* ‘ವೈಎಸ್‌ಆರ್‌ ತೆಲಂಗಾಣ’ ಪಕ್ಷಕ್ಕೆ ಶರ್ಮಿಳಾ ಚಾಲನೆ* ಜಗನ್‌ ಸೋದರಿಯಿಂದ ಹೊಸ ಪಕ್ಷ ಸ್ಥಾಪನೆ* ಆಂಧ್ರ ಬಿಟ್ಟು ತೆಲಂಗಾಣದಲ್ಲಿ ಹೊಸ ಪಕ್ಷ ಸ್ಥಾಪನೆ

ಹೈದರಾಬಾದ್‌(ಜು.09): ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ಜಗನ್‌ ಮೋಹನ್‌ ರೆಡ್ಡಿ ಅವರ ಸೋದರಿ ವೈ.ಎಸ್‌ ಶರ್ಮಿಳಾ ಅವರು ಗುರುವಾರ ‘ವೈಎಸ್‌ಆರ್‌ ತೆಲಂಗಾಣ’ ಎಂಬ ಹೊಸ ಪಕ್ಷಕ್ಕೆ ಅಧಿಕೃತ ಚಾಲನೆ ನೀಡಿದರು.

ಇಲ್ಲಿನ ಖಾಸಗಿ ಹಾಲ್‌ವೊಂದರಲ್ಲಿ ಪಕ್ಷದ ಕಾರ‍್ಯಕರ್ತರ ಸಮ್ಮುಖದಲ್ಲಿ ತಮ್ಮ ಹೊಸ ಪಕ್ಷದ ಬಾವುಟ ಮತ್ತು ಧ್ಯೇಯೋದ್ಧೇಶಗಳನ್ನು ಪ್ರಚುರಪಡಿಸಿದ ಶರ್ಮಿಳಾ ಅವರು, ಪಕ್ಷ ಸ್ಥಾಪನೆಯಾದ 100ನೇ ದಿನಕ್ಕೆ ರಾಜ್ಯಾದ್ಯಂತ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದರು.

ತಮ್ಮ ತಂದೆ ಹಾಗೂ ಆಂಧ್ರದ ಮಾಜಿ ಮುಖ್ಯಮಂತ್ರಿ ರಾಜಶೇಖರ್‌ ರೆಡ್ಡಿ ಅವರ ಆಕಾಂಕ್ಷೆಯಂತೆ ರಾಜಣ್ಣ ರಾಜ್ಯಂ ಆಡಳಿತ ನೀಡುವುದೇ ತಮ್ಮ ಧ್ಯೇಯ. ರಾಜ್ಯದ ಜನತೆಗೆ ಕಲ್ಯಾಣ, ಸ್ವ-ಸಮೃದ್ಧಿ ಮತ್ತು ಗುಣಮಟ್ಟದ ಜೀವನ ಕಲ್ಪಿಸುವುದೇ ವೈಎಸ್‌ಆರ್‌ ತೆಲಂಗಾಣದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಈ ವೇಳೆ ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್‌ ಮತ್ತು ಬಿಜೆಪಿ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ತೆಲಂಗಾಣದಲ್ಲಿ ಟಿಆರ್‌ಎಸ್‌ ಹೊರತುಪಡಿಸಿದರೆ ಉಳಿದ ಯಾವುದೇ ಪಕ್ಷಗಳು ಇನ್ನೂ ನೆಲೆ ಕಂಡುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಶರ್ಮಿಳಾ ಅವರು ತಮ್ಮ ಸೋದರ ಆಡಳಿತ ನಡೆಸುತ್ತಿರುವ ಆಂಧ್ರಪ್ರದೇಶವನ್ನು ಬಿಟ್ಟು ತೆಲಂಗಾಣದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ ಎನ್ನಲಾಗುತ್ತಿದೆ.