ಕನ್ನಡಿಗರನ್ನು ಕೆಣಕಿದ ಸುಗಂಧ ಶರ್ಮಾಗೆ ಇದೆಂಥಾ ಸ್ಥಿತಿ ಬಂತು: ಕೆಲಸ ಕಳೆದುಕೊಂಡವಳಿಗೆ ನೆಲೆ ಕಳೆದುಕೊಳ್ಳುವ ಆತಂಕ!
ಕನ್ನಡಿಗರನ್ನು ಕೆಣಕಿ ಉತ್ತರ ಭಾರತೀಯರಿಲ್ಲದೆ ಬೆಂಗಳೂರು ಖಾಲಿ ಎಂದಿದ್ದ ರೀಲ್ಸ್ ರಾಣಿ ಸುಗಂಧ ಶರ್ಮಾ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲಸ ಕಳೆದುಕೊಂಡಿರುವ ಅವರು ಈಗ ವಾಸಿಸಲು ಮನೆ ಸಿಗದೆ ಪರದಾಡುವಂತಾಗಿದೆ.
ಬೆಂಗಳೂರು (ಸೆ.26): ಉತ್ತರ ಭಾರತದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿ ಕರ್ನಾಟಕದ ಅನ್ನ, ಕಾವೇರಿ ನೀರು ಕುಡಿದು ಕನ್ನಡಿಗರಿಗೇ ಕೀಳಿರಿಮೆಯಿಂದ ಮಾತನಾಡಿದ್ದೂ ಅಲ್ಲದೇ, ನಾರ್ತ್ ಇಂಡಿಯನ್ಸ್ ಇಲ್ಲವೆಂದರೆ ಬೆಂಗಳೂರು ಖಾಲಿ ಖಾಲಿ ಎಂದಿದ್ದ ರೀಲ್ಸ್ ರಾಣಿ ಸುಗಂಧ ಶರ್ಮಾಗೆ ಇದೆಂಥಾ ಸ್ಥಿತಿ ಬಂದಿದೆ ನೋಡಿ.. ಕನ್ನಡಿಗರನ್ನು ಕೆಣಕಿ ಈಗಾಗಲೇ ಕೆಲಸವನ್ನೂ ಕಳೆದುಕೊಂಡಿರುವ ಸುಗಂಧ ಶರ್ಮಾ, ಇದೀಗ ಪಿಜಿ ಹಾಗೂ ಮನೆಯನ್ನೂ ಕಳೆದುಕೊಂಡು ಬೀದಿಗೆ ಬೀಳುವ ಆತಂಕಕ್ಕೆ ಸಿಲುಕಿದ್ದಾಳೆ.
ಕನ್ನಡಿಗರನ್ನು ಕೆಣಕಿ ಉಳಿದವರಿಲ್ಲ ಎಂಬ ಮಾತು ಇದೀಗ ಉತ್ತರ ಭಾರತದ ಸುಗಂಧ ಶರ್ಮ ಪ್ರಕರಣದಲ್ಲಿ ನಿಜವಾಗುತ್ತಿದೆ. ಬಾದಾಮಿಯ ಬಂಡೆಗಲ್ಲು ಶಾಸನದಲ್ಲಿ ಕಪ್ಪೆ ಅರಭಟ್ಟ ಅವರು ಕನ್ನಡಿಗರ ಬಗ್ಗೆ ಹೀಗೆ ವರ್ಣಿಸಿದ್ದಾರೆ. "ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯನ್ ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ" ಎಂಬ ವಾಣಿಯು ನಿಜವಾಗುತ್ತಿದೆ. ದೇಶ ಹಾಗೂ ವಿದೇಶಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದವರು ಸ್ಥಳೀಯ ಭಾಷೆ ಹಾಗೂ ಆಚರಣೆಗೆ ಒಗ್ಗಿಕೊಳ್ಳಬೇಕು. ಇಲ್ಲವೇ ತಮ್ಮ ಆಚರಣೆಗಳನ್ನು ಪಾಲಿಸಿಕೊಂಡು ಸುಮ್ಮನೇ ಹೋಗಬೇಕು. ಅದನ್ನು ಬಿಟ್ಟು ಸ್ಥಳೀಯರ ಮೇಲೆ ತಮ್ಮ ಪ್ರಾದೇಶಿಕತೆ ಹೇರಿಕೆ ಮತ್ತು ಅನ್ನ ಕೊಟ್ಟವರನ್ನೇ ಕೀಳಾಗಿ ಕಾಣುವವರಿಗೆ ಎಂಥ ಸ್ಥಿತಿ ಬರುತ್ತದೆ ಎಂಬುದಕ್ಕೆ ಈ ರೀಲ್ಸ್ ರಾಣಿ ಸುಗಂಧ ಶರ್ಮಾ ಒಂದು ವಿಡಿಯೋ ತಾಜಾ ಉದಾಹರಣೆ ಆಗಿದೆ.
