* 3ನೇ ಅಲೆ ಭೀತಿಯಿಂದ ಲಸಿಕೆ ಪಡೆಯಲು ಪೈಪೋಟಿ* 2ನೇ ಡೋಸ್‌ಗೆ ಅರ್ಹರಾದವರ ಸಂಖ್ಯೆಯೂ ಹೆಚ್ಚಳ* ರಾಜ್ಯದಲ್ಲಿ ಮತ್ತೆ ಕೋವಿಡ್‌ ಲಸಿಕೆಗೆ ಭಾರೀ ಹಾಹಾಕಾರ

ಬೆಂಗಳೂರು(ಆ. 01): ಕೋವಿಡ್‌ ಮೂರನೇ ಅಲೆ ಕದ ತಟ್ಟುತ್ತಿರುವಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೋವಿಡ್‌ ಲಸಿಕೆಗೆ ಹಾಹಾಕಾರ ಎದ್ದಿದೆ. ಮೂರನೇ ಅಲೆ ಆತಂಕದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಲಸಿಕೆ ಪಡೆಯಲು ಮುಂದಾಗಿರುವುದು, ಈಗಾಗಲೇ ಮೊದಲ ಡೋಸ್‌ ಪಡೆದಿರುವವರು 2ನೇ ಡೋಸ್‌ ಪಡೆಯುವ ಅರ್ಹತೆ ಪಡೆದಿರುವುದು ಹಾಗೂ ಬೇಡಿಕೆಯಷ್ಟುಲಸಿಕೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್‌ ಲಸಿಕೆ ಕೊರತೆ ಕಾಣಿಸಿಕೊಂಡಿದೆ. ಹಾವೇರಿ ಸೇರಿ ಕೆಲವೆಡೆ ಲಸಿಕಾ ಕೇಂದ್ರದ ಮುಂದೆ ಟೋಕನ್‌ಗಾಗಿ ಸರದಿ ನಿಲ್ಲುವ ಸ್ಥಿತಿ ಇದೆ.

ಬೆಂಗಳೂರು, ಹಾವೇರಿ, ಬೆಂಗಳೂರು ಗ್ರಾಮಾಂತರ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ, ಬಳ್ಳಾರಿ, ವಿಜಯನಗರ ಮತ್ತಿತರ ಜಿಲ್ಲೆಗಳಲ್ಲಿ ಲಸಿಕೆಯ ತೀವ್ರ ಕೊರತೆ ಇದೆ. ಲಸಿಕಾ ಕೇಂದ್ರವೊಂದರಲ್ಲಿ ದಿನವೊಂದಕ್ಕೆ ನೂರು ಮಂದಿಗೆ ಲಸಿಕೆ ನೀಡಲಾಗುತ್ತಿದ್ದರೆ 500ಕ್ಕೂ ಹೆಚ್ಚು ಜನ ಸೇರುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ಕೆಲ ಕಡೆ ಡೋಸ್‌ ಮುಗಿಯುತ್ತಿದ್ದಂತೆ ‘ಲಸಿಕೆ ಇಲ್ಲ’ ಎಂಬ ಬೋರ್ಡ್‌ ಹಾಕಲಾಗುತ್ತಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದೊಡ್ಡಬಳ್ಳಾಪುರ, ಹಾವೇರಿ, ಉಡುಪಿ, ಬೆಳಗಾವಿ ಸೇರಿ ಕೆಲ ಜಿಲ್ಲೆಗಳಲ್ಲಿ ಲಸಿಕಾ ಕೇಂದ್ರಗಳ ಮುಂದೆ ಸಾರ್ವಜನಿಕರ ವಾಗ್ವಾದ ಮಾಮೂಲಿ ಎಂಬಂತಾಗಿದೆ.

ಆರಂಭದಲ್ಲಿ ಕೋವಿಡ್‌ ಲಸಿಕೆ ಪಡೆಯಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದರು. ಆದರೆ, ಕೋವಿಡ್‌ 2ನೇ ಅಲೆ ಸೃಷ್ಟಿಸಿದ ಅನಾಹುತ ಮತ್ತು ಲಸಿಕೆ ಕುರಿತು ಮೂಡಿದ ಜಾಗೃತಿಯಿಂದಾಗಿ ಹೆಚ್ಚಿನ ಜನ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ. ಅಲ್ಲದೆ ಕಾಲೇಜುಗಳೂ ಆರಂಭವಾಗಿದ್ದು ತರಗತಿ, ಪರೀಕ್ಷೆಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಲಸಿಕೆ ಕಡ್ಡಾಯ ಮಾಡಿರುವುದು, ಈಗಾಗಲೇ ಮೊದಲ ಡೋಸ್‌ ಪಡೆದವರು 2ನೇ ಡೋಸ್‌ಗೆ ಅರ್ಹರಾಗಿರುವುದರಿಂದ ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಉಳ್ಳವರು ಲಸಿಕೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋದರೆ, ಉಳಿದವರು ಲಸಿಕಾ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ.

