Asianet Suvarna News Asianet Suvarna News

INS Vikrant: ಐಎನ್‌ಎಸ್‌ ವಿಕ್ರಾಂತ್‌ ಆತ್ಮನಿರ್ಭರ ಯುದ್ಧನೌಕೆ: ನಾಯರ್‌

ಕನ್ನಡಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್‌ ನ್ಯೂಸ್‌ನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಚ್ಚಿ ನೌಕಾ ನಿರ್ಮಾಣ ಘಟಕದ ಮುಖ್ಯಸ್ಥ ಮಧು ಎಸ್‌. ನಾಯರ್‌ 

INS Vikrant Atmanirbhar Aircraft Carrier Says Head of Cochin Shipyard Madhu S Nair grg
Author
First Published Sep 2, 2022, 11:27 AM IST

ಮಧು.ಎಸ್‌. ನಾಯರ್‌, ಕೊಚ್ಚಿ ಶಿಪ್‌ಯಾರ್ಡ್‌ ಮುಖ್ಯಸ್ಥ

ಕೊಚ್ಚಿ ನೌಕಾ ನಿರ್ಮಾಣ ಘಟಕದ ಮುಖ್ಯಸ್ಥರಾಗಿರುವ ಮಧು ಎಸ್‌. ನಾಯರ್‌ ಅವರು ಮೊದಲ ಸ್ವದೇಶಿ ವಿಮಾನ ವಾಹಕ ಯುದ್ಧನೌಕೆ ಐಎನ್‌ಎಸ್‌ ವಿಕ್ರಾಂತ್‌ ನಿರ್ಮಾಣದ ಕುರಿತು ಕನ್ನಡಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್‌ ನ್ಯೂಸ್‌ನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇದರೊಂದಿಗೆ ಪರಿಸರ ಸ್ನೇಹಿ, ಮಾನವ ರಹಿತ ಯುದ್ಧ ನೌಕೆಗಳ ನಿರ್ಮಾಣದ ಯೋಜನೆ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ.

ಐಎನ್‌ಎಸ್‌ ವಿಕ್ರಾಂತ್‌ ನಿರ್ಮಾಣ ಯೋಜನೆಯಲ್ಲಿ ಎದುರಾದ ಸವಾಲುಗಳೇನು?

ಯುದ್ಧನೌಕೆಯ ನಿರ್ಮಾಣದಲ್ಲಿ ವಿನ್ಯಾಸ ಹಾಗೂ ಎಂಜಿನಿಯರಿಂಗ್‌ ಅತಿ ಪ್ರಮುಖವಾಗಿರುತ್ತದೆ. ಮೊಟ್ಟಮೊದಲ ದೇಶೀಯ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ ಐಎನ್‌ಎಸ್‌ ವಿಕ್ರಾಂತ್‌ 262 ಮೀ. ಉದ್ದವಾಗಿದೆ. 40,000 ಟನ್‌ ಭಾರ ಹೊರುವ ಸಾಮರ್ಥ್ಯ ಹೊಂದಿದೆ. 2400 ಕಿಲೋವ್ಯಾಟ್‌ ಸಾಮರ್ಥ್ಯದ 4 ಗ್ಯಾಸ್‌ ಟರ್ಬೈನ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಇದರಲ್ಲಿ 18 ಮಹಡಿಗಳಿದ್ದು, 1500ಕ್ಕೂ ಹೆಚ್ಚು ಮಂದಿ ನೆಲೆಸಬಹುದಾಗಿದೆ. ನೌಕೆಯಲ್ಲೇ ಸುಸಜ್ಜಿತ ಆಸ್ಪತ್ರೆಯಿದೆ. ಇದರಲ್ಲಿ ಶಸ್ತ್ರಚಿಕಿತ್ಸೆ, ಸ್ಕಾ್ಯನಿಂಗ್‌ ಸೆಂಟರ್‌ಗಳ ವ್ಯವಸ್ಥೆ ಕೂಡಾ ಇದೆ. ಇಂತಹ ಬೃಹತ್‌ ಹಡಗುಗಳಲ್ಲಿ ಹಲವಾರು ಸಂಕೀರ್ಣ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಈ ಸಂಕೀರ್ಣ ಸಿಸ್ಟಮ್‌ಗಳ ಸಂಘಟಿತ ನಿರ್ವಹಣಾ ವ್ಯವಸ್ಥೆಯನ್ನು ನಿಭಾಯಿಸುವುದು ಸವಾಲಾಗಿತ್ತು. ಆದರೆ ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ.

