ಮೋದಿ ಸರಕಾರ 2.0ಕ್ಕೆ ವರ್ಷ : ಪ್ರಭಾಕರ ಕೋರೆ ಮನದಾಳದ ಮಾತುಗಳು

ಮೋದಿ ಸರಕಾರ 2.0ಕ್ಕೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡಪ್ರಭಕ್ಕೆ ವಿಶೇಷ ಸಂದರ್ಶನದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ  ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ.

interview with rajya sabha member Prabhakar Kore on first anniversary of pm modi govt 2 0

ಬಿಜೆಪಿಯು ಪ್ರಚಂಡ ಬಹುಮತ ಸಾಧಿಸುವುದರೊಂದಿಗೆ ಸತತ ಎರಡನೇ ಅವಧಿಗೆ ಪ್ರಧಾನಮಂತ್ರಿಯಾದ ನರೇಂದ್ರ ಮೋದಿ ಅವರು ವಿಶ್ವದ ಅತ್ಯಂತ ಪ್ರಭಾವಿ ನಾಯಕ. ಅವರ ಆಡಳಿತದ ವೈಖರಿಗೆ ಇಡೀ ಜಗತ್ತೇ ತಲೆದೂಗಿದೆ. ಆಯುಷ್ಮಾನ್‌ ಭಾರತ, ಉಜ್ವಲಾ ಯೋಜನೆ, ಸ್ವಚ್ಛ ಭಾರತ, ಕೊರೋನಾದಂತಹ ಸಂದರ್ಭದಲ್ಲಿ .20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್‌ ಘೋಷಣೆಯಂತಹ ಯೋಜನೆಗಳ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಕಾರ್ಯವೈಖರಿ ಜನಪ್ರಿಯತೆಗೆ ಹಿಡಿದ ಸಾಕ್ಷಿಯಾಗಿದೆ.

ಸಿಎಎ, ರಾಮ ಮಂದಿರ, ತ್ರಿವಳಿ ತಲಾಖ್, ಆರ್ಟಿಕಲ್ 370: ಮೋದಿ 2.0: 1 ವರ್ಷದ ಸಾಧನೆಗಳು!

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇ 30 ರಂದು ಒಂದು ವರ್ಷದ ಆಡಳಿತ ಅವಧಿ ಪೂರ್ಣಗೊಳಿ ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರೂ ಆದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಕನ್ನಡಪ್ರಭಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ.

* ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ಏನು ಹೇಳುತ್ತೀರಿ?
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೊದಲ ಬಾರಿಯ ಆಡಳಿತದ ಆರ್ಥಿಕ ನೀತಿಗಳ ಯೋಜನೆ ಫಲಿತಾಂಶ ಈಗ ಬಂದಿದೆ. ಎರಡನೇ ಅವಧಿಯ ಈ ಒಂದು ವರ್ಷದಲ್ಲಿ ಸುಮಾರು 1400 ಕಾಯ್ದೆಗಳನ್ನು ತಿದ್ದುಪಡಿ ಮಾಡಲಾಗಿದೆ. ಇವು ಪ್ರಯೋಜನಕ್ಕೆ ಇಲ್ಲದ ಕಾಯ್ದೆಗಳಾಗಿದ್ದವು. ಕೃಷಿ ಭೂಮಿಯನ್ನು ಯಾರೂ ಸರಳವಾಗಿ ಖರೀದಿ ಮಾಡುವಂತಿರಲಿಲ್ಲ. ಈಗ ಉದ್ಯಮ ಸ್ಥಾಪನೆಗೆ ಸರಳವಾಗಿ ಖರೀದಿಸಬಹುದಾಗಿದೆ. ಕೃಷಿ ಭೂಮಿಯನ್ನು ಕೃಷಿಯೇತರ ಜಮೀನಾಗಿ ಪರಿವರ್ತನೆ ಮಾಡಬಹುದು. ಏಕ ಗವಾಕ್ಷಿ ಪದ್ಧತಿ ಮೂಲಕ ಕೃಷಿ ಭೂಮಿ ಖರೀದಿ ಸುಲಭವಾಗಿದೆ. ಕಾಯ್ದೆಗಳಲ್ಲಿನ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಮೆರಿಟ್‌ ಆಧಾರದ ಮೇಲೆಯೇ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಸೀಟುಗಳು ಸುಲಭವಾಗಿ ದೊರೆಯುವಂತಾಗಿದೆ. ಉದ್ಯೋಗ ಸೃಷ್ಟಿಯಲ್ಲಿಯೂ ಮೆರಿಟ್‌ ಆಧಾರವಾಗಿಟ್ಟುಕೊಂಡು ಮಾನದಂಡ ಮಾಡಿರುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ.

