Asianet Suvarna News Asianet Suvarna News

ಭಾರತ- ಚೀನಾ ಸಂಘರ್ಷದ ತಾಣ ಡೆಮ್ಚೋಕ್‌ಗೆ ಮೊದಲ ಬಾರಿ ಮೊಬೈಲ್‌ ಸಂಪರ್ಕ!

* ಜಿಯೋದಿಂದ 4ಜಿ ಸೇವೆ ಆರಂಭ

* ಭಾರತ- ಚೀನಾ ಸಂಘರ್ಷದ ತಾಣ ಡೆಮ್ಚೋಕ್‌ಗೆ ಮೊದಲ ಬಾರಿ ಮೊಬೈಲ್‌ ಸಂಪರ್ಕ

Jio first telecom operator to start services in Ladakh Demchok starts 4G services pod
Author
Bangalore, First Published Nov 3, 2021, 8:42 AM IST

ನವದೆಹಲಿ(ನ.03): ಪೂರ್ವ ಲಡಾಖ್‌ಗೆ (Ladakh) ಹೊಂದಿಕೊಂಡಿರುವ ಚೀನಾ ಗಡಿ (China Border) ಭಾಗದಲ್ಲಿ ಭಾರತದ ಕಟ್ಟಕಡೆಯ ಗ್ರಾಮವಾದ ಡೆಮ್ಚೋಕ್‌ಗೆ (Demchok) ಮೊದಲ ಬಾರಿ ಮೊಬೈಲ್‌ ಸಂಪರ್ಕ ಲಭಿಸಿದೆ.

ಮಂಗಳವಾರ ರಿಲಯನ್ಸ್‌ ಜಿಯೋನ (Reliance Jio) 4ಜಿ ಇಂಟರ್ನೆಟ್‌ ಸೇವೆಗಳಿಗೆ (4G internet Service) ಚಾಲನೆ ನೀಡಲಾಗಿದೆ. ಇದು ಈ ಭಾಗದಲ್ಲಿ ಸೇವೆ ಸಲ್ಲಿಸುವ ಸೇನೆ, ಗ್ರಾಮಸ್ಥರು ಮತ್ತು ಪ್ರವಾಸಿಗರಿಗೆ ದೂರಸಂಪರ್ಕದ ಹೊಸ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ.

ಸಮುದ್ರ ಮಟ್ಟದಿಂದ 13000 ಅಡಿ ಎತ್ತರದಲ್ಲಿರುವ ಚುಶೂಲ್‌ ಗ್ರಾಮದಲ್ಲಿ ರಿಲಯನ್ಸ್‌ ಜಿಯೋ (Reliance Jio) ಸಂಸ್ಥೆ ಸ್ಥಾಪಿಸಿರುವ ಟವರ್‌ಗೆ ಚಾಲನೆ ನೀಡಿ ಮಾತನಾಡಿದ ಸ್ಥಳೀಯ ಸಂಸದ ಜ್ಯಾಮ್ಯಂಗ್‌ ತ್ಸೇರಿಂಗ್‌ ನ್ಯಾಮ್‌ಗೆಲ್‌ (Jamyang Tsering Namgyal), ‘ಇದು ಗಡಿ ಭಾಗದ ಗ್ರಾಮಗಳ ಗ್ರಾಮೀಣ ಆರ್ಥಿಕತೆಗೆ ನೆರವಾಗಲಿದೆ. ಜತೆಗೆ ಗಡಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಡೆಮ್ಚೋಕ್‌ ಜೊತೆಗೆ, ಚುಶೂಲ್‌, ನ್ಯೋಮಾ ಥಾರುಕ್‌ ಮತ್ತು ಡರ್ಬುಕ್‌ನಲ್ಲೂ ಮಂಗಳವಾರ 4ಜಿ ಸೇವೆಗಳಿಗೆ ಚಾಲನೆ ನೀಡಲಾಯಿತು.

ಡೆಮ್ಚೋಕ್‌ ಹಾಗೂ ಚುಶೂಲ್‌ ಗ್ರಾಮಗಳು ಭಾರತ ಮತ್ತು ಚೀನಾ ಸೇನೆಯ ನಡುವೆ ಸಂಘರ್ಷ ಏರ್ಪಡುವ ಪ್ರಮುಖ ಸ್ಥಳಗಳ ಪೈಕಿ ಒಂದಾಗಿವೆ.

ಚೀನಾ ಮೇಲೆ ನಿಗಾಕ್ಕೆ ‘ಲೋಕಲ್‌ ಅಸ್ತ್ರ’

ಡಿಯಲ್ಲಿ ಚೀನಾ ಯೋಧರ ಚಟುವಟಿಕೆ ಹಾಗೂ ಗಸ್ತು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆ ದೇಶದ ಸೈನಿಕರ ಮೇಲೆ ಕಣ್ಗಾವಲು ಇಡಲು ಭಾರತೀಯ ಸೇನೆ ಎರಡು ದೇಶೀಯ ‘ಅಸ್ತ್ರ’ಗಳನ್ನು ಕೂಡ ಬಳಕೆ ಮಾಡುತ್ತಿದೆ.

