ಇನ್ನು 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅಬ್ಬರದ ಬ್ಯಾಟಿಂಗ್ ನಡೆಸುತ್ತಿರುವ ಜೇಕ್ ಫ್ರೇಸರ್ ಮೆಗಾರ್ಕ್ ಕೂಡಾ ಚುಟುಕು ವಿಶ್ವಕಪ್ ಟೂರ್ನಿಗೆ ಕಾಂಗರೂ ಪಡೆಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.
ಮೆಲ್ಬರ್ನ್(ಮೇ.01): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಕ್ರಿಕೆಟ್ ಆಸ್ಟ್ರೇಲಿಯಾ 15 ಆಟಗಾರರನ್ನೊಳಗೊಂಡ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದು, ಸ್ಟಾರ್ ಆಲ್ರೌಂಡರ್ ಮಿಚೆಲ್ ಮಾರ್ಷ್‌ಗೆ ನಾಯಕ ಪಟ್ಟ ಕಟ್ಟಿದೆ. ದಶಕದ ಬಳಿಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ತಂಡದಿಂದ ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್ ಹೊರಬಿದ್ದಿದ್ದಾರೆ.
ಇನ್ನು 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅಬ್ಬರದ ಬ್ಯಾಟಿಂಗ್ ನಡೆಸುತ್ತಿರುವ ಜೇಕ್ ಫ್ರೇಸರ್ ಮೆಗಾರ್ಕ್ ಕೂಡಾ ಚುಟುಕು ವಿಶ್ವಕಪ್ ಟೂರ್ನಿಗೆ ಕಾಂಗರೂ ಪಡೆಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಇನ್ನು ಸುಮಾರು 18 ತಿಂಗಳಿನಿಂದ ಆಸೀಸ್ ಟಿ20 ತಂಡದಿಂದ ಹೊರಗುಳಿದಿರುವ ಕ್ಯಾಮರೋನ್ ಗ್ರೀನ್ ಹಾಗೂ ಆಸ್ಟನ್ ಏಗರ್ ಅಚ್ಚರಿಯ ರೀತಿಯಲ್ಲಿ ವಿಶ್ವಕಪ್ ಟೂರ್ನಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವಕಪ್ ಮೇಲೆ ಕಾಲಿಟ್ಟವನಿಗೆ ನಾಯಕ ಪಟ್ಟ: ಇನ್ನು 2023ರಲ್ಲಿ ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಮಣಿಸಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು ಕಾಂಗರೂ ಪಡೆ ಚಾಂಪಿಯನ್ ಆಗುತ್ತಿದ್ದಂತೆಯೇ ಆಸೀಸ್ ಆಟಗಾರರು ವಿಭಿನ್ನ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಈ ಪೈಕಿ ಮಿಚೆಲ್ ಮಾರ್ಷ್ ಏಕದಿನ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಫೋಟೋಗೋ ಫೋಸ್ ನೀಡಿದ್ದರು. ಇದು ಭಾರತದಲ್ಲಿ ಸಾಕಷ್ಟು ಪರವಿರೋಧದ ಚರ್ಚೆಗೆ ಸಾಕ್ಷಿಯಾಗಿತ್ತು. ಇದೀಗ ಮಿಚೆಲ್ ಮಾರ್ಷ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಪಟ್ಟ ಕಟ್ಟಿದೆ.
IPL 2024 ಮುಂಬೈ ಇಂಡಿಯನ್ಸ್ ಪ್ಲೇ-ಆಫ್ ಕನಸು ಭಗ್ನ?
ಕಳೆದೊಂದು ವರ್ಷದಿಂದ ಹಂಗಾಮಿಯಾಗಿ ಆಸೀಸ್ ಟಿ20 ತಂಡವನ್ನು ಮುನ್ನಡೆಸುತ್ತಾ ಬಂದಿರುವ ಮಿಚೆಲ್ ಮಾರ್ಷ್, ಇದೀಗ ಪೂರ್ಣ ಪ್ರಮಾಣದ ಆಸ್ಟ್ರೇಲಿಯಾ ಟಿ20 ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಇನ್ನು 2015 ಹಾಗೂ 2023ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸೀಸ್ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್ ಇದೇ ಮೊದಲ ಬಾರಿಗೆ ಆಸೀಸ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. 2014ರಿಂದೀಚೆಗೆ ಆಸೀಸ್ ಆಡಿದ ಎಲ್ಲಾ(ಏಕದಿನ, ಟಿ20 ಹಾಗೂ ಟೆಸ್ಟ್) ವಿಶ್ವಕಪ್‌ನಲ್ಲೂ ಸ್ಮಿತ್ ಕಾಂಗರೂ ಪಡೆಯ ಅವಿಭಾಜ್ಯ ಅಂಗವಾಗಿದ್ದರು.
ಆಸೀಸ್ ತಂಡದಲ್ಲಿ ಇನ್ನುಳಿದಂತೆ ಯಾವುದೇ ಅಚ್ಚರಿಯ ಆಯ್ಕೆಗಳು ನಡೆದಿಲ್ಲ. ಚಿರಪರಿಚಿತ ಹೆಸರುಗಳೇ ಆಸೀಸ್ ತಂಡದಲ್ಲಿವೆ. ಆರಂಭಿಕರಾಗಿ ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ ಸ್ಥಾನ ಪಡೆದಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಕ್ಯಾಮರೋನ್ ಗ್ರೀನ್, ಆಸ್ಟನ್ ಏಗರ್ ಹಾಗೂ ಟಿಮ್ ಡೇವಿಡ್ ಅವರಂತಹ ವಿಶ್ವಶ್ರೇಷ್ಠ ಆಲ್ರೌಂಡರ್‌ಗಳಿದ್ದಾರೆ. ಇನ್ನು ಬೌಲಿಂಗ್ ವಿಭಾಗ ಕೂಡಾ ಸಾಕಷ್ಟು ಸದೃಢವಾಗಿದ್ದು, ಮಿಚೆಲ್ ಸ್ಟಾರ್ಕ್, ಆಂಡ ಜಂಪಾ, ಪ್ಯಾಟ್ ಕಮಿನ್ಸ್, ನೇಥನ್ ಎಲ್ಲೀಸ್, ಜೋಶ್ ಹೇಜಲ್‌ವುಡ್ ಸ್ಥಾನ ಪಡೆದಿದ್ದಾರೆ. ಇನ್ನು ವಿಕೆಟ್ ಕೀಪರ್ ರೂಪದಲ್ಲಿ ಜೋಶ್ ಇಂಗ್ಲಿಶ್ ಹಾಗೂ ಮ್ಯಾಥ್ಯೂ ವೇಡ್ ಸ್ಥಾನ ಪಡೆದಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:
ಮಿಚೆಲ್ ಮಾರ್ಷ್(ನಾಯಕ), ಡೇವಿಡ್ ವಾರ್ನರ್, ಆಸ್ಟನ್ ಏಗರ್, ಟಿಮ್ ಡೇವಿಡ್, ಪ್ಯಾಟ್ ಕಮಿನ್ಸ್, ನೇಥನ್ ಎಲ್ಲೀಸ್, ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಶ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಮ್ಯಾಥ್ಯೂ ವೇಡ್, ಆಡಂ ಜಂಪಾ.