ನನ್ನ ತವರು ರಾಜ್ಯ ಕರ್ನಾಟಕ, ಚಿಕ್ಕೋಡಿಯಲ್ಲಿ ಕಳೆದ ನೆನಪು ಜೀವಂತ: ವಿದೇಶಾಂಗ ಸಚಿವ

ದೇಶೀಯವಾಗಿ ವಿಮಾನ ವಾಹಕ ಯುದ್ಧನೌಕೆ ನಿರ್ಮಾಣದ ಯೋಚನೆ ಹೇಗೆ ಬಂತು?

ದೇಶೀಯ ಯುದ್ಧನೌಕೆ ನಿರ್ಮಾಣದ ಯೋಚನೆ ಬಂದಿದ್ದು ಭಾರತೀಯ ನೌಕಾಪಡೆಗೆ. ಹೀಗಾಗಿ ಅವರಿಗೆ ಇದರ ಶ್ರೇಯ ಸಲ್ಲಬೇಕು. ಯುದ್ಧನೌಕೆಯ ತೇಲುವ, ಶಕ್ತಿ ಪೂರೈಕೆ ಹಾಗೂ ದಾಳಿ ಮಾಡುವ ಮೂರು ಪ್ರಮುಖ ಭಾಗಗಳನ್ನು ದೇಶೀಯವಾಗಿಯೇ ನಿರ್ಮಾಣ ಮಾಡಬೇಕು ಎಂಬುದು ನೌಕಾಪಡೆಯ ಕನಸಾಗಿತ್ತು. ಮೊಟ್ಟಮೊದಲು ನಾವು ದೇಶೀಯವಾಗಿ ವಾಯು ರಕ್ಷಣಾ ಹಡಗನ್ನು ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ಆದರೆ ಈಗ ನಾವು ಸುಸಜ್ಜಿತ ವಿಮಾನ ವಾಹಕ ಯುದ್ಧನೌಕೆಯನ್ನು ನಿರ್ಮಾಣ ಮಾಡಿದ್ದೇವೆ. ದೆಹಲಿಯಲ್ಲಿರುವ ಭಾರತೀಯ ನೌಕಾಪಡೆಯ ವಿನ್ಯಾಸ ನಿರ್ದೇಶನಾಲಯದಲ್ಲಿ ಈ ಯುದ್ಧನೌಕೆಯ ಮೂಲ ವಿನ್ಯಾಸವನ್ನು ಸಿದ್ಧಪಡಿಸಲಾಗಿದೆ. ನೌಕೆಯ ಕ್ರಿಯಾತ್ಮಕ ವಿನ್ಯಾಸ, ವಿವರವಾದ ಎಂಜಿನಿಯರಿಂಗ್‌ ಹಾಗೂ ನಿರ್ಮಾಣವನ್ನು ಕೊಚ್ಚಿ ನೌಕಾ ನಿರ್ಮಾಣ ಘಟಕದÜಲ್ಲೇ ಮಾಡಲಾಗಿದೆ. ನೌಕೆಯ ವಾಯುಯಾನ ವಿಮಾನ ಸಂಕೀರ್ಣ (ಏವಿಯೇಷನ್‌ ಫ್ಲೈಟ್‌ ಕಾಂಪ್ಲೆಕ್ಸ್‌) ಹೊರದೇಶಗಳಿಂದ ಆಮದು ಮಾಡಿಕೊಂಡಿರುವಂತಹದ್ದು. ಗ್ಯಾಸ್‌ ಟರ್ಬೈನ್‌ಗಳು ವಿದೇಶಿಯಾಗಿದ್ದರೂ, ಹಿಂದೂಸ್ತಾನ್‌ ಏರೋನಾಟಿಕ್ಸ್‌ ಇದನ್ನು ಅಳವಡಿಸಿದೆ. ಇದನ್ನು ಬಿಟ್ಟರೆ ಈ ಯುದ್ಧನೌಕೆಯ ಶೇ.76ರಷ್ಟುಭಾಗವನ್ನು ಆತ್ಮನಿರ್ಭರವಾಗಿ ದೇಶದಲ್ಲೇ ನಿರ್ಮಿಸಲಾಗಿದೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ಬಯಸುತ್ತೇನೆ. ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮೆಟೆಡ್‌, ಬಿಎಚ್‌ಇಎಲ್‌, ಟಾಟಾ ಅಡ್ವಾನ್ಸಡ್‌ ಸಿಸ್ಟಮ್ಸ್‌, ಕಿರ್ಲೋಸ್ಕರ್‌ ಆಯಿಲ್‌ ಆ್ಯಂಡ್‌ ಎಂಜಿನ್ಸ್‌ ಇದಲ್ಲದೇ ಭಾರತದ ಉಕ್ಕು ಪ್ರಾಧಿಕಾರ, ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮೊದಲಾದ ಭಾರತೀಯ ಕಂಪನಿಗಳು ಈ ನೌಕಾ ನಿರ್ಮಾಣದಲ್ಲಿ ಕೈಜೋಡಿಸಿವೆ. ವಿನ್ಯಾಸ ಹಾಗೂ ಎಂಜಿನಿಯರಿಂಗ್‌ ಹಂತ, ತಯಾರಿಕಾ ಹಂತ ಕೊಚ್ಚಿ ನೌಕಾ ನಿರ್ಮಾಣ ಘಟಕದಲ್ಲೇ ನಡೆದಿತ್ತು. 2013ರಲ್ಲಿ ನಾವು ನೌಕಾ ನಿರ್ಮಾಣಕ್ಕೆ ಚಾಲನೆ ನೀಡಿದೆವು. ಅಂದಿನಿಂದ ನೌಕೆ ಸಮುದ್ರದಲ್ಲೇ ಇದೆ. ನಂತರ ವ್ಯವಸ್ಥೆಗಳ ಜೋಡಣೆ, ಅವುಗಳ ಪರೀಕ್ಷೆ ಹಂತ ಕೂಡಾ ನಡೆಯಿತು. ಸೆ.2ರಿಂದ ಯುದ್ಧನೌಕೆ ಅಧಿಕೃತವಾಗಿ ಕಾರ್ಯಾರಂಭ ಮಾಡಲು ಸಿದ್ಧವಾಗಿದೆ.