6 ತಿಂಗಳ ಅವಧಿಯಲ್ಲಿ ಒಂದು ಖಾತೆಯಲ್ಲಿ ಎಷ್ಟುಬಂಡವಾಳ ಇದೆ ಎಂಬ ಕುಂಡಲಿ ಗೊತ್ತಾಗುತ್ತದೆ. ದೇಶದ ಯಾವುದೇ ಭಾಗದ ಜನರು ಎಲ್ಲಿರುತ್ತಾರೋ ಅಲ್ಲಿಯೇ ಪಡಿತರ ಧಾನ್ಯ ಪಡೆಯಬಹುದಾಗಿದೆ. ಹೀಗೆ ಬಹಳಷ್ಟುಬದಲಾವಣೆಯಾಗಿದೆ. ಜನಧನ ಖಾತೆ ಸೇರಿದಂತೆ ಮತ್ತಿತರ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳಯಡಿ ಅನುದಾನ ಅವರ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ. ಇದರಿಂದಾಗಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಲಾಗಿದೆ. ಮಧ್ಯಮವರ್ಗದ ಜನರಿಗೆ ಅನುಕೂಲವಾಗಿದೆ.

* ಕೊರೋನಾ ವೈರಸ್‌ ತಡೆಗೆ ಪ್ರಧಾನಿಯವರು ಕೈಗೊಂಡ ಕ್ರಮಗಳೇನು?
ಪ್ರತಿಪಕ್ಷದವರಿಗೆ ಆಡಳಿತ ಪಕ್ಷದ ವಿರುದ್ಧ ಮಾತನಾಡುವ ನೈತಿಕತೆ ಉಳಿದಿಲ್ಲ. ಇದಕ್ಕೆ ಪ್ರಧಾನಿ ಮೋದಿ ಅವರ ಆಡಳಿತ ವೈಖರಿಯೇ ಕಾರಣ. ದೇಶದ ಸ್ವಾತಂತ್ರ್ಯದ ಬಳಿಕ ಮೋದಿಯಂತಹ ಪ್ರಧಾನಿ ಸಿಕ್ಕಿದ್ದು ನಮ್ಮ ದೇಶದ ಪುಣ್ಯ. ಮಹಾಮಾರಿ ಕೊರೋನಾ ವೈರಸ್‌ ಸೋಂಕು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಪ್ರಧಾನಿ ಮೋದಿ ಅವರು ತೆಗೆದುಕೊಂಡ ಕ್ರಮ ಇಡೀ ಜಗತ್ತಿಗೆ ಮಾದರಿಯಾಗಿದೆ. ನಮ್ಮ ದೇಶದಲ್ಲಿ ತಗಲಿರುವ ಸೋಂಕಿನಷ್ಟೇ ಜನರು ಅಮೆರಿಕ, ಯೂರೋಪ ದೇಶಗಳಲ್ಲಿ ಸಾವನ್ನಪ್ಪಿದ್ದಾರೆ. ಮೋದಿ ಸರ್ಕಾರ ಸರಿಯಾದ ಸಮಯದಲ್ಲಿ ಸರಿಯಾದ ಕ್ರಮ ಕೈಗೊಂಡಿದೆ. ದೇಶದ ಆರ್ಥಿಕ ಸುಧಾರಿಸಿದ ಬಳಿಕ ನಿರುದ್ಯೋಗ ಸಮಸ್ಯೆಯೂ ನಿವಾರಣೆಯಾಗಲಿದೆ. ದೇಶದ ರೈತರಿಗೆ ಉತ್ತಮ ಯೋಜನೆ ನೀಡಲಾಗಿದೆ. ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯಡಿ ಕೇಂದ್ರ ಸರ್ಕಾರ .6 ಸಾವಿರ, ರಾಜ್ಯ ಸರ್ಕಾರ .4 ಸಾವಿರ ಹೀಗೆ .10 ಸಾವಿರ ಸಹಾಯಧನ ನೀಡಲಾಗುತ್ತಿದೆ. ರೈತರು ಯಾರ ಬಳಿಯೂ ಕೇಳಲು ಹೋಗುವುದಿಲ್ಲ. ಅವರು ಸ್ವಾಭಿಮಾನಿಗಳು. ಹೀಗಾಗಿ ರೈತರು ಸ್ವಾಭಿಮಾನದಿಂದ ಬದುಕು ಸಾಗಿಸುತ್ತ ಬಂದಿದ್ದಾರೆ. ಇದರಿಂದಾಗಿ ರೈತರಿಗೆ ಕೇಂದ್ರ ಸರ್ಕಾರ ನೆರವಾಗಿದೆ.

