ಅನಂತ್‌ನಾಗ್‌ನಲ್ಲಿ ಮಾಜಿ ಸಿಎಂ ಮೆಹಬೂಬಾಗೆ ತ್ರಿಕೋನ ಸವಾಲು!
ಬಿಜೆಪಿ ಮತ್ತು ಪೀಪಲ್ಸ್ ಕಾನ್ಫರೆನ್ಸ್ ಈ ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿಲ್ಲ. ಜೊತೆಗೆ ತಾವು ಯಾರನ್ನು ಬೆಂಬಲಿಸುತ್ತೇವೆ ಎಂದೂ ಸಹ ಪ್ರಕಟಿಸಿಲ್ಲ. ಆದರೆ ಸ್ಥಳೀಯ ಮೂಲಗಳ ಪ್ರಕಾರ ಬಿಜೆಪಿಯು ಜಮ್ಮು ಕಾಶ್ಮೀರ ಅಪ್ನಿ ಪಾರ್ಟಿಯ ಅಭ್ಯರ್ಥಿ ಜಾಫರ್ ಇಕ್ಬಾಲ್ ಮನ್ಹಾಸ್ ಅವರನ್ನು ಪರೋಕ್ಷವಾಗಿ ಬೆಂಬಲಿಸುತ್ತದೆ ಎನ್ನಲಾಗಿದೆ.
ಅನಂತನಾಗ್-ರಾಞ0)ಜೌರಿ (ಮೇ.1) ಜಮ್ಮು ಕಾಶ್ಮೀರದ ಅನಂತ್‌ನಾಗ್ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾದ ದಿನದಿಂದಲೂ ಒಂದಿಲ್ಲೊಂದು ವಿಷಯಕ್ಕೆ ಸುದ್ದಿ ಮಾಡುತ್ತಿದೆ. ಮೊದಲಿಗೆ ಮೈತ್ರಿ ಕುರಿತು ಮೆಹಬೂಬಾ ಅಪಸ್ವರ ಎತ್ತಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ತೊರೆದಿದ್ದ ಗುಲಾಂ ನಬಿ ಆಜಾ಼ದ್ ಚುನಾವಣೆಗೆ ನಿಲ್ಲುವುದಾಗಿ ಪ್ರಕಟಿಸಿದರು. ನಾಮಪತ್ರ ಸಲ್ಲಿಕೆ ಆರಂಭವಾದ ಬಳಿಕ ಅವರು ನಿಲ್ಲುವುದಿಲ್ಲ ಎಂದು ಪ್ರಕಟಿಸಿ ತಮ್ಮ ಪಕ್ಷದಿಂದ ಮತ್ತೊಬ್ಬ ಅಭ್ಯರ್ಥಿಯನ್ನು ನಿಲ್ಲಿಸಿದರು.
ಈ ನಡುವೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದವರೆಗೂ ಮೌನ ವಹಿಸಿದ್ದ ಬಿಜೆಪಿ ತನ್ನ ಪರವಾಗಿ ಅಭ್ಯರ್ಥಿಯನ್ನು ನಿಲ್ಲಿಸಲೇ ಇಲ್ಲ. ಇನ್ನು ಚುನಾವಣೆಗೆ ಕೇವಲ ಒಂದು ವಾರವಿರುವಂತೆ ಕ್ಷೇತ್ರದಲ್ಲಿ ಪ್ರತಿಕೂಲ ಹವಾಮಾನ ಇರುವ ಪರಿಣಾಮ ಹಲವು ಪಕ್ಷಗಳು ಚುನಾವಣೆಯನ್ನು ಮುಂದೂಡಬೇಕೆಂದು ಆಗ್ರಹಿಸುತ್ತಿದ್ದು, ಚುನಾವಣೆ ನಡೆಯುವುದೇ ಅನುಮಾನವೆನಿಸಿದೆ.
ಹೇಗಿದೆ ಮೆಹಬೂಬಾ ಸ್ಥಿತಿ:
ಪಿಡಿಪಿಯಿಂದ ಸ್ಪರ್ಧಿಸಿರುವ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರತಿಷ್ಠೆಗೆ ಬಿದ್ದು ಕಣಕ್ಕಿಳಿದಿದ್ದು, ಗೆಲ್ಲುವ ಮೂಲಕ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಮಾಡಿದ ಅನ್ಯಾಯಕ್ಕೆ ತಕ್ಕ ಉತ್ತರ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಅವರು ಅಬ್ಬರದ ಪ್ರಚಾರದ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.