ಗ್ರೀನ್‌ ಶಿಪ್ಪಿಂಗ್‌ ಪರಿಕಲ್ಪನೆ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತೀರಾ?

ಗ್ರೀನ್‌ ಶಿಪ್ಪಿಂಗ್‌ ಎಂದರೆ ಪರಿಸರ ಸ್ನೇಹಿ ನೌಕೆಗಳನ್ನು ನಿರ್ಮಾಣ ಮಾಡುವುದು. ಸುಸ್ಥಿರ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯತೆಯಾಗಿದೆ. ಹೀಗಾಗಿ ನೌಕೆಗಳಲ್ಲಿ ಕಡಿಮೆ ಕಾರ್ಬನ್‌ ಹೊರಸೂಸುವ ಅಥವಾ ಫಾಸಿಲ್‌ ಇಂಧನಗಳನ್ನು ಬಳಕೆ ಮಾಡದೇ ಇರುವ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು. ಫಾಸಿಲ್‌ ಇಂಧನದ ಬಳಕೆ ಬಿಟ್ಟು ಪರಿಸರ ಸ್ನೇಹಿ ನೌಕೆಗಳನ್ನು ನಿರ್ಮಾಣ ಮಾಡುವುದು ಬಹಳ ವೆಚ್ಚದಾಯಕವಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳು ಈ ತಂತ್ರಜ್ಞಾನ ಬಳಸಿಕೊಳ್ಳುತ್ತಿವೆ. ಈ ತಂತ್ರಜ್ಞಾನ ಅಳವಡಿಕೆಯಿಂದ ಯಾವುದೇ ಆರ್ಥಿಕ ಲಾಭವಿಲ್ಲ. ಆದರೆ ಲಾಭದ ಅಪೇಕ್ಷೆಯಿಲ್ಲದೇ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಈ ವೆಚ್ಚವನ್ನು ಭರಿಸಲು ಮುಂದಾಗಬೇಕು. ಈ ಹಿನ್ನೆಲೆಯಲ್ಲಿ ನಾವು ಮೊಟ್ಟಮೊದಲ ದೇಶೀಯ ಹೈಡ್ರೋಜನ್‌ ಚಾಲಿತ ಕೋಶವಿರುವ ಹಡಗು ನಿರ್ಮಾಣಕ್ಕೂ ಮುಂದಾಗಿದ್ದೇವೆ.