* ಮೋದಿ ಸರ್ಕಾರದಲ್ಲಿ ನೀವೇನಾದರೂ ಸಲಹೆ, ಸೂಚನೆ ಕೊಟ್ಟಿದ್ದೀರಾ?
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದಲ್ಲಿ ನಾವು ಸಲಹೆ, ಸೂಚನೆ ಕೊಟ್ಟಿಲ್ಲ. ನಾವು ಏನು ಸಲಹೆ ನೀಡಬೇಕು ಎನ್ನುವ ವಿಚಾರವನ್ನು ಪ್ರಧಾನಿ ಮೋದಿ ಅವರೇ ನಮ್ಮ ಬಳಿ ಹೇಳುತ್ತಾರೆ. ಹಾಗಾಗಿ, ಅವರ ವಿಚಾರವೇ ನಮ್ಮ ವಿಚಾರವಾಗಿದೆ.

* ನರೇಂದ್ರ ಮೋದಿ ಅವರ ಕಾರ್ಯವೈಖರಿ ಕುರಿತು ಏನು ಹೇಳುತ್ತೀರಿ?
ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಹೊಸ ಶಕ್ತಿ. ಇಡೀ ದೇಶಕ್ಕೆ ಅವರಿಂದ ಒಳ್ಳೆಯ ಮಾರ್ಗದರ್ಶನ ಸಿಗುತ್ತಿದೆ. ಅವರ ಆದೇಶಗಳನ್ನು ದೇಶದ ನೂರಕ್ಕೆ ನೂರಷ್ಟುಜನರು ಪಾಲನೆ ಮಾಡಿದ್ದಾರೆ. ನಾನು ದೇವರನ್ನು ನಂಬುವ ವ್ಯಕ್ತಿಯಲ್ಲ. ಮೋದಿ ಅವರು ಕಾಯಕದ ಮೂಲಕವೇ ಬಂದವರು. ಮಹಾಮಾನವತಾವಾದಿ ಬಸವಣ್ಣನವರ ಪುಸ್ತಕ ಓದಿದ ಬಳಿಕ ಅವರು ಕಾಯಕದ ಮಹತ್ವವನ್ನು ಎಲ್ಲೆಡೆ ಸಾರಿದ್ದಾರೆ. ಭ್ರಷ್ಟಾಚಾರ ಪೂರ್ಣವಾಗಿ ಹೋಗಿದೆಯಂತಲ್ಲ. ಅದಕ್ಕೆ ಕಡಿವಾಣ ಹಾಕಲಾಗಿದೆ. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಸಹಾಯಧನ ಜಮಾ ಆಗುತ್ತಿದೆ. ಕೊರೋನಾ ಸಂದರ್ಭದಲ್ಲಿ ನರೇಂದ್ರ ಮೋದಿ ಹೇಳಿದ ಮಾತನ್ನು ಎಲ್ಲರೂ ಚಾಚೂ ತಪ್ಪದೇ ಪಾಲಿಸಿದ್ದಾರೆ. ಚಪ್ಪಾಳೆ ತಟ್ಟಿದರು. ದೀಪ ಹಚ್ಚಿದರು. ವಿರೋಧ ಪಕ್ಷದ ಶರದ ಪವಾರ್‌ ಕೂಡ ಮೋದಿ ಅವರ ಆದೇಶ ಪಾಲಿಸಿದ್ದಾರೆ. ಮೋದಿ ಅವರಿಂದಲೇ ಈ ದೇಶ ಉದ್ದಾರ ಆಗುತ್ತಿದೆ. ಹಾಗಾಗಿ, ಅವರು ಹೇಳಿದ್ದೇ ವೇದ ವಾಕ್ಯ. ಯಾವುದೇ ಜಾತಿ, ಮತ ಪಂಥ ಭೇದ ಭಾವ ಇಲ್ಲದೇ ಎಲ್ಲ ಜನರು ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಈ ಹಿಂದೆ ಋುಷಿ ಮುನಿಗಳು ಹೇಳಿರುವುದನ್ನು ನಾವು ಕೇಳಿದ್ದೇವೆ. ಈಗ ಮೋದಿ ಹೇಳುವುದನ್ನು ನಾವು ಕೇಳುತ್ತಿದ್ದೇವೆ.

