು[ಫೆ.09]: ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಚಿವಾಲಯದ ಅಧಿಕಾರಿಗಳು ಹಾಗೂ ನೌಕರರು ಕಚೇರಿ ವೇಳೆಯಲ್ಲಿ ಅನಗತ್ಯವಾಗಿ ಹೊರಗಡೆ ಕಾಲಹರಣ ಮಾಡುವುದು, ವೈಯಕ್ತಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಲು ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಚಿವಾಲಯದ ಸಿಬ್ಬಂದಿ ಕಚೇರಿ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವಂತಿಲ್ಲ. ಕಚೇರಿ ಸಮಯದಲ್ಲಿ ತಮ್ಮ ಸ್ಥಾನದಲ್ಲೇ ಕುಳಿತು ಕಾರ್ಯನಿರ್ವಹಿಸಬೇಕು. ಸಿಬ್ಬಂದಿಯಲ್ಲಿ ಶಿಸ್ತು ಹಾಗೂ ಸಮಯ ಪ್ರಜ್ಞೆ ಮೂಡಿಸಲು ಸಿಬ್ಬಂದಿಯ ಚಲನವಲನಗಳ ಬಗ್ಗೆ ನಿಗಾ ವಹಿಸಲು ಚಲನವಲನ ವಹಿ ನಿರ್ವಹಣೆ ಮಾಡಬೇಕು. ಒಂದು ವೇಳೆ ಹೊರಗಡೆ ಹೋಗಬೇಕಾದರೆ ಹಿರಿಯ ಅಧಿಕಾರಿಯ ಅನುಮತಿ ಪಡೆದು, ಹೊರಗೆ ಹೋಗುತ್ತಿರುವ ಕಾರಣ ಮತ್ತು ವಾಪಸು ಬಂದ ಸಮಯವನ್ನು ಸಹಿಯ ಸಮೇತ ಬರೆಯಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

ಕಚೇರಿ ಅವಧಿಯಲ್ಲಿ ಅಧಿಕಾರಿಗಳು ಮತ್ತು ನೌಕರರು ವೈಯಕ್ತಿಕ ಕೆಲಸ, ಅನ್ಯ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಇದಕ್ಕೆ ಕಡಿವಾಣ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ಕಚೇರಿ ವೇಳೆಯಲ್ಲಿ ವೈಯಕ್ತಿಕ ಕೆಲಸ, ಕ್ಯಾಂಟೀನ್‌ ಇತ್ಯಾದಿ ಕಾರಣಗಳನ್ನು ನೀಡಿ ಹೊರಗೆ ಹೋಗುವಂತಿಲ್ಲ.

ಈ ಬಗ್ಗೆ ನಿಗಾ ವಹಿಸಲು ಪ್ರತಿಯೊಂದು ಶಾಖೆಯಲ್ಲಿಯೂ ಒಂದು ಚಲನವಲನ ವಹಿ ನಿರ್ವಹಿಸಬೇಕು. ಹೊರಗೆ ಹೋಗುವವರು ಅನುಮತಿ ಪಡೆಯದೆ, ಕಾರಣ ನಮೂದಿಸದೆ ಹೋಗಿದ್ದರೆ ಅನಧಿಕೃತ ಗೈರು ಎಂದು ಪರಿಗಣಿಸಿ ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದು. ಈ ಬಗ್ಗೆ ಆಗಾಗ್ಗೆ ಹಿರಿಯ ಅಧಿಕಾರಿಗಳು, ಇಲಾಖಾ ಮುಖ್ಯಸ್ಥರು ಪರಿವೀಕ್ಷಣೆ ನಡೆಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.