ಕೊಚ್ಚಿ ನೌಕಾ ನಿರ್ಮಾಣ ಘಟಕದ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿ.

ಕೊಚ್ಚಿ ನೌಕಾ ನಿರ್ಮಾಣ ಘಟಕ ಅತ್ಯಂತ ವಿಶ್ವಾಸಾರ್ಹ ಕಂಪನಿ ಎಂದು ಜನಪ್ರಿಯವಾಗಿದೆ. ಯುರೋಪಿನಲ್ಲೂ ಕೊಚ್ಚಿ ನೌಕಾ ನಿರ್ಮಾಣ ಘಟಕ ‘ಅಂಗೀಕೃತ ಬ್ರಾಂಡ್‌’ ಎಂದು ಹೆಸರು ಗಳಿಸಿದೆ. ಕೊಚ್ಚಿಯಲ್ಲಿ 2800 ಕೋಟಿ ಮೊತ್ತದ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೇರಳದಲ್ಲಿ ಮಾತ್ರವಲ್ಲ ದೇಶದ 7 ವಿವಿಧ ಭಾಗಗಳಲ್ಲಿ ನಾವು ನಮ್ಮ ಘಟಕಗಳನ್ನು ಸ್ಥಾಪಿಸಿದ್ದೇವೆ. ಪ್ರತಿಯೊಂದು ಘಟಕವೂ ವಿಶಿಷ್ಟವಾಗಿದೆ. ವಿಶೇಷವಾಗಿ ದೊಡ್ಡ ಹಾಗೂ ಮಧ್ಯಮ ಗಾತ್ರಗಳ ಹಡಗುಗಳ ನಿರ್ಮಾಣಕ್ಕಾಗಿ ಇವುಗಳನ್ನು ನಿರ್ಮಿಸಲಾಗಿದೆ. ಇದಲ್ಲದೇ ನಾವು 2 ಅಂಗಸಂಸ್ಥೆಗಳನ್ನೂ ಹೊಂದಿದ್ದೇವೆ. ಒಂದು ಕರ್ನಾಟಕದ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿದೆ. ಮತ್ತೊಂದು ಕೋಲ್ಕತಾದಲ್ಲಿದೆ. ಈ ಶಿಪ್‌ಯಾರ್ಡ್‌ಗಳಲ್ಲಿ ಸಣ್ಣ ಗಾತ್ರದ ಹಡಗುಗಳ ನಿರ್ಮಾಣಕ್ಕೂ ಅನುಮತಿ ನೀಡುತ್ತೇವೆ. ಇದರಿಂದ ನಾವು ಜನರ ವಿಶ್ವಾಸಾರ್ಹತೆಗಳನ್ನು ಗಳಿಸಬಹುದು ಹಾಗೂ ಸುಲಭವಾಗಿ ಮಾರುಕಟ್ಟೆಯನ್ನೂ ಪ್ರವೇಶಿಸಬಹುದು. ಹಡಗುಗಳ ನಿರ್ಮಾಣಕ್ಕಾಗಿ ನಾವು ಕೊಚ್ಚಿ ಶಿಪ್‌ಯಾರ್ಡ್‌ನಲ್ಲೇ ಪ್ರಮುಖ ಬೇಸ್‌ ಹೊಂದಿದ್ದೇವೆ. ಕೇರಳದ ವೆಲ್ಲಿಂಗ್ಡನ್‌ ದ್ವೀಪದಲ್ಲಿ ಅಂತಾರಾಷ್ಟ್ರೀಯ ಹಡಗು ರಿಪೇರಿ ಸೌಲಭ್ಯವಿದೆ. 3 ವ್ಯಾಪಾರ ಘಟಕಗಳು ಘಟಕಗಳು ಮುಂಬೈ, ಕೋಲ್ಕತಾ ಹಾಗೂ ಪೋರ್ಚ್‌ಬ್ಲೇರ್‌ನಲ್ಲಿದೆ.

ಕೊಚ್ಚಿ ಘಟಕ ಪ್ರಸ್ತುತ ಯಾವ ಯೋಜನೆಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ?