* .20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಯಾವುದಾದರೂ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆಯೇ?
ಸಂಕಷ್ಟದಲ್ಲಿರುವ ಜನತೆಗೆ ಅನುಕೂಲವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು .20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ. ಯಾವುದೇ ಕ್ಷೇತ್ರವನ್ನು ಕಡೆಗಣನೆ ಮಾಡದೇ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದಾರೆ. ಇದು ಪ್ರಪಂಚದ ದೊಡ್ಡ ಪ್ಯಾಕೇಜ್‌. ಜಿಡಿಪಿಯ ಶೇ.10 ರಷ್ಟುಅನುದಾನವನ್ನು ಈ ಪ್ಯಾಕೇಜ್‌ನಲ್ಲಿ ನೀಡಲಾಗಿದೆ. ಉದ್ಯೋಗ ಸೃಷ್ಟಿ, ಮಧ್ಯಮ ಉದ್ಯಮ ಸೇರಿದಂತೆ ಎಲ್ಲ ಉದ್ಯಮಗಳಿಗೆ ಅನುಕೂಲ ಮಾಡಲಾಗಿದೆ.

* ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ನಿಮ್ಮ ಸಲಹೆ ಏನು?
ಕೋವಿಡ್‌ 19 ವೈರಸ್‌ ಸೂಕ್ಷ್ಮವಾಗಿದೆ. ಔಷಧ ಕಂಡುಹಿಡಿಯುವವರಿಗೆ ಈ ವೈರಸ್‌ ಉಳಿಯುತ್ತದೆ. 6 ತಿಂಗಳು ಉಳಿಯಬಹುದು, ಒಂದು ವರ್ಷವೂ ಉಳಿಯಬಹುದು. ಇದು ನಮ್ಮ ಜೀವನದ ಒಂದು ಭಾಗವಾಗಬಹುದು. ಕೊರೋನಾ ಸೋಂಕು ಹರಡದಂತೆ ನಾವು ಜಾಗೃತಿ ವಹಿಸಬೇಕು. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕೊರೋನಾ ಸೋಂಕಿನ ಕುರಿತು ಅರಿವಿನ ಕೊರತೆಯಿದೆ. ಅವರಿಗೆ ಈ ಕುರಿತು ಅರಿವು ಮೂಡಿಸುವ ಕೆಲಸ ನಡೆಯಬೇಕಿದೆ. ಮಾಸ್ಕ್‌ ಧರಿಸುವುದು, ಪದೇ ಪದೆ ಕೈತೊಳೆಯುವುದು, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ನಾವು ಪಾಲನೆ ಮಾಡಬೇಕು. ಸೋಂಕಿನ ಬಗ್ಗೆ ಭಯ ಬೇಡ. ಜಾಗೃತಿ ಹೊಂದುವುದು ಮುಖ್ಯ.

