ನವದೆಹಲಿ (ನ. 04): ಮಾಲಿನ್ಯಕಾರಕ ಏಕಬಳಕೆ (ಸಿಂಗಲ್‌ ಯೂಸ್‌) ಪ್ಲಾಸ್ಟಿಕ್‌ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಈಗ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಅ.2 ರಿಂದ ರೈಲುಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧಿಸಿರುವ ಸರ್ಕಾರ, ಜನವರಿ 1 ರಿಂದ ಹಡಗುಗಳಲ್ಲಿ ಈ ಕ್ರಮ ಜಾರಿಗೆ ತರಲು ತೀರ್ಮಾನಿಸಿದೆ.

ಬೇಡದ ಪ್ಲಾಸ್ಟಿಕ್ ದಾಖಲೆಗೆ ಪಾತ್ರವಾದ ದೊಡ್ಡ ಕಂಪನಿ, ನೀವಯ ಖಾಯಂ ಗ್ರಾಹಕರಾ?

ಐಸ್‌ಕ್ರೀಂ ಕಂಟೇನರ್‌ಗಳು, ಹಾಟ್‌ ಡಿಶ್‌ ಕಪ್‌ಗಳು, ತಟ್ಟೆಗಳು, ಹಾಲಿನ ಬಾಟಲಿಗಳು, ಫುಡ್‌ ಪ್ಯಾಕೇಜ್‌, ಟ್ರೇ, ಕಸದ ಬ್ಯಾಗ್‌ಗಳು ಹಾಗೂ ಚಿಫ್ಸ್‌ ಪ್ಯಾಕೆಟ್‌ಗಳು ಹಡಗಿನಲ್ಲಿ ಬಳಸುವ ಏಕಬಳಕೆ ಪ್ಲಾಸ್ಟಿಕ್‌ ಉತ್ಪನ್ನಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಏಕಬಳಕೆ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸುವಂತೆ ಆಗಸ್ಟ್‌ 15 ರಂದು ಮಾಡಿದ ಮನವಿ ಮೇರೆಗೆ ಕೇಂದ್ರ ಸರ್ಕಾರದ ಹಡಗು ಮಹಾನಿರ್ದೇಶನಾಲಯವು ಇವುಗಳ ಮೇಲೆ ನಿಷೇಧ ಹೇರುವ ಆದೇಶ ಹೊರಡಿಸಿದೆ. ಬರೀ ಭಾರತೀಯ ಹಡಗುಗಳಷ್ಟೇ ಅಲ್ಲ, ಭಾರತೀಯ ಜಲಸೀಮೆಯಲ್ಲಿ ಸಂಚರಿಸುವ ವಿದೇಶಿ ಹಡಗುಗಳಿಗೆ ಕೂಡ ಏಕಬಳಕೆ ಪ್ಲಾಸ್ಟಿಕ್‌ ನಿಷೇಧ ಅನ್ವಯವಾಗಲಿದೆ.

ಒಂದು ವೇಳೆ ಆದೇಶ ಉಲ್ಲಂಘಿಸಿದ್ದು ತಪಾಸಣೆ ವೇಳೆ ಕಂಡುಬಂದರೆ ಸಂಬಂಧಿಸಿದ ಹಡಗು ಕಂಪನಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವಶಕ್ಕೆ ಪಡೆದು ಕ್ರಮ ಜರುಗಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.