ಭಾರತೀಯ ನೌಕಾಪಡೆಗಾಗಿಯೇ ವಿರೋಧಿಗಳ ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚಿ ನಾಶ ಮಾಡುವ ಸಾಮರ್ಥ್ಯವುಳ್ಳ 8 ಜಲಾಂತರ್ಗಾಮಿ ವಿರೋಧಿ ಯುದ್ಧ ಹಡಗುಗಳು (ಎಎಸ್‌ಡಬ್ಲ್ಯು ಕಾರ್ವೆಟ್ಸ್‌) ನಿರ್ಮಾಣ ಮಾಡುತ್ತಿದ್ದೇವೆ. ಇದು ಸುಮಾರು 6500 ಕೋಟಿ ರು. ಮೌಲ್ಯದ ಯೋಜನೆಯಾಗಿದೆ. ಮುಂದಿನ ಪೀಳಿಗೆಯ 6 ಕ್ಷಿಪಣಿ ಹಡಗುಗಳ ನಿರ್ಮಾಣಕ್ಕೂ ನಾವು ಮುಂದಾಗಿದ್ದೇವೆ. ಇದು ಸುಮಾರು 10,000 ಕೋಟಿ ರು.ಗಳ ಯೋಜನೆಯಾಗಿದೆ. ಯುರೋಪಿನಿಂದಲೂ ನಾವು ಹಲವಾರು ಹಡಗು ನಿರ್ಮಾಣಕ್ಕಾಗಿ ಆರ್ಡರ್‌ ಪಡೆದುಕೊಳ್ಳುತ್ತಿದ್ದೇವೆ. ಇತ್ತೀಚೆಗೆ ಜರ್ಮನಿಯಿಂದ 8 ಸಣ್ಣ ಹಾಗೂ ಮಧ್ಯಮ ಗಾತ್ರದ ಹಡಗುಗಳ ನಿರ್ಮಾಣದ ಆರ್ಡರ್‌ ಸ್ವೀಕರಿಸಿದ್ದೇವೆ. ಈ ಮೂಲಕ ಜರ್ಮನಿಯ ಮಾರುಕಟ್ಟೆಯಲ್ಲೂ ನಾವು ಪ್ರವೇಶ ಪಡೆದಿದ್ದೇವೆ. ಯುರೋಪಿನ ಮಾರುಕಟ್ಟೆಗಳಿಗೆ ಪ್ರವೇಶ ಸಿಗುವುದು ಸುಲಭವಾದ ಮಾತಲ್ಲ. ಅದನ್ನೂ ನಾವು ಸಾಧಿಸಿ ತೋರಿಸಿದ್ದೇವೆ. ಈ ಹಿಂದೆ ಕೊಚ್ಚಿ ನೌಕಾ ನಿರ್ಮಾಣ ಘಟಕದಿಂದಲೇ ನಾವು ಪಶ್ಚಿಮ ಯುರೋಪಿಯನ್‌ ರಾಷ್ಟ್ರಗಳಿಗೆ 45ಕ್ಕೂ ಹೆಚ್ಚು ಹಡಗುಗಳ ಡೆಲಿವರಿ ಮಾಡಿದ್ದೇವೆ. ಈ ಮೂಲಕ ಯುರೋಪಿನಲ್ಲಿ ನಾವು ನಮ್ಮ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಿದ್ದೇವೆ. ಶೀಘ್ರದಲ್ಲೇ ಇದಕ್ಕಿಂತಲೂ ಒಳ್ಳೆಯ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ.

Bengaluru: ಸಿಲಿಕಾನ್ ಸಿಟಿಯಲ್ಲಿ ಯು.ಎಸ್.ಚಾರ್ಜೆ ಡಿ ಅ‍ಫೇರ್ಸ್ ಪೆಟ್ರೀಷಿಯಾ ಲಸಿನಾ

ಮುಂದಿನ 25 ವರ್ಷಗಳಿಗಾಗಿ ಏನೇನು ಯೋಜನೆ ಹಾಕಿಕೊಂಡಿದ್ದೀರಿ?