ಜೊತೆಗೆ ಕಳೆದ ಬಾರಿ ಕೇವಲ 1.65 ಲಕ್ಷ ಇದ್ದ ಮತದಾರರ ಸಂಖ್ಯೆ ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ 19.65 ಲಕ್ಷಕ್ಕೇರಿದ್ದು, 18 ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಅಷ್ಟು ದೊಡ್ಡ ಕ್ಷೇತ್ರವನ್ನು ಪ್ರತಿಕೂಲ ಹವಾಮಾನದಲ್ಲಿ ಸಂಚರಿಸಿ ಮತಯಾಚಿಸುವುದು ಅವರಿಗೆ ಸವಾಲಾಗಿ ಪರಿಣಮಿಸಿದೆ. ಆದರೂ ಉಳಿದ ಅಭ್ಯರ್ಥಿಗಳಿಗೆ ಹೋಲಿಸಿದರೆ ಅವರೇ ಹೆಚ್ಚು ಪರಿಚಿತರಾಗಿದ್ದು, ಹೆಚ್ಚಿನ ಮತ ಸೆಳೆಯುವ ವಿಶ್ವಾಸದಲ್ಲಿದ್ದಾರೆ. ಜೊತೆಗೆ ಈ ಕ್ಷೇತ್ರವು ಮುಫ್ತಿ ಕುಟುಂಬದ ಭದ್ರಕೋಟೆಯಾಗಿದ್ದು, ಕೆಲವು ಸಾಂಪ್ರದಾಯಿಕ ಮತಗಳನ್ನು ಸುಲಭವಾಗಿ ಸೆಳೆಯಬಹುದು. ಆದರೆ ಪ್ರತಿಪಕ್ಷಗಳು ಮೈತ್ರಿ ಮಾಡಿಕೊಂಡಿರುವುದು ಮತ ವಿಭಜನೆ ಮಾಡಬಹುದಾಗಿದ್ದು, ಇವರಿಗೆ ಕಂಟಕವಾಗುವ ಸಾಧ್ಯತೆ ಹೆಚ್ಚಿದೆ.
ನ್ಯಾಷನಲ್ ಕಾನ್ಫರೆನ್ಸ್ ಗೆಲ್ಲಬಲ್ಲದೇ?
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಓಮರ್ ಅಬ್ದುಲ್ಲಾ ಇಂಡಿಯಾ ಕೂಟದಲ್ಲಿ ಪಿಡಿಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಒಪ್ಪಂದವಾಗಿದ್ದರೂ ಅದನ್ನು ಉಲ್ಲಂಘಿಸಿ ಕಾಶ್ಮೀರದ ಮೂರೂ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಏಕಪಕ್ಷೀಯವಾಗಿ ಪ್ರಕಟಿಸಿದರು. ಅದರಲ್ಲಿ ಅನಂತನಾಗ್ ಕ್ಷೇತ್ರದಿಂದ ಪ್ರಸಿದ್ಧ ಬುಡಕಟ್ಟು ನಾಯಕರೂ ಆಗಿರುವ ಮಿಯಾನ್ ಅಲ್ತಾಫ್ ಅಹ್ಮದ್ ಅವರಿಗೆ ಮಣೆ ಹಾಕಿದೆ.
ಕ್ಷೇತ್ರವು ಪ್ರಸ್ತುತ ತನ್ನದೇ ತೆಕ್ಕೆಯಲ್ಲಿದ್ದರೂ ಕಳೆದ ಬಾರಿ ಕೇವಲ 13 ಸಾವಿರ ಮತ ಚಲಾವಣೆಯಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಈ ಬಾರಿ ಒಟ್ಟು ಮತದಾರರ ಸಂಖ್ಯೆಯೇ 19.65 ಲಕ್ಷಕ್ಕೆ ಏರಿಕೆಯಾಗಿದ್ದು, ಮತಜಾಗೃತಿ ಪ್ರಮಾಣವೂ ಹೆಚ್ಚಿರುವುದರಿಂದ ಈ ಬಾರಿ 7 ಲಕ್ಷಕ್ಕೂ ಅಧಿಕ ಮಂದಿ ಮತ ಹಾಕುವ ಸಾಧ್ಯತೆಯಿದೆ. ಅದರಲ್ಲಿ ಮುಫ್ತಿ ಕುಟುಂಬದ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಅವರನ್ನು ಮೀರಿ ಗೆಲ್ಲಲು ಹರಸಾಸಹಸ ಪಡಬೇಕಾಗಿ ಬರಬಹುದು. ಆದರೆ ನ್ಯಾಷನಲ್ ಕಾನ್ಫರೆನ್ಸ್‌ಗೆ ಕಾಂಗ್ರೆಸ್ ಹಾಗೂ ಸಿಪಿಎಂ ಬೆಂಬಲ ನೀಡಿರುವುದು ಮರುಭೂಮಿಯಲ್ಲಿ ಮರೀಚಿಕೆ ಸಿಕ್ಕಂತೆ ಎನ್‌ಸಿಗೆ ಅಲ್ಪ ವರದಾನವಾಗಿದೆ.