*ನಿಮ್ಮ ಶಿಕ್ಷಣ ಕ್ಷೇತ್ರದ ಮೇಲೂ ಕೊರೋನಾ ಪ್ರಭಾವ ಬೀರಿದೆಯೇ?
ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯ ಶಾಲಾ, ಕಾಲೇಜುಗಳನ್ನು ನಾವು ಆರಂಭಿಸಿಲ್ಲ. ಆದರೆ, ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿಗಳಿಗೆ ಈಗಾಗಲೇ ಆನ್‌ಲೈನ್‌ ಪಾಠ ಬೋಧನೆ ಮಾಡಲಾಗುತ್ತಿದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ ತೊಂದರೆಯಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳ ಬಳಿ ಮೊಬೈಲ್‌ ಸೌಲಭ್ಯ ಇಲ್ಲ. ನಾವು ಬದಲಾವಣೆಯಾಗಿದ್ದೇವೆ. ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿ ಎರಡು ಶಿಫ್ಟ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆದರೆ, ಎಂಜಿನಿಯರಿಂಗ್‌, ಮೆಡಿಕಲ್‌ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ ಬೋಧನೆ ಮಾಡಬಹುದು. ಆದರೆ, ಪ್ರಾಕ್ಟಿಕಲ್‌ ಮಾಡುವುದು ಕಡ್ಡಾಯವಿದೆ. ಇದನ್ನು ಆನ್‌ಲೈನ್‌ನಲ್ಲಿ ಬೋಧನೆ ಮಾಡಲು ಸಾಧ್ಯವಿಲ್ಲ.

* ಕೋವಿಡ್‌ 19 ಸಂದರ್ಭದಲ್ಲಿ ನಿಮ್ಮ ಸಂಸ್ಥೆ ಸರ್ಕಾರದೊಂದಿಗೆ ಯಾವ ರೀತಿ ಕೈಜೋಡಿಸಿವೆ?
ನಾವು ನಮ್ಮ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರತ್ಯೇಕ ವಾರ್ಡ್‌ ರಚಿಸಲಾಗಿತ್ತು. ಬೆಳಗಾವಿ. ಗೋಕಾಕ, ಚಿಕ್ಕೋಡಿ, ಅಂಕೋಲಾ ಸೇರಿದಂತೆ ನಮ್ಮ ಏಳು ಆಸ್ಪತ್ರೆಗಳಲ್ಲಿ ಕೊರೋನಾ ಸಂದರ್ಭದಲ್ಲಿ ನಾವು ಒಂದೂ ದಿನ ಬಂದ್‌ ಮಾಡದೇ ಸೇವೆ ನೀಡಿದ್ದೇವೆ. ಪ್ರತಿಯೊಂದು ಆಪರೇಷನ್‌ ನಮ್ಮ ಆಸ್ಪತ್ರೆಗಳಲ್ಲಿ ನಡೆದಿವೆ. ಕೊರೋನಾ ಸೋಂಕಿತರಿಗೆ ನಮ್ಮ ಆಸ್ಪತ್ರೆಯಲ್ಲಿಯೂ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ದೇವರ ದಯದಿಂದ ನಮ್ಮ ವೈದ್ಯರು ಸೇರಿದಂತೆ ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ. ಪ್ರತಿನಿತ್ಯ ನಮ್ಮ ಆಸ್ಪತ್ರೆಗಳಲ್ಲಿ 80ರಿಂದ 90 ಹೆರಿಗೆ ಆಗಿವೆ. ನಮ್ಮ ಸೇವೆ ನಾವು ಬಂದ್‌ ಮಾಡಿಲ್ಲ.

* ಸಂಸದರ ಅನುದಾನ ಬಳಸಲು ಯಾವುದಕ್ಕೆ ಆದ್ಯತೆ ನೀಡಿದ್ದೀರಿ?
ನಾನು ನನ್ನ ಅನುದಾನವನ್ನು ರಸ್ತೆ, ಸಮುದಾಯ ಭವನಕ್ಕೆ ಕೊಟ್ಟಿಲ್ಲ. ಪ್ರತಿಯೊಂದು ಗ್ರಾಮದಲ್ಲಿ ಗ್ರಂಥಾಲಯ ಸ್ಥಾಪನೆಗೆ ಆದ್ಯತೆ ನೀಡಿದ್ದೇನೆ. ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಹೆಚ್ಚಿಸುವ ಹಿನ್ನೆಲೆಯಲ್ಲಿ ಗ್ರಂಥಾಲಯಕ್ಕೆ ನಾನು ಹೆಚ್ಚಿನ ಆದ್ಯತೆ ನೀಡಿದ್ದೇನೆ. ಯುವಕರಿಗೆ ಜಿಮ್‌ ಹಾಗೂ ಕಟ್ಟಡವನ್ನು ಕೊಟ್ಟಿದ್ದೇನೆ.

ಸಂದರ್ಶನ: ಶ್ರೀಶೈಲ ಮಠದ ಬೆಳಗಾವಿ

Latest Videos
Follow Us:
Download App:
  • android
  • ios