ನಾರ್ತ್ ಇಂಡಿಯನ್ಸ್ ಇಲ್ಲವೆಂದರೆ ಬೆಂಗಳೂರು ಖಾಲಿ ಖಾಲಿ ಎಂದಿದ್ದ ಸುಗಂಧ ಶರ್ಮಾಗೆ ಮತ್ತೊಂದು ಸಂಕಷ್ಟ!
ಉತ್ತರ ಭಾರತ ಮೂಲದ ಸುಗಂಧ ಶರ್ಮಾ ಎಂಬ ಮಹಿಳೆ ಕೆಲವು ವರ್ಷಗಳ ಹಿಂದೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಇಲ್ಲಿ ಖಾಸಗಿ ಕಂಪನಿಯೊಂದಲ್ಲಿ ಕೆಲಸ ಮಾಡುತ್ತಾ, ಬಿಡುವಿನ ಸಮಯದ ಸದುಪಯೋಗಕ್ಕೆ ಸಾಮಾಜಿಕ ಜಾಲತಾಣದಲ್ಲಿ ಇನ್‌ಪ್ಲೂಯೆನ್ಸರ್ ಆಗಿ, ವಿಡಿಯೋ ಕ್ರಿಯೇಟರ್ ಆಗಿ ಹಾಗೂ ಟ್ರಾವೆಲ್ ವ್ಲಾಗರ್ ಆಗಿ ಗುರುತಿಸಿಕೊಂಡಿದ್ದಾಳೆ. ತನ್ನ ಪ್ರಸಿದ್ಧಿಗೆ ಬೆಂಗಳೂರು ನಗರವನ್ನು ಬಳಕೆ ಮಾಡಿಕೊಂಡಿದ್ದಾಳೆ. ಇದರ ಬಳಿಕ ಉತ್ತರ ಭಾರತೀಯರ ಮುಂದೆ ತಾನೇ ಸಾಚಾ, ನಾವೇ ಬುದ್ಧಿವಂತರು ಎಂದೆಲ್ಲಾ ಗಿಮಿಕ್ ಮಾಡಿಕೊಂಡು ಹೆಚ್ಚು ಫಾಲೋವರ್ಸ್‌ಗಳನ್ನು ಪಡೆಯಲು ಮುಂದಾಗಿದ್ದಾಳೆ. ಇದಕ್ಕಾಗಿ ತನಗೆ ಅನ್ನ, ನೀರು, ಗಾಳಿ ಹಾಗೂ ವಾಸಕ್ಕೆ ಸ್ಥಳ ಕೊಟ್ಟ ಕನ್ನಡಿಗರು ಹಾಗೂ ಬೆಂಗಳೂರಿನ ಬಗ್ಗೆ ಕೀಳಾಗಿ ಮಾತನಾಡಿದ್ದಾಳೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಇದೀಗ ಬಾಲ ಸುಟ್ಟುಕೊಂಡ ಬೆಕ್ಕಿನಂತಾಗಿದ್ದಾಳೆ.
ಕೆಲಸ ಕಳೆದುಕೊಂಡವಳಿಗೆ ಈಗ ನೆಲೆ ಕಳೆದುಕೊಳ್ಳುವ ಆತಂಕ: ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಸುಗಂಧ ಶರ್ಮ ಇದೀಗ ನಗರವನ್ನೇ ಬಿಟ್ಟು ಹೋಗುವ ಸನ್ನಿವೇಶ ಸೃಷ್ಟಿಯಾಗಿದೆ. ಬೆಂಗಳೂರು ನಗರದಲ್ಲಿ ಸುಗಂಧ ಶರ್ಮಾಗೆ ಉಳಿದುಕೊಳ್ಳಲು ಯಾವುದೇ ಪೇಯಿಂಗ್ ಗೆಸ್ಟ್ (ಪಿಜಿ) ಅಥವಾ ಬಾಡಿಗೆ ಮನೆ ಕೊಡದಂತೆ ಕನ್ನಡಪರ ಸಂಘದಿಂದ ಪಿಜಿ ಮಾಲೀಕರ ಸಂಘಕ್ಕೆ ಮನವಿ ಮಾಡಲಾಗಿದೆ. ಬೆಂಗಳೂರಿನ ಯಾವುದೇ ಬಡವಾಣೆಯಲ್ಲಿ ಮನೆಯನ್ನು ಅಥವಾ ಪಿಜಿಯಗಳಲ್ಲಿ ರೂಮು ಬಾಡಿಗೆ ನೀಡುವ ಮುನ್ನ ಈಕೆಯನ್ನು ಪರಿಶೀಲನೆ ಮಾಡಿ ದೂರವಿಡಿ. ಈಕೆಗೆ ಯಾರೂ ಮನೆ ಅಥವಾ ಪಿಜಿಯಲ್ಲಿ ಅವಕಾಶ ನೀಡಬೇಎಇ ಎಂದು ಕನ್ನಡಪರ ಸಂಘಟನೆಯಿಂದ ಮನವಿ ಮಾಡಲಾಗಿದೆ. ಈ ಮೂಲಕ ಬೆಂಗಳೂರು ಬಗ್ಗೆ ನಾಲಿಗೆ ಹರಿಬಿಟ್ಟು ಕೆಲಸ ಕಳೆದುಕೊಂಡಿದ್ದು, ಇದೀಗ ನೆಲೆಯನ್ನೂ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾಳೆ.