ಮೇಜರ್‌ ಭವ್ಯಾ ಶರ್ಮ ಎಂಬುವರು ಫೇಸ್‌ ರೆಕಗ್ನಿಷನ್‌ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ. ಮತ್ತೊಂದೆಡೆ ಭಾರತೀಯ ಸೇನೆಯೇ ಕೈಯಲ್ಲಿ ಹಿಡಿಯಬಹುದಾದ ಥರ್ಮಲ್‌ ಇಮೇಜರ್‌ ಅಭಿವೃದ್ಧಿಪಡಿಸಿದ್ದು, ಇದನ್ನೂ ಸರ್ವೇಕ್ಷಣೆಗೆ ಬಳಸುತ್ತಿದೆ. ಉಪಗ್ರಹ, ರಾಡಾರ್‌, ಸೆನ್ಸರ್‌, ಡ್ರೋನ್‌ ಹಾಗೂ ವಿಮಾನಗಳ ಜತೆಗೆ ಸೇನೆ ಈ ಸಾಧನಗಳನ್ನೂ ಬಳಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಹೇಗೆ ನಿಗಾ?:

1. ಮೇಜರ್‌ ಶರ್ಮಾ ಅವರ ಫೇಸ್‌ ರೆಕಗ್ನಿಷನ್‌ ಸಾಫ್ಟ್‌ವೇರ್‌ ಅನ್ನು ಅರುಣಾಚಲಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ. ಚೀನಾ ಯೋಧರು ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಗೆ ಬರುತ್ತಿದ್ದಂತೆ ಅವರ ಮುಖವನ್ನು ಈ ಸಾಫ್ಟ್‌ವೇರ್‌ ಗುರುತಿಸುತ್ತದೆ. ಸೇನೆ ಈಗಾಗಲೇ ಸರ್ವೇಕ್ಷಣಾ ವಿಧಾನದ ಮೂಲಕ ಸಂಗ್ರಹಿಸಿರುವ ಚೀನಾ ಯೋಧರ ಮುಖಚರ್ಯೆ ಜತೆ ಹೋಲಿಕೆ ಮಾಡಿ ನೋಡುತ್ತದೆ. ಪೈಥಾನ್‌ ಲಾಂಗ್ವೇಜ್‌ ಕೋಡ್‌ ಅನ್ನು ಆಧರಿಸಿ ಈ ಸಾಫ್ಟ್‌ವೇರ್‌ ಕೆಲಸ ಮಾಡುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಯೋಧರ ಮುಖ ಗುರುತಿಸಿ ಮಾಹಿತಿ ನೀಡುತ್ತದೆ. ಈ ಸಾಫ್ಟ್‌ವೇರ್‌ಗೆ 5 ಸಾವಿರ ರು. ಖರ್ಚಾಗಿದ್ದು, ಇಂಟರ್ನೆಟ್‌ ಇಲ್ಲದೆಯೂ ಕಾರ್ಯನಿರ್ವಹಿಸುತ್ತದೆ.

2. ಸೇನೆ ತಾನೇ ಅಭಿವೃದ್ಧಿಪಡಿಸಿರುವ ಕೈಯಲ್ಲಿ ಬಳಸುವ ಥರ್ಮಲ್‌ ಇಮೇಜರ್‌ ಅನ್ನು ಎಲ್‌ಎಸಿಯ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದೆ. ಚೀನಾ ಸೈನಿಕರು, ವಾಹನಗಳು ಬಂದರೆ ಎಷ್ಟು ಸಂಖ್ಯೆಯಲ್ಲಿ ಯೋಧರು, ವಾಹನ ಇವೆ ಎಂಬ ಮಾಹಿತಿ ನೀಡುತ್ತದೆ. ಪ್ರಾಣಿಗಳ ಓಡಾಟವನ್ನೂ ಖಚಿತಪಡಿಸುತ್ತದೆ ಎಂದು ವರದಿಗಳು ಹೇಳಿವೆ.

ಚೀನಾದ ನೂತನ ಭೂ ಗಡಿ ಕಾನೂನಿಗೆ ಭಾರತ ಖಂಡನೆ

 ಭೂ ಗಡಿಗೆ ಸಂಬಂಧಿಸಿದಂತೆ ನೂತನ ಕಾನೂನು ಜಾರಿಗೆ ತರುತ್ತಿರುವ ಚೀನಾದ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ನೆಪಮಾತ್ರಕ್ಕೆ ಗಡಿಯಲ್ಲಿ ಅಭಿವೃದ್ಧಿ ಎನ್ನುತ್ತಿರುವ ಚೀನಾ ಈ ವಿಚಾರದಲ್ಲಿ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದೆ ಎಂದು ಭಾರತ ಟೀಕಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರ ಅರಿಂದಾಮ್‌ ಬಗ್ಚಿ, ಗಡಿ ಅಭಿವೃದ್ಧಿ ಎಂಬುದು ದ್ವಿಪಕ್ಷೀಯ ಒಪ್ಪಂದದ ಮೇಲೆ ನಡೆಯುವ ಕಾರ್ಯ. ಆದ್ರೆ ಈಗ ಚೀನಾ ಜಾರಿ ಮಾಡುತ್ತಿರುವ ಕಾನೂನು ಏಕಪಕ್ಷೀಯ ನಡೆಯಾಗಿದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದಿದ್ದಾರೆ. ಚೀನಾದ ಏಕಪಕ್ಷೀಯ ನಡೆ ಗಡಿಯಲ್ಲಿ ಎರಡೂ ದೇಶಗಳಿಗೆ ಸಮಸ್ಯೆ ತಂದೊಡುತ್ತದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಭಂಗಕ್ಕೆ ಕಾರಣವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios