ನವದೆಹಲಿ/ವುಹಾನ್‌[ಫೆ.01]: ಚೀನಾದ ವುಹಾನ್‌ನಲ್ಲಿ ಕರೋನಾ ವೈರಸ್‌ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿನ ಭಾರತೀಯರನ್ನು ತೆರವುಗೊಳಿಸಿ ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಕಾರ್ಯ ಆರಂಭವಾಗಿದೆ. ಶುಕ್ರವಾರ ಮಧ್ಯಾಹ್ನ ದಿಲ್ಲಿಯಿಂದ ಹೊರಟ ಏರ್‌ ಇಂಡಿಯಾದ 423 ಸೀಟಿನ ಸೂಪರ್‌ ಜಂಬೋ ಬಿ-747 ವಿಶೇಷ ವಿಮಾನವು ಸಂಜೆ ವುಹಾನ್‌ಗೆ ಆಗಮಿಸಿದೆ.

ಭಾರತೀಯರನ್ನು ವುಹಾನ್‌ನಿಂದ ತೆರವುಗೊಳಿಸಿ ಈ ವಿಮಾನದಲ್ಲಿ ಸ್ವದೇಶಕ್ಕೆ ಕರೆತರಲಾಗುತ್ತದೆ. ಶನಿವಾರ ಮಧ್ಯಾಹ್ನ 1ರಿಂದ 2 ಗಂಟೆ ಸುಮಾರಿಗೆ ಸುಮಾರು 400 ಭಾರತೀಯರು ಇರುವ ವಿಮಾನ ಭಾರತಕ್ಕೆ ವಾಪಸು ಬರುವ ನಿರೀಕ್ಷೆಯಿದೆ.

ಈ ನಡುವೆ, ‘ಇನ್ನೊಂದು ವಿಶೇಷ ವಿಮಾನವು ಶನಿವಾರ ದಿಲ್ಲಿಯಿಂದ ವುಹಾನ್‌ಗೆ ತೆರಳುವ ನಿರೀಕ್ಷೆಯಿದೆ’ ಎಂದು ಏರ್‌ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ಈಗಾಗಲೇ ವುಹಾನ್‌ನಲ್ಲಿರುವ 600 ಭಾರತೀಯರನ್ನು ಭಾರತ ಸರ್ಕಾರ ಸಂಪರ್ಕಿಸಿ, ಭಾರತಕ್ಕೆ ಮರಳುವಿಕೆಯ ಕುರಿತ ಅವರ ಪ್ರತಿಕ್ರಿಯೆಯನ್ನು ಪಡೆದಿದೆ.

ಶುಕ್ರವಾರ ತೆರಳಿದ ವಿಶೇಷ ವಿಮಾನದಲ್ಲಿ ರಾಮಮನೋಹರ ಲೋಹಿಯಾ ಆಸ್ಪತ್ರೆಯ 5 ವೈದ್ಯರು, ಒಬ್ಬ ಅರೆವೈದ್ಯಕೀಯ ಸಿಬ್ಬಂದಿ ಇದ್ದಾರೆ. ಜತೆಗೆ ವಿಮಾನದಲ್ಲಿ ಔಷಧಗಳು, ಮಾಸ್ಕ್‌, ಓವರ್‌ಕೋಟ್‌, ಪ್ಯಾಕ್‌ ಮಾಡಿದ ಆಹಾರವಿದೆ. ಎಂಜಿನಿಯರ್‌ಗಳು, ಭದ್ರತಾ ಪಡೆಗಳ ತಂಡ, 5 ಕಾಕ್‌ಪಿಟ್‌ ಸಿಬ್ಬಂದಿ ಹಾಗೂ 15 ಕ್ಯಾಬಿನ್‌ ಕ್ರ್ಯೂ ಸದಸ್ಯರು ಇದರಲ್ಲಿದ್ದಾರೆ. ಏರ್‌ ಇಂಡಿಯಾದ ನಿರ್ದೇಶಕ (ಕಾರ್ಯಾಚರಣೆ) ಕ್ಯಾ

ಅಮಿತಾಭ್‌ ಸಿಂಗ್‌ ಅವರು ತೆರವು ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದ್ದಾರೆ.

‘ಆದರೆ ಸುರಕ್ಷತೆ ದೃಷ್ಟಿಯಿಂದ ವಿಮಾನದಲ್ಲಿನ ಗಗನಸಖಿಯರು ಪ್ರಯಾಣಿಕರ ಬಳಿ ತೆರಳಿ ಆಹಾರ ವಿತರಿಸುವುದಿಲ್ಲ. ಗಗನಸಖಿಯರು ಹಾಗೂ ವಿಮಾನದ ಸಿಬ್ಬಂದಿಯು ಪ್ರಯಾಣಿಕರನ್ನು ಮುಖತಃ ಭೇಟಿ ಮಾಡುವುದಿಲ್ಲ. ಬದಲಾಗಿ ಪ್ರತಿ ಸೀಟಿನಲ್ಲೂ ಫುಡ್‌ ಪ್ಯಾಕೆಟ್‌ ಇಟ್ಟಿರಲಾಗುತ್ತದೆ. ವಿಮಾನದ ಸಿಬ್ಬಂದಿಗೆ ಮಾಸ್ಕ್‌ ಹಾಗೂ ಇತರ ಸುರಕ್ಷತಾ ವ್ಯವಸ್ಥೆ ಮಾಡಲಾಗಿದೆ’ ಎಂದು ಏರ್‌ ಇಂಡಿಯಾ ಅಧ್ಯಕ್ಷ ಅಶ್ವನಿ ಲೋಹಾನಿ ಹೇಳಿದ್ದಾರೆ.

ಏರ್‌ ಇಂಡಿಯಾ ಈ ಹಿಂದೆ ಲಿಬಿಯಾ, ಇರಾಕ್‌, ಯೆಮೆನ್‌, ಕುವೈತ್‌ ಹಾಗೀ ನೇಪಾಳದಲ್ಲಿ ತೆರವು ಕಾರ್ಯಾಚರಣೆ ನಡೆಸಿತ್ತು.