'ಹುಟ್ಟಿದ ಊರಿಗೆ ಬ್ಯಾಗು ಹಿಡಿ.. ಸೀದಾ ನಡಿ..' ಕನ್ನಡಿಗರ ಕೆಣಕಿದ್ದ ಸುಗಂಧ್ ಶರ್ಮ ಕೆಲಸದಿಂದಲೇ ವಜಾ!
ಸುಗಂಧ ಶರ್ಮಾ ರೀಲ್ಸ್‌ನಲ್ಲಿ ಹೇಳಿದ್ದೇನು?
‘ಬೆಂಗಳೂರಿನ ಸ್ಥಳೀಯರಾಗಿರುವ ಅನೇಕರು ಉತ್ತರ ಭಾರತೀಯರನ್ನು ಉದ್ದೇಶಿಸಿ, ನೀವು ಹೊರಟು ಹೋಗಿ ಎನ್ನುತ್ತಿದ್ದಾರೆ. ನಿಜವಾಗಿಯು ನಾವೆಲ್ಲರೂ ಬೆಂಗಳೂರು ತೊರೆದರೆ ನಿಮ್ಮ ನಗರ ಖಾಲಿಯಾಗುತ್ತದೆ. ನಿಮ್ಮ ಪಿ.ಜಿ.ಗಳು ಖಾಲಿ ಆಗುತ್ತವೆ. ನಿಮಗೆ ಹಣ ಸಂಪಾದನೆಯಾಗುವುದಿಲ್ಲ. ಕೋರಮಂಗಲದ ಎಲ್ಲ ಕ್ಲಬ್‌ಗಳು ಖಾಲಿಯಾಗುತ್ತವೆ. ಪಂಜಾಬಿ ಸಂಗೀತಕ್ಕೆ ಕುಣಿಯುವ ಚೆಂದದ ಹುಡುಗಿಯರು ಕಾಣಿಸುವುದಿಲ್ಲ. ಯೋಚಿಸಿ ಮಾತನಾಡಿ. ಉತ್ತರ ಭಾರತೀಯರು ತೊರೆಯಬೇಕು ಎನ್ನುವ ನಿಮ್ಮ ಆಸೆ ನಿಜವಾದರೆ ಬೆಂಗಳೂರಿನ ಕಳೆಯೇ ಹೋಗಿಬಿಡುತ್ತದೆ’ ಎಂದು ಸುಗಂಧಾ ಶರ್ಮಾ ರೀಲ್ಸ್‌ನಲ್ಲಿ ಹೇಳಿದ್ದರು. ಈ ಮೂಲಕ ಉತ್ತರ ಭಾರತೀಯರು ಇಲ್ಲದಿದ್ದರೆ ಬೆಂಗಳೂರಿಗೆ ಆದಾಯದ ಮೂಲ ಇರುವುದಿಲ್ಲ, ಬೆಂಗಳೂರು ಅಭಿವೃದ್ಧಿ ಆಗುವುದಿಲ್ಲ' ಎಂಬ ಅರ್ಥ ಬರುವಂತೆ ಹೇಳಿದ್ದಳು. ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಆಕೆಯ ವಿರುದ್ಧ ಎಲ್ಲ ಕನ್ನಡಿಗರು (ಸಿನಿಮಾ, ಗಾಯನ, ಆಟೋ ಚಾಲಕರು, ಉದ್ಯೋಗಿಗಳು, ನೌಕರರು, ಕನ್ನಡಪರ ಸಂಘಟನೆಗಳ ನಾಯಕರು) ಆಕ್ರೋಶ ವ್ಯಕ್ತಪಡಿಸಿದ್ದರು. ಈಕೆಯ ವಿರುದ್ಧ ಕರವೇ ಪ್ರವೀಣ್ ಶೆಟ್ಟಿ ಅವರು ದೂರು ದಾಖಲಿಸಿದ್ದಾರೆ.