ನೌಕಾ ನಿರ್ಮಾಣ ಕ್ಷೇತ್ರದಲ್ಲಿ ತಂತ್ರಜ್ಞಾನ ಬಹಳ ವೇಗವಾಗಿ ಬದಲಾಗುತ್ತದೆ. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತ ಹೋದಲ್ಲಿ ಮಾತ್ರ ನಾವು ಮಾರುಕಟ್ಟೆಯಲ್ಲಿ ನೆಲೆ ನಿಲ್ಲಲು ಸಾಧ್ಯವಾಗುತ್ತದೆ. ಹೀಗಾಗಿ ಮುಂದಿನ 25 ವರ್ಷಗಳ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಖಂಡಿತವಾಗಿಯೂ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತ ನಾವು ಇನ್ನೂ ಸಶಕ್ತ ಕಂಪನಿಯಾಗಿ ಬೆಳೆಯುತ್ತೇವೆ ಎಂಬ ವಿಶ್ವಾಸವಿದೆ. ಕೊಚ್ಚಿ ನೌಕಾ ನಿರ್ಮಾಣ ಘಟಕ ಸಾರ್ವಜನಿಕ ವಲಯದ ಘಟಕವಾಗಿದ್ದರೂ ನಾವು ಲಾಭ ಗಳಿಸುವ ನಿಟ್ಟಿನಲ್ಲೂ ಯೋಚಿಸುತ್ತೇವೆ. ಕಳೆದ 30 ವರ್ಷಗಳಿಂದಲೂ ಲಾಭದಾಯಕ ಕಂಪನಿ ಎನಿಸಿಕೊಂಡಿದ್ದೇವೆ. ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರುವುದಕ್ಕೆ ನಮಗೆ ಸರ್ಕಾರದಿಂದ ಅನುದಾನ ಸಿಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಅದು ನಿಜವಲ್ಲ. ತೆರೆದ ಮಾರುಕಟ್ಟೆಯಲ್ಲಿ ಕೂಡಾ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ನಾವು ಸಜ್ಜಾಗಿದ್ದೇವೆ. ಇದಲ್ಲದೇ ಗ್ರೀನ್‌ ಶಿಪ್ಪಿಂಗ್‌ (ಪರಿಸರ ಸ್ನೇಹಿ ಹಡಗುಗಳ ನಿರ್ಮಾಣ), ಮಾನವ ರಹಿತ ಯುದ್ಧ ನೌಕೆಗಳ ನಿರ್ಮಾಣದ ಯೋಜನೆ ಕೂಡಾ ನಮಗಿದೆ. ಇತ್ತೀಚೆಗೆ ನಾವು ನಾರ್ವೆ ದೇಶಕ್ಕೆ 2 ಸ್ವಾಯತ್ತ ಹಡಗುಗಳನ್ನು ಪೂರೈಸಿದ್ದೇವೆ. ಇದರೊಂದಿಗೆ ನಾವು ರಕ್ಷಣಾ ಕಾರ್ಯತಂತ್ರ ಹಾಗೂ ಸುಧಾರಿತ ಘಟಕ ಕೂಡಾ ಸ್ಥಾಪಿಸಿದ್ದೇವೆ.

ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಕೊಚ್ಚಿ ಘಟಕದ ಮೇಲೆ ಹೇಗೆ ಪರಿಣಾಮ ಬೀರಿದೆ?

ನೌಕಾ ನಿರ್ಮಾಣದ ದೃಷ್ಟಿಯಿಂದ ಖಂಡಿತವಾಗಿಯೂ ಕೊಚ್ಚಿ ಘಟಕದ ಮೇಲೆ ಶ್ರೀಲಂಕಾ ಬಿಕ್ಕಟ್ಟು ಧನಾತ್ಮಕ ಪರಿಣಾಮವನ್ನೇ ಬೀರಿದೆ ಎನ್ನಬಹುದು. ಕೋಲಂಬೋದಲ್ಲಿ ದೊಡ್ಡ ಪ್ರಮಾಣದ ನೌಕಾ ನಿರ್ಮಾಣ ಘಟಕವಿತ್ತು. ಅದು ಕೂಡಾ ಅತ್ಯುತ್ತಮ ನೌಕಾ ನಿರ್ಮಾಣ ಘಟಕವಾಗಿದ್ದು, ಹಲವಾರು ಸಂದರ್ಭದಲ್ಲಿ ನಮಗೆ ಪ್ರಬಲ ಪ್ರತಿಸ್ಪರ್ಧಿಯಾಗಿಯೂ ಹೊರಹೊಮ್ಮಿತ್ತು. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿಗೆ ನಾನು ಸಂತಸ ವ್ಯಕ್ತಪಡಿಸುವುದಿಲ್ಲ. ಆದರೆ ವ್ಯಾಪಾರಿ ದೃಷ್ಟಿಕೋನದಿಂದ ನಮಗೆ ಲಾಭವಾಗಿದ್ದಂತೂ ನಿಜ.
 

Follow Us:
Download App:
  • android
  • ios