2ನೇ ಡೋಸ್‌ಗೆ ಆದ್ಯತೆ: ಲಸಿಕೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸದ್ಯ ವಿದ್ಯಾರ್ಥಿಗಳು ಹಾಗೂ 2ನೇ ಡೋಸ್‌ ಪಡೆದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎನ್ನುತ್ತಾರೆ ಆರೋಗ್ಯ ಅಧಿಕಾರಿಗಳು. ರಾಜ್ಯದಲ್ಲಿ ಈಗಾಗಲೇ ಸುಮಾರು 3 ಲಕ್ಷ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಏಪ್ರಿಲ್‌ ಕೊನೇ ವಾರ ಮತ್ತು ಮೇ ಮೊದಲ ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ವ್ಯಾಕ್ಸಿನ್‌ ಪಡೆದಿದ್ದಾರೆ. ಹೀಗಾಗಿ ಕಳೆದೆರಡು ವಾರಗಳಿಂದ ಇವರಲ್ಲಿ ಹೆಚ್ಚಿನವರು 2ನೇ ಡೋಸ್‌ಗಾಗಿ ಲಸಿಕಾ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ.

ಕೋವ್ಯಾಕ್ಸಿನ್‌ಗೆ ಬೇಡಿಕೆ: ರಾಜ್ಯದಲ್ಲಿ ಸದ್ಯ ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ಹೆಚ್ಚಿನ ಜನ ಕೋವ್ಯಾಕ್ಸಿನ್‌ಗಾಗಿ ಪಟ್ಟುಹಿಡಿಯುತ್ತಿದ್ದಾರೆ.

10 ಜಿಲ್ಲೆಗಳಲ್ಲಿ ಕೊರತೆ ಕಾಡಿಲ್ಲ

ಚಿತ್ರದುರ್ಗ, ಬೀದರ್‌, ಮೈಸೂರು, ರಾಮನಗರ, ಕೊಪ್ಪಳ, ಚಿಕ್ಕಬಳ್ಳಾಪುರ, ಕೋಲಾರ, ಶಿವಮೊಗ್ಗ, ಕಲಬುರಗಿ, ಮಂಡ್ಯ ಹೀಗೆ ರಾಜ್ಯದ 10 ಜಿಲ್ಲೆಗಳಲ್ಲಿ ಸದ್ಯಕ್ಕೆ ಲಸಿಕೆಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಇದರಲ್ಲಿ ಚಿತ್ರದುರ್ಗ ಸೇರಿ ಕೆಲ ಜಿಲ್ಲೆಗಳಲ್ಲಿ ಲಸಿಕೆ ಪಡೆಯಲು ಹೆಚ್ಚಿನ ಆಸಕ್ತಿ ತೋರಿಸದಿರುವುದೂ ಒಂದು ಕಾರಣವಾಗಿದೆ. ಮೈಸೂರಲ್ಲಿ ಭಾನುವಾರ ಹಲವು ಕಡೆ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

4 ದಿನಗಳಿಂದ ಲಸಿಕೆ ಪೂರೈಕೆಯಾಗಿಲ್ಲ

ಉಡುಪಿ ಜಿಲ್ಲೆಗೆ 4 ದಿನಗಳಿಂದ ರಾಜ್ಯ ಸರ್ಕಾರದಿಂದ ಒಂದೇ ಒಂದು ಡೋಸ್‌ ಕೋವಿಡ್‌ ಲಸಿಕೆ ಪೂರೈಕೆಯಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ 4 ದಿನಗಳಿಂದ ಲಸಿಕಾ ಕಾರ್ಯಕ್ರಮ ಸ್ಥಗಿತಗೊಂಡಿದೆ. ಲಸಿಕೆ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ ಎಂದು 4 ದಿನಗಳಿಂದ ಸಾರ್ವಜನಿಕರಿಗೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡುತ್ತಿದ್ದಾರೆ. ಸೋಮವಾರ ಅಥವಾ ಮಂಗಳವಾರ ಲಸಿಕೆ ಪೂರೈಕೆಯಾಗುವ ನಿರೀಕ್ಷೆ ಇದೆ.