ಲೋಕಸಭಾ ಚುನಾವಣೆ 2024;ಅನಂತ್‌ನಾಗ್-ರಜೌರಿ ಕ್ಷೇತ್ರದಲ್ಲಿ ಮತದಾನ ಮುಂದೂಡಿದ ಆಯೋಗ!
ಬಿಜೆಪಿ ಸ್ಥಿತಿ ಏನು?
ಬಿಜೆಪಿ ಮತ್ತು ಪೀಪಲ್ಸ್ ಕಾನ್ಫರೆನ್ಸ್ ಈ ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿಲ್ಲ. ಜೊತೆಗೆ ತಾವು ಯಾರನ್ನು ಬೆಂಬಲಿಸುತ್ತೇವೆ ಎಂದೂ ಸಹ ಪ್ರಕಟಿಸಿಲ್ಲ. ಆದರೆ ಸ್ಥಳೀಯ ಮೂಲಗಳ ಪ್ರಕಾರ ಬಿಜೆಪಿಯು ಜಮ್ಮು ಕಾಶ್ಮೀರ ಅಪ್ನಿ ಪಾರ್ಟಿಯ ಅಭ್ಯರ್ಥಿ ಜಾಫರ್ ಇಕ್ಬಾಲ್ ಮನ್ಹಾಸ್ ಅವರನ್ನು ಪರೋಕ್ಷವಾಗಿ ಬೆಂಬಲಿಸುತ್ತದೆ ಎನ್ನಲಾಗಿದೆ. ಇವರ ಗೆಲುವಿನ ಸಾಧ್ಯತೆ ಬಹಳ ಕ್ಷೀಣವಾಗಿದ್ದರೂ ಪ್ರಮುಖವಾಗಿ ಮೆಹಬೂಬಾ ಮುಫ್ತಿಯನ್ನು ಸೋಲಿಸಬೇಕೆಂಬ ಏಕಮಾತ್ರ ಗುರಿಯೊಂದಿಗೆ ಒಗ್ಗಟ್ಟು ಪ್ರದರ್ಶಿಸಲಿದೆ ಎನ್ನಲಾಗಿದೆ.
ಗುಲಾಂ ನಬಿ ಹಿಂದಕ್ಕೆ:
ಕಾಂಗ್ರೆಸ್‌ಗೆ ಕಾಶ್ಮೀರದಲ್ಲಿ ಬೆನ್ನೆಲುಬಾಗಿದ್ದ ಗುಲಾಂ ನಬಿ ಆಜಾದ್ ಚುನಾವಣೆಗೆ ಇನ್ನು ಕೆಲವೇ ದಿನಗಳಿರುವಾಗ ಪಕ್ಷ ತೊರೆದು ಡೆಮಾಕ್ರೆಟಿಕ್ ಪ್ರೊಗ್ರೆಸಿವ್ ಆಜಾದ್ ಪಾರ್ಟಿಗೆ ಸೇರ್ಪಡೆಯಾದರು. ಬಳಿಕ ಚುನಾವಣೆಗೆ ಸ್ಪರ್ಧಿಸುವುದಾಗಿಯೂ ಘೋಷಿಸಿ ಪ್ರಚಾರವನ್ನೂ ಆರಂಭಿಸಿದ್ದರು. ಆದರೆ ಅಧಿಸೂಚನೆ ಪ್ರಕಟವಾದ ಕೆಲ ದಿನಗಳ ಬಳಿಕ ಅಚ್ಚರಿ ಎಂಬಂತೆ ತಾವು ಕಣದಿಂದ ಹಿಂದಕ್ಕೆ ಸರಿಯುವುದಾಗಿ ತಿಳಿಸಿ ತಮ್ಮ ಪಕ್ಷದಿಂದ ದೆಹಲಿಯ ಪ್ರತಿಷ್ಠಿತ ವಕೀಲ ಮೊಹಮ್ಮದ್ ಸಲೀಂ ಪರೇ ಅವರನ್ನು ಕಣಕ್ಕಿಳಿಸಿದ್ದಾರೆ.
