ನವದೆಹಲಿ(ಅ.21): ಬಾಬ್ರಿ ಮಸೀದಿ ಧ್ವಂಸದ ವಿರುದ್ಧ ಭಾರತೀಯ ಮುಸ್ಲಿಮರು ಸಶಸ್ತ್ರ ಜಿಹಾದ್‌ ನಡೆಸಿ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ಜಾಗತಿಕ ಮಟ್ಟದ ಕುಖ್ಯಾತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ರಹಸ್ಯ ಕರೆ ನೀಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ದಕ್ಷಿಣ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಐಸಿಸ್‌ನ ಬೇರುಗಳು ಒಂದೊಂದಾಗಿ ಪತ್ತೆಯಾಗುತ್ತಿರುವುದರ ಬೆನ್ನಲ್ಲೇ ಈ ಕರೆ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ. ಇಸ್ಲಾಮಿಕ್‌ ಸ್ಟೇಟ್‌ ಭಯೋತ್ಪಾದಕ ಸಂಘಟನೆಯ ನಿಯತಕಾಲಿಕೆಯಾದ ‘ವಾಯ್‌್ಸ ಆಫ್‌ ಇಂಡಿಯಾ’ದ 9ನೇ ಆವೃತ್ತಿಯಲ್ಲಿ ಭಾರತದ ವಿರುದ್ಧ ಜಿಹಾದ್‌ ನಡೆಸಿ ಬಾಬ್ರಿ ಮಸೀದಿ ಧ್ವಂಸದ ವಿರುದ್ಧ ಸೇಡು ತೀರಿಸಿಕೊಳ್ಳಲು ಕರೆ ನೀಡಲಾಗಿದೆ.

ಟೆಲಿಗ್ರಾಂ ಮುಂತಾದ ರಹಸ್ಯ ವೆಬ್‌ ತಾಣಗಳಲ್ಲಿ ಈ ನಿಯತಕಾಲಿಕೆ ಹರಿದಾಡುತ್ತಿದೆ. ಇದು ಭದ್ರತಾ ಸಂಸ್ಥೆಗಳಿಗೆ ದೊರೆತಿದ್ದು, ಅದರಲ್ಲಿ ಬಾಬ್ರಿ ಮಸೀದಿ ಧ್ವಂಸದ ಚಿತ್ರ ಪ್ರಕಟಿಸಿ ‘ಬಾಬ್ರಿಗೆ ಸೇಡು ತೀರಿಸಿಕೊಳ್ಳಲಾಗುವುದು’ ಎಂದು ಪ್ರಚೋದನಾತ್ಮಕ ಬರಹ ಬರೆಯಲಾಗಿದೆ. ಅದರಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಹೋರಾಟ ಮುಂದುವರೆಸುವಂತೆಯೂ ಕರೆ ನೀಡಲಾಗಿದೆ. ಜೊತೆಗೆ, ಸಿಎಎ ವಿರುದ್ಧ ಸಾಕಷ್ಟುಸುಳ್ಳು ಸಂಗತಿಗಳನ್ನು ಬರೆಯಲಾಗಿದೆ. ಹಾಗೆಯೇ, ಭಾರತೀಯ ಮುಸ್ಲಿಮರು ಕೋರ್ಟ್‌ಗಳ ತೀರ್ಪುಗಳಿಗೆ ಬೆಲೆ ಕೊಡಬಾರದು. ನಮ್ಮ ಬೆಂಬಲಿಗರೆಲ್ಲ ಶಸ್ತಾ್ರಸ್ತ್ರ ಕೈಗೆತ್ತಿಕೊಂಡು ಹೋರಾಡಬೇಕು ಎಂದೂ ಕರೆ ನೀಡಲಾಗಿದೆ.

ಇತ್ತೀಚೆಗಷ್ಟೇ ದಕ್ಷಿಣ ಭಾರತದ ಕಾಡುಗಳಲ್ಲಿ ಐಸಿಸ್‌ ಉಗ್ರರು ತಮ್ಮ ತರಬೇತಿ ಶಿಬಿರಗಳನ್ನು ನಡೆಸಲು ಸಜ್ಜಾಗಿದ್ದ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ಪೂರ್ಣಗೊಳಿಸಿ ಕೋರ್ಟ್‌ಗೆ ಆರೋಪಪಟ್ಟಿಸಲ್ಲಿಸಿತ್ತು. ಬೆಂಗಳೂರಿನಲ್ಲಿ ಇಬ್ಬರು ಮಾಸ್ಟರ್‌ ಮೈಂಡ್‌ಗಳು ಇಸ್ಲಾಮಿಕ್‌ ಮೂಲಭೂತವಾದದ ಬಗ್ಗೆ ಮುಗ್ಧ ಯುವಕರ ಬ್ರೇನ್‌ವಾಶ್‌ ಮಾಡಿ ಐಸಿಸ್‌ ಸಂಘಟನೆಗೆ ಸೇರಲು ಸಿರಿಯಾಕ್ಕೆ ಕಳಿಸುತ್ತಿರುವ ಬಗ್ಗೆಯೂ ಎನ್‌ಐಎ ಕೇಸು ದಾಖಲಿಸಿತ್ತು. ಅದರ ಬೆನ್ನಲ್ಲೇ ಭಾರತದ ವಿರುದ್ಧ ಸಶಸ್ತ್ರ ಜಿಹಾದ್‌ ನಡೆಸುವ ಮೂಲಕ ಬಾಬ್ರಿ ಧ್ವಂಸಕ್ಕೆ ಸೇಡು ತೀರಿಸಿಕೊಳ್ಳಲು ಐಸಿಸ್‌ ಕರೆ ನೀಡಿರುವುದು ಮಹತ್ವ ಪಡೆದಿದೆ.