ಸ್ಪರ್ಧೆ ಹೇಗೆ?
ಅನಂತನಾಗ್-ರಾಜೌರಿ ಲೋಕಸಭಾ ಕ್ಷೇತ್ರವು ಪುನರ್‌ವಿಂಗಡಣೆಯಾದ ಬಳಿಕ ಜನಸಂಖ್ಯೆ ಮತ್ತು ವಿಸ್ತೀರ್ಣದಲ್ಲಿ ಬೃಹತ್ ಗಾತ್ರ ಪಡೆದಿದೆ. ಜೊತೆಗೆ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆಯೂ ಏರ್ಪಟ್ಟಿದೆ. ಇವರೆಲ್ಲರಿಗೂ ಸೆಡ್ಡು ಹೊಡೆಯುವಂತೆ ಹವಾಮಾನವೂ ಚುನಾವಣೆಯಲ್ಲಿ ಸ್ಪರ್ಧೆಗಿಳಿದು ಅಬ್ಬರಿಸುತ್ತಿದೆ. ವಿಪರೀತ ಹಿಮಪಾತದಿಂದ ಕ್ಷೇತ್ರದ ಪ್ರಮುಖ ರಸ್ತೆಗಳ ಸಂಪರ್ಕ ಕಡಿತವಾಗಿದ್ದು, ಸಂಚಾರ ಅಸಾಧ್ಯವಾದ ಕಾರಣ ಚುನಾವಣೆಯನ್ನು ಮುಂದೂಡಬೇಕೆಂದು ಕೆಲವು ಪಕ್ಷಗಳು ಆಗ್ರಹಿಸಿವೆ. ಆದರೆ ಮೆಹಬೂಬಾ ಮುಫ್ತಿ ಅದನ್ನು ವಿರೋಧಿಸಿ ಚುನಾವಣೆ ನಡೆಸಬೇಕೆಂದು ಪಟ್ಟು ಹಿಡಿದಿದ್ದಾರೆ. ಚುನಾವಣಾ ಆಯೋಗ ಯಾವುದೇ ಕ್ಷಣದಲ್ಲಿ ಈ ಕುರಿತು ನಿರ್ಧಾರ ಪ್ರಕಟಿಸಲಿದ್ದು, ಚುನಾವಣೆ ನಡೆಯುವುದೇ ಆದಲ್ಲಿ ಚಳಿಯನ್ನು ಮರೆಯುವಂತೆ ಮತದಾನದ ಕಾವು ಏರುವ ನಿರೀಕ್ಷೆಯಿದೆ.
ನಾನಿನ್ನು ಬದುಕಿದ್ದೇನೆ, ಎಸ್‌ಸಿ ಎಸ್‌ಟಿ ಮೀಸಲಾತಿ ಮುಸ್ಲಿಮರಿಗೆ ನೀಡುವ ಕಾಂಗ್ರೆಸ್ ಅಜೆಂಡಾ ವಿರುದ್ಧ ಮೋದಿ ಕಿಡಿ!
ಸ್ಟಾರ್ ಕ್ಷೇತ್ರ: ಅನಂತನಾಗ್-ರಾಜೌರಿ
- ರಾಜ್ಯ: ಜಮ್ಮು-ಕಾಶ್ಮೀರ
- ಮತದಾನದ ದಿನ: ಮೇ.7
- ವಿಧಾನಸಭಾ ಕ್ಷೇತ್ರಗಳು: 18
- ಪ್ರಮುಖ ಅಭ್ಯರ್ಥಿಗಳು:
- ಪಿಡಿಪಿ - ಮೆಹಬೂಬಾ ಮುಫ್ತಿ
- ಎನ್‌ಸಿ - ಮಿಯಾನ್ ಅಲ್ತಾಫ್
- ಜೆಕೆಎಪಿ - ಇಕ್ಬಾಲ್ ಮನ್ಹಾಸ್
- ಡಿಪಿಎಪಿ - ಮೊಹಮ್ಮದ್ ಸಲೀಂ
2019ರ ಫಲಿತಾಂಶ:
- ಗೆಲುವು - ಹಸ್ನೈನ್ ಮಸೂದಿ - ಎನ್‌ಸಿ
- ಸೋಲು - ಘುಲಾಂ ಅಹ್ಮದ್ ಮಿರ್ - ಕಾಂಗ್ರೆಸ್